ADVERTISEMENT

ಫುಕುಶಿಮಾದ 3ನೇ ರಿಯಾಕ್ಟರ್‌ನಿಂದ ಭಾರಿ ಅಪಾಯ ನಿರೀಕ್ಷೆ

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2011, 19:30 IST
Last Updated 25 ಮಾರ್ಚ್ 2011, 19:30 IST
ಫುಕುಶಿಮಾದ 3ನೇ ರಿಯಾಕ್ಟರ್‌ನಿಂದ ಭಾರಿ ಅಪಾಯ ನಿರೀಕ್ಷೆ
ಫುಕುಶಿಮಾದ 3ನೇ ರಿಯಾಕ್ಟರ್‌ನಿಂದ ಭಾರಿ ಅಪಾಯ ನಿರೀಕ್ಷೆ   

ಟೋಕಿಯೊ (ಡಿಪಿಎ): ಜಪಾನ್‌ನಲ್ಲಿ ಮಾರ್ಚ್ 11ರಂದು ಸಂಭವಿಸಿದ ಪ್ರಬಲ ಭೂಕಂಪ ಮತ್ತು ಸುನಾಮಿಯಿಂದ ಸತ್ತವರ ಸಂಖ್ಯೆ ಶುಕ್ರವಾರ 10 ಸಾವಿರ ದಾಟಿದ್ದು, ಇನ್ನೂ 17,541 ಮಂದಿ ನಾಪತ್ತೆಯಾಗಿದ್ದಾರೆ. ಒಟ್ಟು ನಷ್ಟದ ಅಂದಾಜು 200 ಶತಕೋಟಿ ಡಾಲರ್ ಎಂದು ಅಂದಾಜಿಸಲಾಗಿದೆ.

ಮಿಯಾಗಿ ಪ್ರಾಂತ್ಯವೊಂದರಲ್ಲೇ 2 ಸಾವಿಕ್ಕೂ ಅಧಿಕ ಮೃತದೇಹಗಳು ಪತ್ತೆಯಾಗಿವೆ. ಮಿಯಾಗಿ ಮತ್ತು ಇವಾಟೆ ಪ್ರಾಂತ್ಯಗಳಲ್ಲಿ ಮೃತದೇಹಗಳನ್ನು ಸಾಮೂಹಿಕವಾಗಿ ಸಮಾಧಿ ಮಾಡಲಾಗುತ್ತಿದೆ.ಈ ಮಧ್ಯೆ, ಫುಕುಶಿಮಾದ 3ನೇ ರಿಯಾಕ್ಟರ್‌ನ ಹೃದಯ ಭಾಗಕ್ಕೆ (ಕೋರ್) ತೀವ್ರ ಹಾನಿಯಾಗಿರುವ ಸಾಧ್ಯತೆಯನ್ನು ಅಧಿಕಾರಿಗಳುಬಹಿರಂಗಪಡಿಸಿದ್ದಾರೆ. ಇದು ನಿಜವೇ ಆಗಿದ್ದರೆ ಇದರಿಂದ ಭಾರಿ ಅನಾಹುತ ಸಂಭವಿಸಬಹುದು ಎಂದು ಭಯಪಡಲಾಗಿದೆ.

ಗುರುವಾರ ಇಲ್ಲಿ ಮೂವರು ಕೆಲಸಗಾರರಿಗೆ ತೀವ್ರ ಸ್ವರೂಪದಲ್ಲಿ ವಿಕಿರಣ ತಗುಲಿದ ಬಳಿಕ ಈ ಶಂಕೆ ಬಲವಾಗಿದೆ. ರಿಯಾಕ್ಟರ್‌ನ ಇಂಧನ ಸರಳುಗಳನ್ನು ಇಡುವ ಕೋರ್, ಪೈಪ್‌ಗಳು, ವಾಲ್ವ್‌ಗಳಿಗೆ ಹಾನಿಯಾಗಿರುವ ಸಾಧ್ಯತೆ ಇದೆ ಎಂದು ಜಪಾನ್‌ನ ಪರಮಾಣು ಮತ್ತು ಕೈಗಾರಿಕಾ ಸುರಕ್ಷತಾ ಇಲಾಖೆಯ ವಕ್ತಾರ ಹಿಡಿಹಿಕೊ ನಿಶಿಯಾಮಾ ತಿಳಿಸಿದ್ದಾರೆ.
ಸಮುದ್ರದ ನೀರಿನ ಬದಲಿಗೆ ಸಿಹಿ ನೀರನ್ನು ರಿಯಾಕ್ಟರ್‌ಗಳಿಗೆ ಎರಚುವ ಕಾರ್ಯ ಆರಂಭವಾಗಿದೆ.

ADVERTISEMENT

ಮತ್ತೊಂದೆಡೆ ಜಪಾನ್‌ನಿಂದ ಆಗಮಿಸಿದ ಹಡಗಿನಲ್ಲಿ ಅತ್ಯಧಿಕ ಪ್ರಮಾಣದಲ್ಲಿ ವಿಕಿರಣ ಅಂಶ ಇರುವುದನ್ನು ಚೀನಾದ ಅಧಿಕಾರಿಗಳು ದೃಢಪಡಿಸಿದ್ದಾರೆ. ಟೋಕಿಯೊದಿಂದ ಚೀನಾದ ವುಕ್ಸಿ ಸಿಟಿಗೆ ಈ ಹಡಗಿನಲ್ಲಿ ಆಗಮಿಸಿದ ಇಬ್ಬರಿಗೆ ವಿಕಿರಣ ಅಂಶ ತಗುಲಿದ್ದನ್ನು ಪತ್ತೆಹಚ್ಚಲಾಗಿದೆ.

ಅಗ್ನಿಶಾಮಕ ಸಿಬ್ಬಂದಿಯ ಕೆಚ್ಚೆದೆ: ಅಣು ಸ್ಥಾವರಗಳು ತೀವ್ರ ಸ್ವರೂಪದಲ್ಲಿ ವಿಕಿರಣ ಸೋರಿಕೆ ಮಾಡುತ್ತಿದ್ದರೂ, ರಿಯಾಕ್ಟರ್‌ಗಳನ್ನು ತಂಪುಗೊಳಿಸುವ ಕಾರ್ಯದಲ್ಲಿ ನಿರತರಾಗಿರುವ ಅಗ್ನಿಶಾಮಕ ಸಿಬ್ಬಂದಿ ಕೆಚ್ಚೆದೆಯ ಸಾಹಸ ಪ್ರದರ್ಶಿಸುತ್ತಿರುವುದು ಗೊತ್ತಾಗಿದೆ. ತಮ್ಮ ಜೀವವನ್ನೇ ಪಣಕ್ಕೆ ಇಟ್ಟು ಅವರು ತಮ್ಮ ಕರ್ತವ್ಯ ನಿಭಾಯಿಸುತ್ತಿದ್ದಾರೆ. ಆದರೆ ಅವರ ಪ್ರಯತ್ನ ಎಲ್ಲಿ ವ್ಯರ್ಥವಾಗಿಬಿಡುತ್ತದೋ ಎಂಬ ಭೀತಿಯೂ ಸದ್ಯ ಎದುರಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.