ADVERTISEMENT

ಬೆತ್ಲೆಹೆಮ್: `ಕ್ರಿಸ್‌ಮಸ್' ಸಂಭ್ರಮ

​ಪ್ರಜಾವಾಣಿ ವಾರ್ತೆ
Published 25 ಡಿಸೆಂಬರ್ 2012, 19:59 IST
Last Updated 25 ಡಿಸೆಂಬರ್ 2012, 19:59 IST

ಬೆತ್ಲೆಹೆಮ್ (ಎಪಿ): ಏಸು ಕ್ರಿಸ್ತನ ಜನ್ಮ ಸ್ಥಳ ಬೆತ್ಲೆಹೆಮ್‌ನಲ್ಲಿ ಅಪಾರ ಸಂಖ್ಯೆಯಲ್ಲಿ ಸೇರಿದ್ದ ಜನರು ಸಂಭ್ರಮ, ಸಡಗರದಿಂದ ಕ್ರಿಸ್‌ಮಸ್ ಆಚರಿಸಿದರು.

ವಿಶ್ವದ ವಿವಿಧೆಡೆಯಿಂದ ಆಗಮಿಸಿದ ಜನರು ಬೆತ್ಲೆಹೆಮ್‌ನ ಮ್ಯಾಂಗರ್ ಸ್ಕ್ವೇರ್‌ನಲ್ಲಿ ಜಮಾಯಿಸಿದ್ದರು. ಏಸುವಿನ ಜನನ ಸ್ಥಳ ಎಂದು ನಂಬಲಾದ ಚರ್ಚ್‌ನ ಹೊರಗೆ ಸೇರಿದ್ದ ಸಾವಿರಾರು ಜನರಲ್ಲಿ ಸಂಭ್ರಮ ಮನೆ ಮಾಡಿತ್ತು.

ಕ್ಯಾಥೊಲಿಕ್ ಪಂಗಡದ ಪ್ರಧಾನ ಬಿಷಪ್ ಫೌಡ್ ತ್ವಾಲ್ ಅವರಿಂದ ಆಶೀರ್ವಾದ ಪಡೆಯಲು ಹಾತೊರೆಯುತ್ತಿದ್ದರು.

ವಾದ್ಯಗೋಷ್ಠಿ ತಂಡಗಳು ರಸ್ತೆಗಳಲ್ಲಿ ಸಂಚರಿಸಿ ಕ್ರಿಸ್ತ ಸ್ತುತಿ ಗೀತೆಗಳನ್ನು ಹಾಡಿ ನಲಿದವು. ಮಕ್ಕಳು ಆಡಂಬರದ ಮತ್ತು ಸಾಂಟಾಕ್ಲಾಸ್ ಉಡುಪುಧಾರಿಗಳಾಗಿ ಗಮನ ಸೆಳೆದರು.

ಶಾಂತಿಗೆ ಕರೆ: ಕ್ಯಾಥೊಲಿಕ್ ಸೇಂಟ್ ಕ್ಯಾಥರಿನ್ ಚರ್ಚ್‌ನಲ್ಲಿ ಭಕ್ತರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನ ಬಿಷಪ್ ತ್ವಾಲ್, ಶಾಂತಿ ನೆಲೆಸಲು ಶ್ರಮಿಸುವಂತೆ ಕರೆ ನೀಡಿದರು.

`ಅಶಾಂತ ಸ್ಥಿತಿಯಲ್ಲಿರುವ ಮಧ್ಯಪ್ರಾಚ್ಯದಲ್ಲಿ ಶಾಂತಿ ನೆಲೆಸಿ, ಸಾಮರಸ್ಯ ಮೂಡಬೇಕು ಎಂಬುದು ಎಲ್ಲರ ಪ್ರಾರ್ಥನೆ ಆಗಿದೆ. ಇಸ್ರೇಲ್- ಪ್ಯಾಲಸ್ಟೈನ್ ನಡುವಿನ ಸಂಘರ್ಷವು ಅಂತ್ಯವಾಗಬೇಕು. ಇದಕ್ಕಾಗಿ ವಿಶೇಷ ಪ್ರಯತ್ನಗಳು ನಡೆಯಬೇಕು' ಎಂದು ತ್ವಾಲ್ ಮನವಿ ಮಾಡಿಕೊಂಡರು.

`ಈ ಪವಿತ್ರ ಸ್ಥಳದಲ್ಲಿ ನ್ಯಾಯ ಮತ್ತು ಶಾಂತಿಯಿಂದ ಮಾತ್ರ ಸ್ಥಿರತೆಯನ್ನು ಕಾಣಲು ಸಾಧ್ಯ. ಈ ಅಂಶಗಳನ್ನು ಸರ್ವದಾ ಪಾಲಿಸಿದರೆ ಜಾಗತಿಕ ಮಟ್ಟದಲ್ಲೂ ಸ್ಥಿರತೆ ಕಾಯ್ದುಕೊಳ್ಳಬಹುದು' ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.