ADVERTISEMENT

ಬ್ರಿಟನ್: 29 ವರ್ಷಕ್ಕೇ ತಾತ!

​ಪ್ರಜಾವಾಣಿ ವಾರ್ತೆ
Published 25 ಜನವರಿ 2011, 19:30 IST
Last Updated 25 ಜನವರಿ 2011, 19:30 IST

ಲಂಡನ್ (ಪಿಟಿಐ): ‘ತಾತ’ ಅನ್ನಿಸಿಕೊಳ್ಳಲು ವಯಸ್ಸು ಎಷ್ಟಿರಬೇಕು... ‘ಅರುವತ್ತರ ಮೇಲೆ ಎಷ್ಟಾದರೂ ಸರಿ’ ಅನ್ನುವವರು ಇರಬಹುದು. ಆದರೆ ಇಲ್ಲೊಬ್ಬ ‘ತಾತ’ನ ವಯಸ್ಸು ಕೇವಲ 29 ಅಷ್ಟೇ! ಈಗ ಈತ ಬ್ರಿಟನ್‌ನ ಅತಿ ‘ಕಿರಿಯ ತಾತ’ನಾಗುತ್ತಾನೆ.

ಈ ಯುವ-ತಾತ ತನ್ನ 14ನೇ ವಯಸ್ಸಿನಲ್ಲೇ ಅಪ್ಪ ಆಗಿದ್ದ. ಈಗ ಈತನ ಮಗಳು ಅದೇ 14ರಲ್ಲಿ ಅಮ್ಮ ಆಗುತ್ತಿದ್ದಾಳೆ. ಇದಕ್ಕೆ ‘ಬಾಯ್‌ಫ್ರೆಂಡ್’ ಕಾರಣ ಅಂತೆ. ಅಂತೂ ಈಕೆಯ ಅಪ್ಪ ಹೊಸ ದಾಖಲೆ ನಿರ್ಮಿಸುವಂತಾಗಿದೆ.

ಬ್ರಿಟನ್‌ನ ದಾಖಲೆಯಲ್ಲಿ ಈಗ ಡೇಲ್ ರೈಟ್ ಎಂಬ 29 ವಯಸ್ಸಿನ ತರುಣ ‘ಕಿರಿಯ ತಾತ’ ಎಂಬ ದಾಖಲೆ ಹೊಂದಿದ್ದಾನೆ. ಆದರೆ ಈಗ ಈ ಯುವಕ ನಾನೇ ‘ಕಿರಿಯ ತಾತ’ ಅನ್ನುತ್ತಿದ್ದಾನೆ. ‘ಇತಿಹಾಸ ಮರುಕಳಿಸಿದೆ. ಬ್ರಿಟನ್‌ನ ಅತಿ ಕಿರಿಯ ತಾತ ಆಗಬೇಕೆಂದು ಆಶಿಸಿದ್ದೆ.

ಕಾಕತಾಳೀಯ ಎಂಬಂತೆ ಮಗಳು ಗರ್ಭಿಣಿ ಆಗಿದ್ದಾಳೆ’ ಎಂದು ಯುವಕ ಖುಷಿ ವ್ಯಕ್ತಪಡಿಸಿದ್ದಾನೆ. ಆದರೆ ‘ಹದಿ ಹರೆಯದಲ್ಲಿ ಪಾಲಕರಾದರೆ ಎಷ್ಟು ಕಷ್ಟ ಎಂದು ನನಗೆ ಮನವರಿಕೆಯಾಗಿತ್ತು. ಈಗ ಮಗಳು ಕೂಡ ಅದೇ ಹಾದಿ ಹಿಡಿದಿದ್ದಾಳೆ’ ಎಂದು ಆತ ಮಾರ್ಮಿಕ ಹೇಳಿಕೆ ನೀಡಿದ್ದಾನೆ ಎಂದು ‘ಡೈಲಿ ಮೇಲ್’ ವರದಿ ಮಾಡಿದೆ.

ಈ ಬಾಲಕಿ 15 ವಯಸ್ಸಿನ ಬಾಯ್‌ಫ್ರೆಂಡ್‌ನಿಂದ ಗರ್ಭಿಣಿಯಾಗಿದ್ದಾಳೆ. ಆಗಸ್ಟ್‌ನಲ್ಲಿ ಹೆರಿಗೆಯಾಗುವ ನಿರೀಕ್ಷೆ ಇರಿಸಿದ್ದಾಳೆ. ಇವರಿಬ್ಬರೂ ಒಂದೇ ಶಾಲೆಯ ವಿದ್ಯಾರ್ಥಿಗಳಾಗಿದ್ದಾರೆ. ‘ನಾನು ಗೆಳೆಯನಿಂದ ತಾಯಿ ಆಗುತ್ತಿದ್ದೇನೆ. ಮಗು ಜನಿಸುವವರೆಗೂ ಶಾಲೆಗೆ ಹೋಗುತ್ತೇನೆ’ ಎಂದು ಈಕೆ ‘ಫೇಸ್‌ಬುಕ್’ನಲ್ಲಿ ತಿಳಿಸಿದ್ದಾಳೆ.

ಶಾಲೆಯಲ್ಲಿ ಕೊಡುವ ಪಠ್ಯದ ಹೋಂವರ್ಕ್ ಮಾಡಬೇಕಾದ ಮಕ್ಕಳು ಬ್ರಿಟನ್‌ನಲ್ಲಿ ವ್ಯಾಸಂಗದೊಂದಿಗೆ ‘ಜೋಗುಳ’ವನ್ನೂ  ಹಾಡುತ್ತಿದ್ದಾರೆ. ಆಟವಾಡುವ ಕೈಗಳು ತೊಟ್ಟಿಲು ತೂಗುತ್ತಿವೆ. 15ರ ಹರೆಯದಲ್ಲೇ ಅಪ್ಪ-ಅಮ್ಮ ಆಗುವ ಅನಾರೋಗ್ಯ ಸ್ಥಿತಿ ಇಲ್ಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.