ADVERTISEMENT

ಬರಾಕ್‌ಗೆ ವಿಚ್ಛೇದನ ನೀಡಲು ಮುಂದಾಗಿದ್ದ ಮಿಷೆಲ್

​ಪ್ರಜಾವಾಣಿ ವಾರ್ತೆ
Published 17 ಮೇ 2012, 19:30 IST
Last Updated 17 ಮೇ 2012, 19:30 IST

ಲಂಡನ್ (ಪಿಟಿಐ):  ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ಪತ್ನಿ  ಮಿಷೆಲ್ 12 ವರ್ಷಗಳ ಹಿಂದೆ   ಒಬಾಮಗೆ ವಿಚ್ಛೇದನ ನೀಡಲು ಮುಂದಾಗಿದ್ದರು ಎಂಬ ವಿಚಾರ ಈಗ ಬಹಿರಂಗವಾಗಿದೆ.

ಇತ್ತೀಚೆಗೆ ಹೊರಬಂದ ಎಡ್ವರ್ಡ್ ಕ್ಲೆನ್ ಅವರ `ದಿ ಅಮೆಚೂರ್~ ಕೃತಿಯಲ್ಲಿ ಈ ವಿಷಯ ವಿವರಿಸಲಾಗಿದೆ. 2000ನೇ ಇಸ್ವಿಯಲ್ಲಿ ನಡೆದ ಷಿಕಾಗೊ ಚುನಾವಣೆಗೆ ಸ್ಪರ್ಧಿಸಲು ಒಬಾಮ ಉತ್ಸುಕರಾಗಿದ್ದರು. ಆದರೆ,  ಈ ಕ್ಷೇತ್ರದಲ್ಲಿ ರಿಪಬ್ಲಿಕನ್ ಪಕ್ಷದಿಂದ ಒಬಾಮ ಎದುರಾಳಿಯಾಗಿ   ನಾಲ್ಕು ಬಾರಿ ವಿಜೇತರಾಗಿದ್ದ ಬಾಬಿ ರಷ್ ಸ್ಪರ್ಧಿಸಿದ್ದರು.

ಅವರ ವಿರುದ್ಧ ಒಬಾಮ ಗೆಲುವು ಅಸಾಧ್ಯ ಎಂಬ ಭಾವನೆಯಿತ್ತು. ಆದ ಕಾರಣ ಒಬಾಮ ಸ್ಪರ್ಧಿಸುವುದು ಬೇಡ ಎಂದು  ಮಿಷೆಲ್ ಸಲಹೆ ನೀಡಿದ್ದರು ಎನ್ನಲಾಗಿದೆ. ಪತಿ ತಮ್ಮ ಮಾತು ಕೇಳದ ಕಾರಣ ಸಿಟ್ಟಿಗೆದ್ದ ಮಿಷೆಲ್ ವಿಚ್ಛೇದನ ಪತ್ರವನ್ನು ಸಹ ಸಿದ್ಧಪಡಿಸಿದ್ದರು. ಆ ಸಂದರ್ಭದಲ್ಲಿ ಅವರಿಬ್ಬರ ಮದುವೆಯಾಗಿ ಎಂಟು ವರ್ಷಗಳಾಗಿದ್ದವು.

ಚುನಾವಣೆಯಲ್ಲಿ ಪರಾಭವಗೊಂಡ ಬರಾಕ್‌ಗೆ  ಮಿಷೆಲ್ ಸಾಂತ್ವನ ಹೇಳಲಿಲ್ಲ. ಗಾಯದ ಮೇಲೆ ಬರೆ ಎಳೆಯುವಂತೆ ವಿಚ್ಛೇದನ ನೀಡಲು ಮುಂದಾಗಿದ್ದರು. ಇದರಿಂದ ಖಿನ್ನತೆಗೆ ಒಳಗಾಗಿದ್ದ ಒಬಾಮ ಆತ್ಮಹತ್ಯೆ ಯತ್ನಿಸಬಹುದು ಎಂದು ಅವರ ಮಿತ್ರರು ಆತಂಕಗೊಂಡಿದ್ದರು  ಎಂಬ ವಿಷಯವನ್ನು  ಎಡ್ವರ್ಡ್ ಕ್ಲೆನ್ ವಿವರಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.