ADVERTISEMENT

ಬಂಡುಕೋರರಿಂದ ಐವರು ಪೊಲೀಸ್ ಅಧಿಕಾರಿಗಳ ಹತ್ಯೆ

​ಪ್ರಜಾವಾಣಿ ವಾರ್ತೆ
Published 24 ಜನವರಿ 2011, 19:30 IST
Last Updated 24 ಜನವರಿ 2011, 19:30 IST

ಮನಿಲಾ (ಎಎಫ್‌ಪಿ): ದಶಕಗಳ ಕಾಲದ ಬಂಡಾಯಕ್ಕೆ ಕೊನೆ ಹೇಳಲು ಶಾಂತಿ ಮಾತುಕತೆಗೆ ಒಪ್ಪಿಕೊಂಡ ನಂತರ ಫಿಲಿಪ್ಪೀನ್ಸ್‌ನ ಕಮ್ಯುನಿಸ್ಟ್ ಬಂಡುಕೋರರು ಐವರು ಪೊಲೀಸ್ ಅಧಿಕಾರಿಗಳನ್ನು ಹತ್ಯೆ ಮಾಡಿದ್ದಾರೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

‘ರಿಜಾಲ್ ಪಟ್ಟಣದಲ್ಲಿ ನ್ಯೂ ಪೀಪಲ್ಸ್ ಆರ್ಮಿಯ ಬಂಡುಕೋರರು ನೆಲದಲ್ಲಿ ಹುದುಗಿಸಿಟ್ಟಿದ್ದ ಬಾಂಬ್ ಸ್ಫೋಟಿಸಿದ ನಂತರ ವಾಹನದಲ್ಲಿದ್ದ ಪೊಲೀಸ್ ಅಧಿಕಾರಿಗಳ ಮೇಲೆ ಗುಂಡಿನ ಮಳೆಗರೆದು ಹತ್ಯೆ ಮಾಡಿದರು’ ಎಂದು ಪೊಲೀಸ್ ಮತ್ತು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ. ಈ ಪೊಲೀಸ್ ಅಧಿಕಾರಿಗಳು ತಮ್ಮ ಕರ್ತವ್ಯ ಮುಗಿಸಿಕೊಂಡು ಇಲಾಖೆಯ ವಾಹನದಲ್ಲಿ ವಾಪಸ್ ಆಗುತ್ತಿದ್ದಾಗ ಬಂಡುಕೋರರು ಹಠಾತ್ ದಾಳಿ ನಡೆಸಿದರು.

ಸತ್ತವರಲ್ಲಿ ರಿಜಾಲ್ ಪಟ್ಟಣದ ಪೊಲೀಸ್ ಇನ್ಸಪೆಕ್ಟರ್ ಅಂಟೊನಿಯೊ ರೊಯಿಕೊ, ಪೊಲೀಸ್ ಅಧಿಕಾರಿಯಾಗಿರುವ ಅವರ ಪತ್ನಿ ಸೇರಿದ್ದಾರೆ. ಫೆಬ್ರುವರಿ 15ರಿಂದ 21ರ ವರೆಗೆ ನಾರ್ವೆಯಲ್ಲಿ ಶಾಂತಿ ಮಾತುಕತೆ ನಡೆಸಲು ಒಪ್ಪಿಕೊಂಡ ನಂತರ ಬಂಡುಕೋರರು ಇದೇ ಮೊದಲ ಬಾರಿಗೆ ದಾಳಿ ನಡೆಸಿದ್ದಾರೆ. 2004ರಲ್ಲಿ ಮಾತುಕತೆ ಮುರಿದುಬಿದ್ದ ನಂತರ ಇದೇ ಪ್ರಥಮ ಬಾರಿಗೆ ಮಾತುಕತೆ ಪುನರಾರಂಭಿಸಲು ಎರಡೂ ಕಡೆ ಒಪ್ಪಿಕೊಳ್ಳಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.