ADVERTISEMENT

ಬ್ರೆಜಿಲ್‌ನಲ್ಲಿ ಹಾಡು ಕುಣಿತಗಳ ಹೊಳೆ...

​ಪ್ರಜಾವಾಣಿ ವಾರ್ತೆ
Published 5 ಮಾರ್ಚ್ 2011, 19:30 IST
Last Updated 5 ಮಾರ್ಚ್ 2011, 19:30 IST

ರಿಯೋ ಡಿ ಜನೈರೊ (ಎಎಫ್‌ಪಿ): ಬ್ರೆಜಿಲ್ ದೇಶದಾದ್ಯಂತ ಸ್ವಚ್ಛಂದ ಹಾಡು, ಕುಣಿತಗಳ ವಾರ್ಷಿಕ ಹಬ್ಬ ಶನಿವಾರದಿಂದ ಹೊಸ ರಂಗು ಪಡೆದುಕೊಂಡಿದೆ. ಈ ನಗರವಂತೂ ಮೋಹಕ ಚೆಲುವೆಯರ ಮನಮೋಹಕ ನೃತ್ಯ ಸಂಭ್ರಮದ ಹೊಳೆಯಂತಾಗಿಬಿಟ್ಟಿದೆ.

ಮೂರು ದಿನಗಳ ಈ ಹಬ್ಬದಲ್ಲಿ ಚೆಲುವೆಯರು ಮಾದಕ ಉಡುಪುಗಳನ್ನು ಧರಿಸಿ ಬೀದಿ ಬೀದಿಗಳಲ್ಲಿ ನೋಡುಗರ ಮೈ ಬಿಸಿಯಾಗುವಂತೆ ನರ್ತಿಸುವ ಪರಿಯಂತೂ ಜಗತ್ಪ್ರಸಿದ್ಧ. ಈ ಉತ್ಸವದಲ್ಲಿ ಆರು ಲಕ್ಷ ಸ್ಥಳೀಯರು ಪಾಲ್ಗೊಳ್ಳುತ್ತಿದ್ದರೆ, ವಿದೇಶಗಳಿಂದ ಎರಡು ಲಕ್ಷಕ್ಕೂ ಹೆಚ್ಚು ಮಂದಿ ಈಗಾಗಲೇ ಆಗಮಿಸಿದ್ದಾರೆ. 
 
ಈಗಾಗಲೇ  ರಿಯೋ ನಗರ ಸಕಲ ಸಿದ್ಧತೆಯಿಂದ ಕಂಗೊಳಿಸುತ್ತಿದ್ದು ಯಾವುದೇ ರೀತಿ ಅಹಿತಕರ ಘಟನೆಗಳು ನಡೆಯದಂತೆ ಬಿಗಿ ಭದ್ರತೆಯನ್ನು ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.ಅಂತಿಮ ದಿನ ಸೋಮವಾರ  ಯಾರು ಈ ವರ್ಷದ ‘ಮಾದಕ ನೃತ್ಯ ರಾಣಿ’  ಪಟ್ಟ ಯಾರಿಗೆ ದಕ್ಕುತ್ತದೆ ಎಂಬುದನ್ನು  ಬ್ರೆಜಿಲ್‌ನ ಸಮಸ್ತ ಜನರೂ ಎದುರ ನೋಡುತ್ತಿದ್ದಾರೆ.

ಫುಟ್‌ಬಾಲ್ ರೋಮಾಂಚನಗಳ ವೇಳೆ ಕಂಡು ಬರುವ ಸಾಂಬಾನೃತ್ಯಗಳು ಇದೀಗ ಬ್ರೆಜಿಲ್‌ದಾದ್ಯಂತ ನಿತ್ಯ ವೈಭವವಾಗಿದೆ.  ಜಗತ್ತಿನ ಅತಿದೊಡ್ಡ ‘ಸಂತೋಷ ಕೂಟ’ ಎಂದೇ ಜನಜನಿತವಾಗಿರುವ ಈ ಸಂದರ್ಭದಲ್ಲಿ ಜನ ಖುಷಿ, ಕುಣಿತ, ಹಾಡು ಸಂಭ್ರಮದಲ್ಲಿ ಮೀಯುತ್ತಿದ್ದಾರೆ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.