ADVERTISEMENT

ಪಾಕ್ ಸರ್ಕಾರ- ಸೇನೆ ಸಂಘರ್ಷ ತೀವ್ರ

​ಪ್ರಜಾವಾಣಿ ವಾರ್ತೆ
Published 11 ಜನವರಿ 2012, 19:30 IST
Last Updated 11 ಜನವರಿ 2012, 19:30 IST

ಇಸ್ಲಾಮಾಬಾದ್ (ಪಿಟಿಐ/ಐಎಎನ್‌ಎಸ್): ವಿವಾದಿತ ಮೆಮೊಗೇಟ್ ಹಗರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದಲ್ಲಿ ಸರ್ಕಾರ ಮತ್ತು ಸೇನೆಯ ನಡುವೆ ತೀವ್ರ ಬಿಕ್ಕಟ್ಟು ಉದ್ಭವಿಸಿದ್ದು ಸೇನಾ ಮುಖ್ಯಸ್ಥ ಕಯಾನಿ ಅವರಿಗೆ ಆಪ್ತರೆಂದು ಪರಿಗಣಿಸಲಾದ ರಕ್ಷಣಾ ಕಾರ್ಯದರ್ಶಿ ಲೆಫ್ಟಿನೆಂಟ್ ಜನರಲ್ (ನಿವೃತ್ತ) ಖಾಲಿದ್ ನಯೀಮ್ ಲೋಧಿ ಅವರನ್ನು ಪ್ರಧಾನಿ ಯೂಸುಫ್ ರಜಾ ಗಿಲಾನಿ ಬುಧವಾರ ಹಠಾತ್ ಆಗಿ ವಜಾಗೊಳಿಸಿದ್ದಾರೆ.

ಇತ್ತೀಚೆಗೆ ಸುಪ್ರೀಂಕೋರ್ಟ್‌ಗೆ ಲೋಧಿ ಸಲ್ಲಿಸಿದ ಪ್ರಮಾಣಪತ್ರದಲ್ಲಿ ಸರ್ಕಾರಕ್ಕೆ ಸೇನೆ ಮತ್ತು ಐಎಸ್‌ಐ ಕಾರ್ಯನಿರ್ವಹಣೆಯ ಮೇಲೆ ಯಾವುದೇ ನಿಯಂತ್ರಣವಿಲ್ಲ ಮತ್ತು ಮಿತ ಆಡಳಿತಾತ್ಮಕ ನಿಯಂತ್ರಣ ಮಾತ್ರವಿದೆ ಎಂದು ತಿಳಿಸಿದ್ದು, ಈ ಸಂಬಂಧ ಅವರಿಗೆ ಸರ್ಕಾರ ನೋಟಿಸ್ ಜಾರಿಗೊಳಿಸಿತ್ತು.

ಲೋಧಿ ವಿರುದ್ಧ ಸರ್ಕಾರಿ ಸಂಸ್ಥೆಗಳ ಮಧ್ಯೆ ಒಡಕು ಉಂಟು ಮಾಡಿರುವ ಹಾಗೂ ಅನುಚಿತ ನಡವಳಿಕೆ ಮತ್ತು ಕಾನೂನುಬಾಹಿರ ಕ್ರಮಗಳನ್ನು ಕೈಗೊಂಡಿರುವ ಆರೋಪ ಹೊರಿಸಲಾಗಿದೆ. ಸರ್ಕಾರದ ಅನುಮತಿ ಪಡೆಯದೆ ಮೆಮೊಗೇಟ್ ಬಗ್ಗೆ ಅವರು ಸುಪ್ರೀಂಕೋರ್ಟ್‌ಗೆ ಪ್ರಮಾಣಪತ್ರ ಸಲ್ಲಿಸಿದ್ದರು ಎಂದು ಪ್ರಧಾನಿ ಕಚೇರಿಯ ಪ್ರಕಟಣೆ ತಿಳಿಸಿದೆ.

