
ಸಾವೊ ಪಾಲೊ (ಎಎಫ್‌ಪಿ): ಸಾರಿಗೆ ದರ ಹೆಚ್ಚಿಸಿರುವುದನ್ನು ವಿರೋಧಿಸಿ ಎರಡು ವಾರಗಳಿಂದ ನಡೆಸುತ್ತಿರುವ ಪ್ರತಿಭಟನೆ ಬ್ರೆಜಿಲ್‌ನಾದ್ಯಂತ ವಿಸ್ತರಿಸಿದೆ. ಸಾವೊ ಪಾಲೊ, ಬ್ರೆಸಿಲಿಯಾ, ರಿಯೊ ಸೇರಿದಂತೆ ಪ್ರಮುಖ ನಗರಗಳಲ್ಲಿ ಜನ ಬೀದಿಗಳಿದು ಪ್ರತಿಭಟನೆ ನಡೆಸುತ್ತಿದ್ದಾರೆ. ಅಲ್ಲದೇ ಸಾರ್ವಜನಿಕ ಸಾರಿಗೆ ವ್ಯವಸ್ಥೆಯನ್ನು ಸಂಪೂರ್ಣವಾಗಿ ಉಚಿತವಾಗಿ ಕಲ್ಪಿಸಬೇಕೆಂದು ಪ್ರತಿಭಟನಾಕಾರರು ಪಟ್ಟು ಹಿಡಿದಿರುವುದರಿಂದ ಸರ್ಕಾರ ತೀವ್ರ ಇಕ್ಕಟ್ಟಿಗೆ ಸಿಲುಕಿದೆ.
`ಸಾರ್ವಜನಿಕರ ಹಣವನ್ನು ಸಾರ್ವಜನಿಕರಿಗೆ ಖರ್ಚು ಮಾಡಬೇಕು. ಸಾರಿಗೆ ವ್ಯವಸ್ಥೆಯನ್ನು ಸಾಮಾಜಿಕ ಹಕ್ಕು ಎಂದು ಪರಿಗಣಿಸಬೇಕು. ಇದಕ್ಕಾಗಿ ನಾವು ರಾಷ್ಟ್ರವ್ಯಾಪಿ ಅಭಿಯಾನ ನಡೆಸುತ್ತಿದ್ದೇವೆ' ಎಂದು ಚಳವಳಿಕಾರರ ಗುಂಪು ಎಂಪಿಎಲ್ (ಫ್ರಿ ಪಾಸ್ ಮೂವ್‌ಮೆಂಟ್) ತಿಳಿಸಿದೆ.
`ಚಳವಳಿ ನಡೆಸುತ್ತಿರುವ ನಮ್ಮಂದಿಗೆ ಮಾತುಕತೆ ನಡೆಸಲು ಬ್ರೆಜಿಲ್ ಅಧ್ಯಕ್ಷೆ ದಿಲ್ಮಾ ರೊಸೆಫ್ ಒಪ್ಪಿಕೊಂಡಿದ್ದಾರೆ' ಎಂದು ಹೇಳಿರುವ ಎಂಪಿಎಲ್ ಈ ಸಂಬಂಧದ ಪತ್ರವನ್ನು ತನ್ನ ವೆಬ್‌ಸೈಟ್‌ನಲ್ಲಿ ಪ್ರಕಟಿಸಿದೆ.
2014ರಲ್ಲಿ ನಡೆಯಲಿರುವ ವಿಶ್ವಕಪ್ ಫುಟಬಾಲ್ ಸಿದ್ಧತೆಗೆ ಕೋಟ್ಯಂತರ ರೂಪಾಯಿ ವೆಚ್ಚ ಮಾಡುತ್ತಿರುವುದು ಕೂಡ ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗಿದೆ. ಸಾರಿಗೆ ದರ ಹೆಚ್ಚಿಸಿರುವುದನ್ನು ವಿರೋಧಿಸಿ ಆರಂಭದಲ್ಲಿ ಬೀದಿಗಿಳಿದಿದ್ದ ಜನರು ಇದೀಗ, ಮೂಲಸೌಕರ್ಯ, ಶಿಕ್ಷಣ, ಭ್ರಷ್ಟಾಚಾರ ನಿರ್ಮೂಲನೆಗೆ ಕ್ರಮ ಕೈಗೊಳ್ಳಬೇಕೆಂದು ದಿಲ್ಮಾ ರೊಸೆಫ್ ನೇತೃತ್ವದ ಎಡಪಂಥೀಯ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.