ADVERTISEMENT

ಪೋಲಿಯೊ ಮುಕ್ತ ಭಾರತ: ಶ್ಲಾಘನೆ

​ಪ್ರಜಾವಾಣಿ ವಾರ್ತೆ
Published 13 ಜನವರಿ 2012, 19:30 IST
Last Updated 13 ಜನವರಿ 2012, 19:30 IST

ವಾಷಿಂಗ್ಟನ್  (ಪಿಟಿಐ): ಮಕ್ಕಳ ಅಂಗವೈಕಲ್ಯಕ್ಕೆ ಕಾರಣವಾಗಿ, ಅವರ ವ್ಯಕ್ತಿತ್ವವನ್ನೇ ಹಿಂಡುವ ಪೋಲಿಯೊದಂತಹ ರೋಗದಿಂದ ಭಾರತ ಈಗ ಮುಕ್ತವಾಗಿದ್ದು, ಪೋಲಿಯೊ ನಿರ್ಮೂಲನಾ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಜಾರಿಗೊಳಿಸಿದ ಭಾರತ ಸರ್ಕಾರ ಮತ್ತು ಸರ್ಕಾರೇತರ ಸಂಸ್ಥೆಗಳನ್ನು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲುಎಚ್‌ಒ) ಶ್ಲಾಘಿಸಿದೆ.

ವಿಶ್ವಸಂಸ್ಥೆ, ಡಬ್ಲುಎಚ್‌ಒ, ಬಿಲ್ ಮತ್ತು ಮೆಲಿಂಡಾ ಗೇಟ್ಸ್ ಪ್ರತಿಷ್ಠಾನ ಭಾರತದ ಮೊದಲ ಪೋಲಿಯೊ ಮುಕ್ತ ವರ್ಷವನ್ನು ಸಂಭ್ರಮದಿಂದ ಇಲ್ಲಿ ಆಚರಿಸಿದವು.  ಈ ಮಾರಕ ರೋಗದ ವಿರುದ್ಧ ಹೋರಾಡುವಲ್ಲಿ ಇದೊಂದು ಮಹತ್ವದ ಮೈಲುಗಲ್ಲು ಎಂದು ಈ ಸಂಸ್ಥೆಗಳು ಬಣ್ಣಿಸಿವೆ.

ಈಗ ಪರೀಕ್ಷೆಗೆ ಒಳಬೇಕಾಗಿರುವ ರಕ್ತದ ಮಾದರಿಗಳು `ಋಣಾತ್ಮಕ~ ಫಲಿತಾಂಶ ನೀಡಿದಲ್ಲಿ ಹಿಂದೊಮ್ಮೆ ಜಗತ್ತಿನ ಪೋಲಿಯೊ ಕೇಂದ್ರ ಎಂದು ಬಣ್ಣಿಸಲ್ಪಟ್ಟಿದ್ದ ಭಾರತ ಈ ರೋಗದಿಂದ ಸಂಪೂರ್ಣವಾಗಿ ಮುಕ್ತಗೊಳ್ಳಲಿದೆ.  ಪಾಕಿಸ್ತಾನ, ಆಫ್ಘಾನಿಸ್ತಾನ ಮತ್ತು ನೈಜಿರಿಯಾ ಮಾತ್ರ ಪೋಲಿಯೊ ಪೀಡಿತ ದೇಶಗಳ ಪಟ್ಟಿಯಲ್ಲಿ ಉಳಿದುಕೊಳ್ಳಲಿವೆ ಎಂದು ಡಬ್ಲುಎಚ್‌ಒ ಹೇಳಿದೆ.

ಈ ಸಂದರ್ಭದಲ್ಲಿ ಮಾತನಾಡಿದ ಬಿಲ್ ಗೇಟ್ಸ್, ಪ್ರಧಾನಿ ಮನಮೋಹನ್ ಸಿಂಗ್, ಆರೋಗ್ಯ ಸಚಿವ ಗುಲಾಮ್ ನಬಿ ಆಜಾದ್, ಉತ್ತರ ಪ್ರದೇಶ, ಬಿಹಾರ ಮತ್ತು ಪಶ್ಚಿಮ ಬಂಗಾಳಗಳ ಮುಖ್ಯಮಂತ್ರಿಗಳನ್ನು ಅಭಿನಂದಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.