ADVERTISEMENT

ಫ್ರೆಂಚ್‌, ಇಂಗ್ಲಿಷ್‌ ಶೈಲಿಯ ಕೇಶ ವಿನ್ಯಾಸಕ್ಕೆ ನಿಷೇಧ

ಪಿಟಿಐ
Published 6 ಮಾರ್ಚ್ 2018, 19:30 IST
Last Updated 6 ಮಾರ್ಚ್ 2018, 19:30 IST
ಸಂಗ್ರಹ ಚಿತ್ರ.
ಸಂಗ್ರಹ ಚಿತ್ರ.   

ಪೆಶಾವರ: ಪಾಕಿಸ್ತಾನದ ಖೈಬರ್ ಪಖ್ತುನ್‌ಖ್ವಾ ಪ್ರಾಂತ್ಯದಲ್ಲಿ ಫ್ರೆಂಚ್‌ ಮತ್ತು ಇಂಗ್ಲಿಷ್‌ ಶೈಲಿಯ ಗಡ್ಡ ಮತ್ತು ಕೇಶವಿನ್ಯಾಸವನ್ನು ನಿಷೇಧಿಸಿ ಆದೇಶ ಹೊರಡಿಸಲಾಗಿದೆ. ಇದು ಮುಸ್ಲಿಂ ವಿರೋಧಿ ಶೈಲಿಯಾಗಿದೆ ಎಂಬ ಕಾರಣ ನೀಡಲಾಗಿದೆ.

‘ಖೈಬರ್ ಪಖ್ತುನ್‌ಖ್ವಾ ಸುಲೇಮಾನಿ ಕೇಶ ವಿನ್ಯಾಸ ಸಂಘಟನೆ’ಯ ಅಧ್ಯಕ್ಷ ಷರೀಫ್‌ ಕೆ. ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದರು. ‘ನಮ್ಮ ಈ ಸಂಘಟನೆಯ ಅಡಿಯಲ್ಲಿ ಸುಮಾರು 2ಲಕ್ಷ ಕೇಶ ವಿನ್ಯಾಸಕಾರರು ಕೆಲಸ ಮಾಡುತ್ತಿದ್ದಾರೆ. ಅವರೆಲ್ಲಾ ಈ ಆದೇಶವನ್ನು ಕಟ್ಟುನಿಟ್ಟಿನಿಂದ ಪಾಲಿಸುವಂತೆ ಹೇಳಲಾಗಿದೆ’ ಎಂದರು.

‘ನಾವು ಮುಸ್ಲಿಮರು. ಇಸ್ಲಾಮಿನಲ್ಲಿ ಹೇಳಿರುವ ವಿಷಯವನ್ನಷ್ಟೇ ಪಾಲನೆ ಮಾಡಬೇಕು. ಫ್ರೆಂಚ್‌ ಅಥವಾ ಇಂಗ್ಲಿಷ್‌ ಶೈಲಿಯ ವಿನ್ಯಾಸ ಬೇಕಿದ್ದವರು ಯಾರೂ ನಮ್ಮ ಸಂಘಟನೆಯ ಮಳಿಗೆಗೆ ಭೇಟಿ ಕೊಡಬಾರದು’ ಎಂದ ಅವರು, ಈ ಆದೇಶ ಹೊರಡಿಸುವಂತೆ ತಮಗೆ ಯಾರೇ ಒತ್ತಡ ಹೇರಿಲ್ಲ ಎಂದರು.

ADVERTISEMENT

‘ಯಾವುದೇ ರೀತಿ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ನಮಗಿದೆ’ ಎಂದು ಸಂಘಟನೆಯ ಪ್ರಧಾನ ಕಾರ್ಯದರ್ಶಿ ಆದಿಲ್‌ ಖಾನ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.