ADVERTISEMENT

ಭಯೋತ್ಪಾದಕರ ವಿಧ್ವಂಸಕ ಸಂಚು ವಿಫಲ

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2011, 19:30 IST
Last Updated 12 ಅಕ್ಟೋಬರ್ 2011, 19:30 IST

ನ್ಯೂಯಾರ್ಕ್ (ಪಿಟಿಐ):  ಇರಾನ್ ಸಂಪರ್ಕ ಹೊಂದಿರುವ ಉಗ್ರರು ಇಲ್ಲಿನ ಸೌದಿ ರಾಯಭಾರಿಯನ್ನು ಹತ್ಯೆ ಮಾಡಲು ರೂಪಿಸಿದ್ದ ಘೋರ ವಿಧ್ವಂಸಕ ಸಂಚನ್ನು ಭದ್ರತಾ ಪಡೆ ವಿಫಲಗೊಳಿಸಿದೆ ಎಂದು ಅಮೆರಿಕದ ನ್ಯಾಯಾಂಗ ಇಲಾಖೆ ಹೇಳಿದೆ.

ಉಗ್ರರ ಸಂಚು ವಿಸ್ತಾರಗೊಂಡಿರಬಹುದೆಂಬ ಶಂಕೆಯ ಮೇಲೆ ರಾಷ್ಟ್ರದ ನಾಗರಿಕರಿಗೆ ಮತ್ತು ಅಮೆರಿಕದಲ್ಲಿರುವ ಅಂತರರಾಷ್ಟ್ರೀಯ ನಿಯೋಗಗಳಿಗೆ ಉಗ್ರರ ಹಾಗೂ ವಿಧ್ವಂಸಕ ಕೃತ್ಯಗಳ ಬಗ್ಗೆ ಅಮೆರಿಕದ ವಿದೇಶಾಂಗ ಇಲಾಖೆ ಎಚ್ಚರಿಕೆ ನೀಡಿದೆ.

ಈ ವಿಧ್ವಂಸಕ ಕೃತ್ಯಕ್ಕೆ ಇರಾನ್ ಸರ್ಕಾರದಲ್ಲಿ ಉನ್ನತ ಸ್ಥಾನದಲ್ಲಿರುವವರೇ ಸಂಚು ರೂಪಿಸಿದ್ದರು. ಇರಾನಿನ ಖುದ್ ಪಡೆಯವರು ಮೆಕ್ಸಿಕನ್ ಮಾದಕ ವಸ್ತು ಜಾಲದವರಿಗೆ ಸ್ಫೋಟಕಗಳನ್ನು ಒದಗಿಸುವಂತೆ ಕೋರಿದ್ದರು ಎಂದು ಆಪಾದಿಸಿದೆ. 

 ಅಮೆರಿಕ ಪೌರತ್ವ ಪಡೆದ ಮತ್ತು ಗಣ್ಯರಂತೆ ಸೋಗು ಹಾಕಿದ ಇರಾನ್ ಮೂಲದ ಮನ್ಸೂರ್ ಅರ್ಬಬ್‌ಸಿಯಾರ್ ಹಾಗೂ ಗುಲಾಂ ಶಕುರಿ ಅಮೆರಿಕದಲ್ಲಿನ ಸೌದಿ ರಾಯಭಾರಿ ಅಡೆಲ್ ಅಲ್-ಜುಬೇರ್ ಅವರ ಹತ್ಯೆಗೆ ಈ ವರ್ಷದ ಆರಂಭದಲ್ಲೇ ಸಂಚು ರೂಪಿಸಿದ್ದರು. ಇದಕ್ಕೆ ಇರಾನ್ ಸರ್ಕಾರದಲ್ಲಿರುವ ವ್ಯಕ್ತಿಗಳೇ ನಿರ್ದೇಶನ ನೀಡಿದ್ದರು.

