ADVERTISEMENT

ಬೆಂಗಳೂರು: ಕಾನ್ಸುಲ್ ಜನರಲ್ ನೇಮ

​ಪ್ರಜಾವಾಣಿ ವಾರ್ತೆ
Published 12 ಜುಲೈ 2012, 19:30 IST
Last Updated 12 ಜುಲೈ 2012, 19:30 IST

ಜೆರುಸಲೇಂ (ಪಿಟಿಐ): ಇಸ್ರೇಲ್ ಸರ್ಕಾರವು ಬೆಂಗಳೂರಿನಲ್ಲಿ ಹೊಸ ಕಾನ್ಸುಲೇಟ್ ಕಚೇರಿ ತೆರೆಯಲು ಎಲ್ಲ ತಯಾರಿ ಮಾಡಿಕೊಂಡಿದ್ದು, ಹಿರಿಯ ರಾಜತಾಂತ್ರಿಕ ಮೆನಾಕೆಮ್ ಕನಾಫಿ ಅವರನ್ನು ಕಾನ್ಸುಲ್ ಜನರಲ್ ಆಗಿ ನೇಮಿಸಿದೆ. ಆಗಸ್ಟ್ ಕಡೆಯ ವೇಳೆಗೆ ಅವರು ಅಧಿಕಾರ ವಹಿಸಿಕೊಳ್ಳುವ ನಿರೀಕ್ಷೆ ಇದೆ.

ಅತ್ಯಾಧುನಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಉಭಯ ರಾಷ್ಟ್ರಗಳ ನಡುವೆ ಈಗಾಗಲೇ ವೃದ್ಧಿಯಾಗುತ್ತಿರುವ ಬಾಂಧವ್ಯವನ್ನು ಇದು ಇನ್ನಷ್ಟು ಉತ್ತೇಜಿಸುವ ನಿರೀಕ್ಷೆ ಇದೆ.

ಕನಾಫಿ ಅವರು ಪ್ರಸ್ತುತ ವಿದೇಶಾಂಗ ಇಲಾಖೆಯಲ್ಲಿ ದಕ್ಷಿಣ ಆಫ್ರಿಕಾ ವಿದ್ಯಮಾನಗಳ ವಿಭಾಗದ ನಿರ್ದೇಶಕರಾಗಿದ್ದಾರೆ. ವಿಶ್ವಸಂಸ್ಥೆಯ ರಾಜಕೀಯ ವಿದ್ಯಮಾನಗಳ ವಿಭಾಗದಲ್ಲಿ ಸಮಾಲೋಚಕರಾಗಿ ಸೇವೆ ಸಲ್ಲಿಸಿರುವುದು ಸೇರಿದಂತೆ ಹಲವು ಜವಾಬ್ದಾರಿಗಳನ್ನು ನಿಭಾಯಿಸಿದ ಅನುಭವವವನ್ನು ಅವರು ಹೊಂದಿದ್ದಾರೆ.

`ಬೆಂಗಳೂರಿನ ಹೊಸ ಕಾನ್ಸುಲೇಟ್ ಕಚೇರಿಯು ದಕ್ಷಿಣ ಭಾರತದಲ್ಲಿ ನಮ್ಮ ಚಟುವಟಿಕೆಗಳನ್ನು ಪ್ರಚುರ ಪಡಿಸಲು ನೆರವಾಗಲಿದೆ~ ಎಂದು ಕನಾಫಿ ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.ಅತ್ಯಾಧುನಿಕ ತಂತ್ರಜ್ಞಾನದ ಜತೆಗೆ ಕೃಷಿ ಕ್ಷೇತ್ರದಲ್ಲೂ ಪರಸ್ಪರ ಸಹಕಾರಕ್ಕೆ ಇದು ನೆರವು ನೀಡುವ ಆಶಾಭಾವ ಇದೆ. ಪರಸ್ಪರ ಬಂಡವಾಳ ಹೂಡಿಕೆ, ಜಲ ನಿರ್ವಹಣೆ, ಬರಿದಾಗದ ಇಂಧನ ಮೂಲಗಳ ಅಭಿವೃದ್ಧಿ, ಆಂತರಿಕ ಭದ್ರತೆ ಹಾಗೂ ಉಭಯ ರಾಷ್ಟ್ರಗಳ ಜನರನ್ನು ವೈಯಕ್ತಿಕ ಮಟ್ಟದಲ್ಲಿ ಪರಸ್ಪರ ಬೆಸೆಯಲು ಈ ಕೇಂದ್ರ ಪೂರಕವಾಗುತ್ತದೆ ಎಂದೂ ಅವರು ಅಭಿಪ್ರಾಯಪಟ್ಟಿದ್ದಾರೆ.

ವಿದೇಶಾಂಗ ಸಚಿವ ಎಸ್.ಎಂ.ಕೃಷ್ಣ ಅವರು ಜನವರಿಯಲ್ಲಿ ಇಲ್ಲಿಗೆ ಭೇಟಿ ನೀಡಿದ್ದಾಗ, ಬೆಂಗಳೂರಿನಲ್ಲಿ ಕಾನ್ಸುಲೇಟ್ ಕಚೇರಿ ತೆರೆಯುವ ಇಂಗಿತವನ್ನು ಇಸ್ರೇಲ್ ವ್ಯಕ್ತಪಡಿಸಿತ್ತು. ಆಗ ಕೃಷ್ಣ ಅವರು ಇದಕ್ಕೆ ಒಪ್ಪಿಗೆ ನೀಡಿದ್ದರು.

ಬೆಂಗಳೂರಿನಲ್ಲಿ ತನ್ನ ಕಾನ್ಸುಲ್ ಜನರಲ್ ಕಚೇರಿ ಆರಂಭವಾಗುತ್ತಿರುವುದಕ್ಕೆ ಇಸ್ರೇಲ್ ವಿದೇಶಾಂಗ ಸಚಿವ ಅವೋಗ್ಡರ್ ಲಿಬರ್‌ಮ್ಯಾನ್ ಸಂತಸ ವ್ಯಕ್ತಪಡಿಸಿದ್ದಾರೆ.ನವದೆಹಲಿಯಲ್ಲಿ ತನ್ನ ರಾಯಭಾರ ಕಚೇರಿಯನ್ನು ಹೊಂದಿರುವ ಇಸ್ರೇಲ್, ಈ ಮುಂಚೆ ಮುಂಬೈನಲ್ಲಿ ಮಾತ್ರ ಕಾನ್ಸುಲ್ ಜನರಲ್ ಕಚೇರಿ ಹೊಂದಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.