ADVERTISEMENT

ಪ್ರಧಾನಿ ಢಾಕಾ ಪ್ರವಾಸ: ತೀಸ್ತಾ ಒಪ್ಪಂದ ಸಾಧ್ಯತೆ ಕಡಿಮೆ

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2011, 10:15 IST
Last Updated 6 ಸೆಪ್ಟೆಂಬರ್ 2011, 10:15 IST

ಢಾಕಾ (ಐಎಎನ್‌ಎಸ್): ಎರಡು ದಿನಗಳ ಬಾಂಗ್ಲಾದೇಶದ ಪ್ರವಾಸಕ್ಕಾಗಿ ಮಂಗಳವಾರ ಇಲ್ಲಿಗೆ ಆಗಮಿಸಿದ ಭಾರತ ಪ್ರಧಾನಿ ಮನಮೋಹನ್ ಸಿಂಗ್ ಅವರನ್ನು ಶಾ ಜಲಾಲ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಧಾನಿ ಶೇಖ್ ಹಸೀನಾ ಆತ್ಮೀಯವಾಗಿ ಬರಮಾಡಿಕೊಂಡರು. ಇದೇ ವೇಳೆ ಪ್ರವಾಸ ಕಾರ್ಯಕ್ರಮದಲ್ಲಿ ತೀಸ್ತಾ ಒಪ್ಪಂದದ ಸಾಧ್ಯತೆ ಕಡಿಮೆ ಇದೆ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.

ಪ್ರಧಾನಿ ಅವರೊಂದಿಗೆ  ಅವರ ಪತ್ನಿ ಗುರುಶರಣ್ ಕೌರ್, ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಮತ್ತು  ಅಸ್ಸಾಂ ಮುಖ್ಯಮಂತ್ರಿ ತರುಣ್ ಗೊಗೋಯ್, ತ್ರಿಪುರಾದ ಮಾಣಿಕ್ ಸರ್ಕಾರ್, ಮಿಜೋರಾಮ್‌ನ ಪುಲಾಲ್‌ತನಾವ್ಲಾ, ಮೇಘಾಲಯದ ಮುಕುಲ್ ಸಂಗ್ಮಾ ಅವರು ಢಾಕಾಗೆ ಆಗಮಿಸಿದ್ದಾರೆ.
 
‘ನಾವು ಒಪ್ಪಂದ (ತೀಸ್ತಾ ನದಿ ನೀರು ಹಂಚಿಕೆ) ಕ್ಕೆ ಸಹಿ ಮಾಡುವ ಸಾಧ್ಯೆ ಕಡಿಮೆ ಇದೆ  ’ ಎಂದು ಅಧಿಕೃತ ಮೂಲಗಳು ತಿಳಿಸಿವೆ. ಆದರೆ ಎರಡು ಕಡೆಗಳಲ್ಲಿರುವ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರಯತ್ನಗಳು ಮಾಡಲಾಗುತ್ತಿದೆ ಎಂದು ಹೇಳಲಾಗಿದೆ.

ಪ್ರವಾಸ ಸಂದರ್ಭದಲ್ಲಿ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ಸಹ ಪ್ರಧಾನಿಗಳೊಂದಿಗೆ ಇರಬೇಕಾಗಿತ್ತು. ಆದರೆ ಅವರು ತೀಸ್ತಾ ಒಪ್ಪಂದ ಅಂತಿಮ ಕರಡಿನಲ್ಲಿ ಕೆಲವು ಅಂಶಗಳು ಪಶ್ಚಿಮ ಬಂಗಾಳದ ಹಿತಾಸಕ್ತಿಗೆ ಮಾರಕವಾಗಿವೆ ಎಂದು ವಿರೋಧಿಸಿ ಪ್ರವಾಸದಿಂದ ಹಿಂದೆ ಸರಿದಿದ್ದಾರೆ ಎನ್ನಲಾಗಿದೆ.

ಭಾರತದ ಸಿಕ್ಕಿಂನಲ್ಲಿ ಹುಟ್ಟಿ ಉತ್ತರ ಬಂಗಾಳ ಮೂಲಕ ಹರಿಯುವ ತೀಸ್ತಾ ನದಿಯು ನಂತರ ಬಾಂಗ್ಲಾದೇಶವನ್ನು ಪ್ರವೇಶಿಸುತ್ತದೆ. ಭಾರತ ಮತ್ತು ಬಾಂಗ್ಲಾದೇಶಗಳು 54 ನದಿಗಳಿಗೆ ಪಾಲುದಾರರಾಗಿವೆ.

‘ಒಪ್ಪಂದದ ಆರಂಭಿಕ ಕರಡು ಮತ್ತು ಅಂತಿಮ ವರದಿಯ ನಡುವೆ ವ್ಯತ್ಯಾಸಗಳು ಇರಲಿಲ್ಲ. ಪಶ್ಚಿಮ ಬಂಗಾಳ ಕೂಡ  25,000 ಕ್ಯೂಸೆಕ್ಸ್ ನೀರು ಹಂಚಿಕೆ ಒಪ್ಪಿತ್ತು ಆದರೆ ಅಂತಿಮ ಸುತ್ತಿನ ಮಾತುಕತೆ ವೇಳೆ 33,000 ರಿಂದ 50,000 ಕ್ಯೂಸೆಕ್ಸ್ ಹಂಚಿಕೆ ಮಾಡುವಂತೆ ಕೇಳಲಾಗಿತ್ತು’ ಎಂದು ಬ್ಯಾನರ್ಜಿ ಅವರ ಸಮೀಪವರ್ತಿಗಳು ಕೋಲ್ಕತ್ತಾದಲ್ಲಿ ತಿಳಿಸಿದ್ದಾರೆ. 

ತೀಸ್ತಾ ಕುರಿತು ಮಾತನಾಡಿದ ಭಾರತ ಅಧಿಕಾರಿಯೊಬ್ಬರು ‘ಖಚಿತ ಅಂಕಿಸಂಖ್ಯೆಗಳಿಲ್ಲ... ಶೇಕಡಾವಾರು ಮಾತ್ರ’ ಮಧ್ಯಂತರ ಒಪ್ಪಂದ ನಂತರ ಶಾಶ್ವತ ಒಪ್ಪಂದದ ಮಾಡಿಕೊಳ್ಳುವ ಉದ್ದೇಶ ಹೊಂದಲಾಗಿದೆ. ಇದು ಪಶ್ಚಿಮ ಬಂಗಾಳದ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದೆ ಆದರೆ ನದಿ ಹುಟ್ಟುವ ಸಿಕ್ಕಿಂ ರಾಜ್ಯದ  ‘ನೀರಿನ ಅಗತ್ಯವನ್ನು ತಿಳಿದುಕೊಳ್ಳಬೇಕಾಗಿರುವುದು ಅಗತ್ಯ’ ಎಂದು ಅವರು ತಿಳಿಸಿದ್ದಾರೆ.

1999ರ ನಂತರ ಭಾರತದ ಪ್ರಧಾನಿಯೊಬ್ಬರು ಇಲ್ಲಿಗೆ ಭೇಟಿ ನೀಡುತ್ತಿರುವುದು ಇದೇ ಮೊದಲ ಸಲವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.