ಲಂಡನ್ (ಪಿಟಿಐ): ಮ್ಯಾಂಚೆಸ್ಟರ್ ವಸ್ತು ಸಂಗ್ರಹಾಲಯದಲ್ಲಿರುವ 4000 ವರ್ಷಗಳ ಹಿಂದಿನ ಈಜಿಪ್ಟಿನ ಪ್ರತಿಮೆಯೊಂದು ತಂತಾನೇ ಅರ್ಧ ವೃತ್ತಾಕಾರದಲ್ಲಿ ಪರಿಭ್ರಮಿಸುತ್ತಿರುವುದು ಗಮನಕ್ಕೆ ಬಂದಿದ್ದು, ಇದು ಸೋಜಿಗ ಮೂಡಿಸಿದೆ!
ಈಜಿಪ್ಟಿನ ಮಮ್ಮಿಯ ಸಮಾಧಿಯೊಂದರಲ್ಲಿ ಕ್ರಿಸ್ತಪೂರ್ವ 1800ನೇ ಇಸವಿಯಲ್ಲಿ ಪತ್ತೆಯಾದ 10 ಇಂಚು ಎತ್ತರದ ಈ ಪ್ರತಿಮೆಯು 80 ವರ್ಷಗಳಿಂದ ಈ ವಸ್ತುಸಂಗ್ರಹಾಲಯದಲ್ಲಿ ಇದೆ. ಕೆಲವು ವಾರಗಳಿಂದೀಚೆಗೆ ಇದು ಪರಿಭ್ರಮಿಸುತ್ತಿರುವುದು ಮೇಲ್ವಿಚಾರಕರ ಗಮನಕ್ಕೆ ಬಂದಿದೆ. ತಜ್ಞರು ವೀಡಿಯೊ ಚಿತ್ರೀಕರಣ ಮಾಡಿ ಇದನ್ನು ಖಚಿತಪಡಿಸಿಕೊಂಡಿದ್ದು, ಅವರಲ್ಲಿ ಕೂಡ ಈ ವಿದ್ಯಮಾನ ಆಶ್ಚರ್ಯ ಮೂಡಿಸಿದೆ.
ಈ ಪ್ರತಿಮೆಯು ರಾತ್ರಿ ವೇಳೆ ಸ್ಥಿರವಾಗಿ ಇರುತ್ತದೆ. ಆದರೆ ಹಗಲಿನ ವೇಳೆ ನಿಧಾನವಾಗಿ ಪರಿಭ್ರಮಿಸುತ್ತಿದೆ ಎಂದು ವರದಿಗಳು ಹೇಳಿವೆ.
ಆಧ್ಯಾತ್ಮಿಕ ಪವಾಡವೇ ಇದಕ್ಕೆ ಕಾರಣವಿರಬಹುದು ಎಂಬುದು ವಸ್ತು ಸಂಗ್ರಹಾಲಯದ ಮೇಲ್ವಿಚಾರಕ ಕ್ಯಾಂಪ್‌ಬೆಲ್ ಪ್ರೈಸ್ ಅವರ ಅಭಿಪ್ರಾಯ. `ಗಾಜಿನ ಪೆಟ್ಟಿಗೆಯಲ್ಲಿ ಇಡಲಾಗಿರುವ ಈ ಪ್ರತಿಮೆ ತಿರುವುಮುರವಾಗಿದ್ದನ್ನು ಒಂದು ರಾತ್ರಿ ಗಮನಿಸಿದೆ. ಇದು ನನ್ನಲ್ಲಿ ನಿಜಕ್ಕೂ ಅಚ್ಚರಿ ಉಂಟು ಮಾಡಿತು. ನಂತರ ಅದನ್ನು ಸ್ವಸ್ಥಾನಕ್ಕೆ ನಿಲ್ಲಿಸಿದೆ. ಮರುದಿನ ಪುನಃ ಅದು ತಿರುವುಮುರುವಾಗಿ ನಿಂತಿತ್ತು' ಎಂದು ಅವರು ಹೇಳಿದ್ದಾರೆ.
ಆದರೆ ತಜ್ಞರು ಇದಕ್ಕೆ ಹೇಳುವ ವೈಜ್ಞಾನಿಕ ಕಾರಣ ಬೇರೆ ರೀತಿ ಇದೆ. ಇಲ್ಲಿಗೆ ಬರುವ ಪ್ರವಾಸಿಗರು ನಡೆದಾಡುವಾಗ ಉಂಟಾಗುವ ಕಂಪನಗಳು ಈ ಚಲನೆಗೆ ಕಾರಣವಿರಬಹುದು ಎನ್ನುತ್ತಾರೆ ಅವರು. ಆದರೆ ಪ್ರೈಸ್ ಇದನ್ನು ಒಪ್ಪುವುದಿಲ್ಲ.
ಇಲ್ಲಿಗೆ ಈ ಹಿಂದಿನಿಂದಲೂ ಪ್ರವಾಸಿಗಳು ಆಗಮಿಸುತ್ತಿದ್ದು, ಆಗೆಲ್ಲಾ ಇಲ್ಲದ ಕಂಪನದ ಪರಿಣಾಮ ಈಗ ಮಾತ್ರ ಹೇಗೆ ಆಗಲು ಸಾಧ್ಯ? ಅದೂ ಅಲ್ಲದೆ, ಸರಿಯಾಗಿ ಅರ್ಧ ವೃತ್ತಾಕಾರದಲ್ಲಿಯೇ ಅದು ಏಕೆ ಚಲಿಸಬೇಕು?- ಎಂದು ಕೇಳುತ್ತಾರೆ.
ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಬಂದು ಈ ವಿದ್ಯಮಾನವನ್ನು ನೋಡಬೇಕು ಎಂದು ಅವರು ಮನವಿ ಮಾಡಿದ್ದಾರೆ. ಅಲ್ಲದೇ, ಪ್ರತಿಮೆಯ ಈ ಪರಿಭ್ರಮಣದ ನಿಗೂಢತೆಗೆ ಕಾರಣ ಏನೆಂಬುದನ್ನು ಪತ್ತೆಹಚ್ಚಬೇಕು ಎಂದೂ ಅವರು ಕೇಳಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.