ಇವರಿಬ್ಬರ ವಿರುದ್ಧ ಕ್ರಿಮಿನಲ್ ಪ್ರಕರಣ ಕೂಡ ದಾಖಲಾಗಿತ್ತು.

ಅರ್ಬಬ್‌ಸಿಯಾರ್‌ನನ್ನು ನ್ಯೂಯಾರ್ಕ್‌ನ ಜಾನ್ ಎಫ್. ಕೆನಡಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸೆ. 29ರಂದು ಬಂಧಿಸಲಾಗಿದ್ದು, ಶಕುರಿ ತಲೆಮರೆಸಿಕೊಂಡಿದ್ದಾನೆ.

ಈ ವಿಧ್ವಂಸಕ ಕೃತ್ಯಕ್ಕೆ ಇರಾನ್ ಸರ್ಕಾರದಲ್ಲಿ ಉನ್ನತ ಸ್ಥಾನದಲ್ಲಿರುವವರೇ ಸಂಚು ರೂಪಿಸಿದ್ದಾರೆ ಎಂಬ ಅಮೆರಿಕದ ಆಪಾದನೆಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಇರಾನ್, `ಈ ಆರೋಪದಲ್ಲಿ ರಾಜಕೀಯ ದುರುದ್ದೇಶವಿದೆ~ ಎಂದು ಕಟುವಾಗಿ ಟೀಕಿಸಿದೆ.

ವಿಶ್ವಸಂಸ್ಥೆಯಲ್ಲಿ ಇರಾನಿನ ಕಾಯಂ ಪ್ರತಿನಿಧಿಯಾದ ಮೊಹಮ್ಮದ್ ಖಾಜೀ ಈ ಬಗ್ಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿ, ಅಮೆರಿಕದ ಆರೋಪವನ್ನು ಖಂಡತುಂಡವಾಗಿ ಅಲ್ಲಗಳೆದಿದ್ದಾರೆ.

`ಅಮೆರಿಕದ ಆರೋಪ ನಿರಾಧಾರ. ಕೆಲವು ಶಂಕಾಸ್ಪದ ವ್ಯಕ್ತಿಗಳ ಹೇಳಿಕೆಯನ್ನು ಆಧಾರವಾಗಿಟ್ಟುಕೊಂಡು ಇಂತಹ ಕಟ್ಟುಕತೆ ಕಟ್ಟಲಾಗಿದೆ~ ಎಂದು ಅವರು ವಿಶ್ವಸಂಸ್ಥೆ ಮಹಾಪ್ರಧಾನ ಕಾರ್ಯದರ್ಶಿ ಬಾನ್ ಕಿ- ಮೂನ್ ಅವರಿಗೆ ಪತ್ರ ಬರೆದಿದ್ದಾರೆ.

ಈಗ ಅಮೆರಿಕದಲ್ಲಿ ಆರ್ಥಿಕ ಸಂಕಷ್ಟವಿದ್ದು ಅನೇಕ ಸಾಮಾಜಿಕ ತೊಡಕುಗಳು ಕಾಣಿಸಿಕೊಂಡಿವೆ. ಇವುಗಳಿಂದ ಜನರ ಗಮನ ಬೇರೆಡೆಗೆ ಸೆಳೆಯಲು ಇಂತಹ ಆರೋಪ ಮಾಡಲಾಗಿದೆ. ಇದರಿಂದ ಅಮೆರಿಕವು ಇರಾನ್ ವಿರೋಧಿ ನೀತಿ ಅನುಸರಿಸುತ್ತಿರುವುದು ಮತ್ತೊಮ್ಮೆ ಸಾಬೀತಾಗಿದೆ ಎಂದಿದ್ದಾರೆ.

ಖಾಜೀ ಈ ಪತ್ರದ ಪ್ರತಿಯನ್ನು ವಿಶ್ವಸಂಸ್ಥೆ ಭದ್ರತಾ ಮಂಡಳಿ ಮತ್ತು ಸಾಮಾನ್ಯ ಸಭೆಗೂ ಕಳುಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.