ADVERTISEMENT

ಬಾಂಗ್ಲಾದೇಶ: ಇಂದು ಚುನಾವಣೆ

​ಪ್ರಜಾವಾಣಿ ವಾರ್ತೆ
Published 4 ಜನವರಿ 2014, 19:30 IST
Last Updated 4 ಜನವರಿ 2014, 19:30 IST

ಢಾಕಾ (ಪಿಟಿಐ): ಪ್ರಮುಖ ವಿರೋಧ ಪಕ್ಷ ಬಾಂಗ್ಲಾದೇಶ ನ್ಯಾಷನಲ್‌ ಪಾರ್ಟಿ­ಯ (ಬಿಎನ್‌ಪಿ) ವಿರೋಧದ ಮಧ್ಯೆ­ಯೂ ಬಾಂಗ್ಲಾದೇಶ ಭಾನು­ವಾರದ ಚುನಾವಣೆಗೆ ಸಜ್ಜಾಗಿದೆ.

ಸಾರ್ವತ್ರಿಕ ಚುನಾವಣೆಯ ಸಂದ­ರ್ಭ­ದಲ್ಲಿ  ಹಿಂಸಾಚಾರ ಮುಂದು­ವರಿ­ದಿದೆ.  ಶನಿವಾರ ನಡೆದ ಗಲಭೆ­ಯಲ್ಲಿ ಇಬ್ಬರು ಮೃತಪ­ಟ್ಟಿದ್ದಾರೆ. ಸತ್ತವ­ರಿಬ್ಬರು ಅವಾಮಿ ಲೀಗ್‌ ಹಾಗೂ ಬಿಎನ್‌ಪಿಗೆ ಸೇರಿದ್ದಾರೆ. ಬಿಎನ್‌ಪಿ  48 ಗಂಟೆಗಳ ಬಂದ್‌ ನಡೆಸಿ ಚುನಾವಣೆಗೆ ತೊಂದರೆ ಮಾಡುವ ಗುರಿ ಇಟ್ಟುಕೊಂಡಿದೆ.

38 ಮತಗಟ್ಟೆಗಳು ಬೆಂಕಿಗಾಹುತಿ: 28 ಜಿಲ್ಲೆಗಳಲ್ಲಿನ 38 ಮತದಾನ ಕೇಂದ್ರಗಳನ್ನು ದುಷ್ಕರ್ಮಿಗಳು ಸುಟ್ಟು ಹಾಕಿದ್ದಾರೆ. ಮತದಾನಕ್ಕೆ ಅಡ್ಡಿ ಉಂಟುಮಾಡುವ ಉದ್ದೇಶದಿಂದಲೇ ಬೆಂಕಿ ಹಚ್ಚಲಾಗಿದೆ. ಬಿಎನ್‌ಪಿ ಹಾಗೂ ಜಮಾತೆ ಕಾರ್ಯಕರ್ತರು ಮತಗಟ್ಟೆಗಳಾಗಿದ್ದ ಶಾಲಾ ಕೊಠಡಿಗಳಿಗೆ ಬೆಂಕಿ ಹಚ್ಚಿದರು ಎಂದು ಶಿಕ್ಷಕಿಯೊಬ್ಬರು ತಿಳಿಸಿದ್ದಾರೆ.

ಬಿಎನ್‌ಪಿ ಭಾನುವಾರ ನಡೆಯುವ ಚುನಾವಣೆಯನ್ನು ಸಂಪೂರ್ಣವಾಗಿ ಬಹಿಷ್ಕರಿಸಿದೆ. ಮತದಾರರು ತಮ್ಮ ಹಕ್ಕು ಚಲಾಯಿಸಬಾರದು ಎಂದು ಮನವಿ ಮಾಡಿದೆ. ಪಕ್ಷದ ಮುಖ್ಯಸ್ಥೆ ಖಲೀದಾ ಜಿಯಾ, ತಮ್ಮನ್ನು ಗೃಹ ಬಂಧನದಲ್ಲಿಟ್ಟುವ ಸರ್ಕಾರದ ಕ್ರಮವನ್ನು ‘ಹೇಡಿಗಳ ಕೃತ್ಯ’ ಎಂದು ಲೇವಡಿ ಮಾಡಿದ್ದಾರೆ.
ಬಿಎನ್‌ಪಿ ಹಾಗೂ ಇತರ ಮಿತ್ರಪಕ್ಷಗಳು ಭಾಗವಹಿಸದಿದ್ದರೂ 300 ಕ್ಷೇತ್ರಗಳ  ಪೈಕಿ  147 ರಲ್ಲಿ ಚುನಾವಣೆ ನಡೆಯಲಿದೆ ಎಂದು ಚುನಾವಣಾ ಆಯೋಗದ ಅಧಿಕಾರಿಗಳು ಹೇಳಿದ್ದಾರೆ. ಮತದಾನಕ್ಕೆ ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.