ADVERTISEMENT

ಬಾಂಬ್ ಸ್ಫೋಟಕ್ಕೆ 28 ಬಲಿ

​ಪ್ರಜಾವಾಣಿ ವಾರ್ತೆ
Published 24 ಜನವರಿ 2011, 19:30 IST
Last Updated 24 ಜನವರಿ 2011, 19:30 IST

ಬಾಗ್ದಾದ್, (ಎಪಿ): ಇರಾಕ್‌ನಲ್ಲಿ ಸೋಮವಾರ ಸಂಭವಿಸಿದ ಮೂರು ಪ್ರತ್ಯೇಕ ಬಾಂಬ್ ದಾಳಿ ಪ್ರಕರಣಗಳಲ್ಲಿ 28 ಮಂದಿ ಶಿಯಾ ಯಾತ್ರಾರ್ಥಿಗಳು ಮತ್ತು ಸೇನೆಯ ಗುಪ್ತಚರ ಅಧಿಕಾರಿ ಸೇರಿ ಎಂಟು ಮಂದಿ ಮೃತಪಟ್ಟಿದ್ದಾರೆ. ಧಾರ್ಮಿಕ ಆಚರಣೆಯಲ್ಲಿ ಪಾಲ್ಗೊಳ್ಳಲು ಆಗಮಿಸಿದ್ದ ಶಿಯಾ ಯಾತ್ರಾರ್ಥಿಗಳನ್ನು ಗುರಿಯಾಗಿಟ್ಟುಕೊಂಡು ಎರಡು ಕಡೆ ನಡೆಸಿದ ಕಾರು ಬಾಂಬ್ ದಾಳಿಯಲ್ಲಿ ಒಟ್ಟು 26 ಮಂದಿ ಮೃತಪಟ್ಟಿದ್ದು 200 ಜನರು ಗಾಯಗೊಂಡಿದ್ದಾರೆ.

ಬಾಗ್ದಾದ್‌ನಿಂದ 90 ಕಿ.ಮೀ  ದೂರದಲ್ಲಿರುವ ಕರ್ಬಾಲಾ ಹೊರವಲಯದಲ್ಲಿ ಯಾತ್ರಿಗಳ ಬಸ್ಸುಗಳನ್ನು ನಿಲ್ಲಿಸಿದ್ದ ಸ್ಥಳದಲ್ಲಿ ಮತ್ತು ಇನ್ನೊಂದು ಕಡೆ ಈ ಸ್ಫೋಟ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಬಸ್ ನಿಲ್ಲಿಸಿದ್ದ ಸ್ಥಳದಲ್ಲಿ 12 ಮತ್ತೊಂದೆಡೆ 14 ಮಂದಿ ಸಾವನ್ನಪ್ಪಿದ್ದಾರೆ. ಅದೇ ಸ್ಥಳದಲ್ಲಿ ಮತ್ತೊಂದು ಸಜೀವ ಬಾಂಬ್ ಸಿಕ್ಕಿತು. ಅದನ್ನು ತಕ್ಷಣವೇ ನಿಷ್ಕ್ರಿಯಗೊಳಿಸಲಾಗಿದೆ.

ಕಳೆದ ವಾರವಷ್ಟೇ ನಡೆದ ಮೂರು ಆತ್ಮಾಹುತಿ ಬಾಂಬ್ ಸ್ಫೋಟಕ್ಕೆ 56 ಮಂದಿ ಬಲಿಯಾಗಿದ್ದರು. ಕರ್ಬಾಲದಲ್ಲಿ ಸೋಮವಾರ ರಾತ್ರಿ ಧಾರ್ಮಿಕ ಕಾರ್ಯಕ್ರಮವಿದೆ. ಇದರಲ್ಲಿ ಪಾಲ್ಗೊಳ್ಳಲು ಸಾವಿರಾರು ಯಾತಾರ್ಥಿಗಳು ಆಗಮಿಸುತ್ತಾರೆ.ಈ ಯಾತ್ರಾರ್ಥಿಗಳನ್ನು  ಗುರಿಯಾಗಿಟ್ಟುಕೊಂಡು ಈ ದಾಳಿ ನಡೆಸಲಾಗಿದೆ.

ಮತ್ತೊಂದು ಪ್ರಕರಣದಲ್ಲಿ, ಶಿಯಾಗಳನ್ನು ಗುರಿಯಾಗಿಸಿಕೊಂಡು ನಡೆಸಿದ ದಾಳಿಯಲ್ಲಿ ಇರಾಕ್ ಸೇನಾಧಿಕಾರಿ ಮತ್ತು ಅವರ ಕಾರು ಚಾಲಕ ಮೃತಪಟ್ಟಿದ್ದು, 8ಮಂದಿ ಗಾಯಗೊಂಡಿರುವುದಾಗಿ ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.