ADVERTISEMENT

ಪ್ರಧಾನಿ ಸಿಂಗ್ ಹುಟ್ಟೂರಿಗೆ ಮೂಲಸೌಕರ್ಯ ಕೊರತೆ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2011, 18:30 IST
Last Updated 13 ಫೆಬ್ರುವರಿ 2011, 18:30 IST

ಇಸ್ಲಾಮಾಬಾದ್ (ಐಎಎನ್‌ಎಸ್): ಭಾರತ ಪ್ರಧಾನಿ ಮನಮೋಹನ್ ಸಿಂಗ್ ಅವರ ಹುಟ್ಟೂರು ಪಾಕಿಸ್ತಾನದ ಪಂಜಾಬ್ ಪ್ರಾಂತ್ಯದ ಗಹ್ ಬೇಗಲ್ ಹಳ್ಳಿ. ಈ ಊರು ಮೂಲಭೂತ ಸೌಕರ್ಯಗಳ ಕೊರತೆಯನ್ನು ಎದುರಿಸುತ್ತಿದೆ.

ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರ ಅಧಿಕಾರಾವಧಿಯಲ್ಲಿ ಇದನ್ನು ಮಾದರಿ ಹಳ್ಳಿ ಎಂದು ಘೋಷಿಸಲಾಗಿತ್ತಾದರೂ, ಈಗ ಇಲ್ಲಿ ಎಲ್ಲಾ ರೀತಿಯ ಅಭಿವೃದ್ಧಿ ಕಾರ್ಯಗಳನ್ನು ಸ್ಥಗಿತಗೊಳಿಸಲಾಗಿದೆ ಎಂದು  ‘ಡಾನ್’ ಪತ್ರಿಕೆ ವರದಿ ಮಾಡಿದೆ.

ಶಾಲೆ, ವೃತ್ತಿ ತರಬೇತಿ ಕೇಂದ್ರ ಹಾಗೂ ಪಶು ಆಸ್ಪತ್ರೆಗಳ ನಿರ್ಮಾಣಕ್ಕೆ ಮಿಲಿಯಗಟ್ಟಲೆ ಹಣವನ್ನು ಬಿಡುಗಡೆಗೊಳಿಸಲಾಗಿದ್ದರೂ ಕೂಡ ಶಾಲಾ ಕಟ್ಟಡಗಳು ಅರ್ಧಕ್ಕೇ ನಿಂತಿವೆ. ಪಶು ಆಸ್ಪತ್ರೆ ಮತ್ತು ವೃತ್ತಿ ತರಬೇತಿ ಕೇಂದ್ರಕ್ಕೆ ಸಿಬ್ಬಂದಿಗಳನ್ನು ನೇಮಿಸಬೇಕಾಗಿದೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.

ಮನಮೋಹನ್ ಸಿಂಗ್ ಅವರ ಮುಂದಾಳತ್ವದಲ್ಲಿ ಭಾರತೀಯ ಇಂಧನ ಸಂಪನ್ಮೂಲ ಸಂಸ್ಥೆಯ ಅಧಿಕಾರಿಗಳು ಇಲ್ಲಿನ ಪ್ರತೀ ಕುಟುಂಬಕ್ಕೂ ಸೋಲಾರ್ ಲೈಟ್‌ಗಳನ್ನು ನೀಡಿದ್ದಲ್ಲದೆ ಬೀದಿಗಳಲ್ಲಿ ಸೋಲಾರ್ ಲೈಟ್‌ಗಳನ್ನು ಅಳವಡಿಸಿದ್ದಾರೆ.

ಜೊತೆಗೆ ಸೋಲಾರ್ ಗೀಸರ್, ಬಯೋ ಗ್ಯಾಸ್ ಪ್ಲಾಂಟ್‌ಗಳನ್ನು ಸ್ಥಾಪಿಸಿದ್ದಾರೆ. ಇಷ್ಟೆಲ್ಲಾ ಆದರೂ ಕೂಡ ಪರ್ಯಾಯ ಇಂಧನ ಮೂಲಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಅಧಿಕಾರಿಗಳು ಯಾವುದೇ ಪಾತ್ರ ವಹಿಸಿಲ್ಲ ಎಂದು ಪತ್ರಿಕೆ ವರದಿಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.