ADVERTISEMENT

ಲೋಧಿ ವಜಾದ ಬೆನ್ನಲ್ಲೇ ಸರ್ಕಾರ, ರಾವಲ್ಪಿಂಡಿಯ ಸೇನಾ ನೆಲೆಗೆ ಬ್ರಿಗೇಡಿಯರ್ ಸರ್ಫ್ರಾಜ್ ಅಲಿ ಅವರನ್ನು ಮುಖ್ಯಸ್ಥರಾಗಿ ನೇಮಿಸಿದೆ. ಪಾಕಿಸ್ತಾನದಲ್ಲಿ ಸೇನಾ ದಂಗೆ ನಡೆದಾಗಲೆಲ್ಲ ಈ ಸೇನಾ ನೆಲೆ ಪ್ರಮುಖ ಪಾತ್ರ ವಹಿಸಿದೆ ಎನ್ನಲಾಗಿದೆ.

ಸೇನೆ ಮೇಲೆ ಸರ್ಕಾರದ ಹಿಡಿತವನ್ನು ಸಾಬೀತುಪಡಿಸುವಂತೆ ಕೈಗೊಂಡು ಈ ಕ್ರಮಗಳಿಂದ ಸೇನಾ ಮುಖ್ಯಸ್ಥರು ಕೆಂಡಾಮಂಡಲವಾಗಿದ್ದು, ಗಂಭೀರ ಪರಿಣಾಮ ಎದುರಿಸಬೇಕಾದೀತು ಎಂದು ಸರ್ಕಾರಕ್ಕೆ ಎಚ್ಚರಿಸಿದ್ದಾರೆ.
ಬುಧವಾರದ ಬೆಳವಣಿಗೆಯ ಹಿನ್ನೆಲೆಯಲ್ಲಿ ಸೇನಾ ಮುಖ್ಯಸ್ಥ ಜನರಲ್ ಅಶ್ಫಾಕ್ ಪರ್ವೇಜ್ ಕಯಾನಿ ಗುರುವಾರ ಸೇನೆಯ ಹಿರಿಯ ಅಧಿಕಾರಿಗಳ ತುರ್ತು ಸಭೆ ಕರೆದಿದ್ದಾರೆ.

ಮೆಮೊಗೇಟ್ ಹಗರಣವನ್ನು ನಿರ್ವಹಿಸುವಲ್ಲಿ ಮತ್ತು ಐಎಸ್‌ಐ ಮುಖ್ಯಸ್ಥ ಲೆಫ್ಟಿನೆಂಟ್ ಜನರಲ್ ಅಹಮದ್ ಶುಜಾ ಪಾಷಾ ಅವರು ಅಸಾಂವಿಧಾನಿಕ ಮತ್ತು ಅಕ್ರಮ ವಿಧಾನ ಅನುಸರಿಸಿರುವುದಾಗಿ ಸಂದರ್ಶನವೊಂದರಲ್ಲಿ ಪ್ರಧಾನಿ ನೀಡಿದ ಹೇಳಿಕೆಗೂ ಸೇನಾ ಮುಖ್ಯಸ್ಥರು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಬೆಳವಣಿಗೆಯಿಂದ ಸೇನೆ, ಐಎಸ್‌ಐ ಹಾಗೂ ಸರ್ಕಾರದ ನಡುವಿನ ಸಂಘರ್ಷ ಬಹಿರಂಗಗೊಂಡಿದ್ದು, ಪಾಕಿಸ್ತಾನದಲ್ಲಿ ಮತ್ತೆ ರಾಜಕೀಯ ಅಸ್ಥಿರತೆ ತಲೆದೋರುವ ಭೀತಿ ಉಂಟಾಗಿದೆ.

ಈ ಮಧ್ಯೆ, ಅಧ್ಯಕ್ಷ ಆಸೀಫ್ ಅಲಿ ಜರ್ದಾರಿ ವಿರುದ್ಧದ ಭ್ರಷ್ಟಾಚಾರದ ಪ್ರಕರಣಗಳ ಮರು ವಿಚಾರಣೆ ನಡೆಸುವಂತೆ ಸುಪ್ರೀಂಕೋರ್ಟ್ ಸಹ ಸರ್ಕಾರಕ್ಕೆ ಛೀಮಾರಿ ಹಾಕಿದ್ದು, ಜರ್ದಾರಿ ರಾಜೀನಾಮೆಯ ವದಂತಿಯೂ ಕೇಳಿಬಂದಿದೆ.
ಪ್ರಸ್ತುತ ರಾಜಕೀಯ ಸನ್ನಿವೇಶದಲ್ಲಿ ಗಿಲಾನಿ ನೇತೃತ್ವದ ಸರ್ಕಾರ ದುರ್ಬಲವಾಗಿ ಕಾಣುತ್ತಿದ್ದು, ಸೇನಾ ಕ್ರಾಂತಿಯ ಸಾಧ್ಯತೆಯನ್ನೂ ತಳ್ಳಿ ಹಾಕುವಂತಿಲ್ಲ ಎಂದು ಕೆಲವರು ಹೇಳುತ್ತಿದ್ದಾರೆ.

ಈ ಮಧ್ಯೆ ವಿರೋಧ ಪಕ್ಷದ ನಾಯಕ ನವಾಜ್ ಷರೀಫ್ ಅವರು ಪಾಕಿಸ್ತಾನದಲ್ಲಿ  ಶೀಘ್ರ ಚುನಾವಣೆ ನಡೆಸಬೇಕು ಎಂದು ಆಗ್ರಹಿಸಿದ್ದಾರೆ.

ಹಖಾನಿ ಅರ್ಜಿ ಸಲ್ಲಿಕೆ:  `ಮೆಮೊಗೇಟ್~ ಹಗರಣ ಕುರಿತು ತನಿಖೆ ನಡೆಸಲು ನ್ಯಾಯಾಂಗ ಆಯೋಗ ರಚಿಸುವಂತೆ ನೀಡಿರುವ ಆದೇಶವನ್ನು ಪುನರ್‌ಪರಿಶೀಲಿಸುವಂತೆ ಕೋರಿ ಮಾಜಿ ರಾಜತಾಂತ್ರಿಕ ಹುಸೇನ್ ಹಖಾನಿ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ.

ಕಳೆದ ವರ್ಷ ನಡೆದ ಈ ಹಗರಣವನ್ನು ಪಾಕ್-ಅಮೆರಿಕ ವಾಣಿಜ್ಯೋದ್ಯಮಿ ಮನ್ಸೂರ್ ಇಜಾಜ್ ಬಹಿರಂಗಪಡಿಸಿದ ಹಿನ್ನೆಲೆಯಲ್ಲಿ ಅಮೆರಿಕಕ್ಕೆ ಪಾಕ್ ರಾಯಭಾರಿಯಾಗಿದ್ದ ಹಖಾನಿ ಒತ್ತಡದಿಂದ ರಾಜೀನಾಮೆ ಸಲ್ಲಿಸಬೇಕಾಯಿತು.

ಈಗ ಹಖಾನಿ ಅವರು ತಮ್ಮ ವಕೀಲರಾದ ಅಸ್ಮಾ ಜಹಾಂಗೀರ್ ಅವರ ಮೂಲಕ ಸುಪ್ರೀಂಕೋರ್ಟ್ ಮೊರೆ ಹೋಗಿದ್ದಾರೆ.

 ಗಿಲಾನಿ ವಿಶ್ವಾಸ
ಇಸ್ಲಾಮಾಬಾದ್ (ಪಿಟಿಐ): ವಿವಾದಿತ ಮೆಮೊಗೇಟ್ ಹಗರಣಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದಲ್ಲಿ ಸರ್ಕಾರ ಮತ್ತು ಸೇನೆಯ ನಡುವೆ ಉದ್ಭವಿಸಿರುವ ಬಿಕ್ಕಟ್ಟಿನಿಂದ ದೇಶದ ಪ್ರಜಾಪ್ರಭುತ್ವ ವ್ಯವಸ್ಥೆಗೆ ಯಾವುದೇ ಧಕ್ಕೆ ಆಗುವುದಿಲ್ಲ ಎಂದು ಪ್ರಧಾನಿ ಯೂಸುಫ್ ರಜಾ ಗಿಲಾನಿ ಬುಧವಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.