ADVERTISEMENT

ಭಾರತಕ್ಕೆ ದಾವೂದ್ ಬಂಟ ಟೈಗರ್ ಹನೀಫ್ ಹಸ್ತಾಂತರ: ಇಂಗ್ಲೆಂಡ್ ಕೋರ್ಟ್ ಆಜ್ಞೆ

​ಪ್ರಜಾವಾಣಿ ವಾರ್ತೆ
Published 3 ಮೇ 2012, 9:35 IST
Last Updated 3 ಮೇ 2012, 9:35 IST

ಲಂಡನ್ (ಪಿಟಿಐ): 1993ರಲ್ಲಿ ಗುಜರಾತಿನಲ್ಲಿ ಸಂಭವಿಸಿದ ಬಾಂಬ್ ದಾಳಿಗಳಿಗೆ ಸಂಬಂಧಿಸಿದಂತೆ ಭಾರತಕ್ಕೆ ಬೇಕಾಗಿದ್ದ ಟೈಗರ್ ಹನೀಫ್ ನನ್ನು ಬ್ರಿಟಿಷ್ ನ್ಯಾಯಾಧೀಶರೊಬ್ಬರು ~ಅಭಿಜಾತ ಪಲಾಯನಕಾರ~ ಎಂದು ಬಣ್ಣಿಸಿ  ಭಾರತಕ್ಕೆ ಹಸ್ತಾಂತರಿಸುವಂತೆ  ಆಜ್ಞಾಪಿಸಿದ್ದಾರೆ.

ಮೊಹಮ್ಮದ್ ಹನೀಫ್ ಉಮರ್ಜಿ ಪಟೇಲ್ (51) ಹೆಸರಿನ ಈ ವ್ಯಕ್ತಿಯನ್ನು 2010ರ ಮಾರ್ಚ್ ತಿಂಗಳಲ್ಲಿ ಗ್ರೇಟರ್ ಮ್ಯಾಂಚೆಸ್ಟರ್ ನ ಬೋಲ್ಟನ್ ನಲ್ಲಿ  ಕಿರಾಣಿ ಅಂಗಡಿಯೊಂದರಲ್ಲಿ ಪತ್ತೆ ಹಚ್ಚಲಾಗಿತ್ತು. ಈತ ಭೂಗತ ಜಗತ್ತಿನ ದೊರೆ ದಾವೂದ್ ಇಬ್ರಾಹಿಂನ ನಿಕಟವರ್ತಿ ಎಂದು ಹೇಳಲಾಗಿದೆ.

ಲಂಡನ್ ನ ವೆಸ್ಟ್ ಮಿನ್ಸ್ಟರ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯವು ಬುಧವಾರ ಹನೀಫ್ ನನ್ನು ಭಾರತಕ್ಕೆ ಒಪ್ಪಿಸುವಂತೆ ಆದೇಶ ನೀಡಿದೆ.

ಹತ್ಯೆ ಸಂಚು ಹಾಗೂ ಸ್ಫೋಟ ಸಂಚು ಆರೋಪಗಳ ಹಿನ್ನೆಲೆಯಲ್ಲಿ ಗಡೀಪಾರು ವಾರಂಟ್ ಅನುಸರಿಸಿ ಮೆಟ್ರೋಪಾಲಿಟನ್ ಪೊಲೀಸರು 2010ರಲ್ಲಿ ಹನೀಫ್ ನನ್ನು ಬಂಧಿಸಿದ್ದರು.

1993ರಲ್ಲಿ ಗುಜರಾತಿನ ಸೂರತ್ ನಲ್ಲಿ ಎಂಟು ವರ್ಷದ ಶಾಲಾ ಬಾಲಕಿಯೊಬ್ಬಳನ್ನು ಬಲಿತೆಗೆದುಕೊಂಡ ಕಿಕ್ಕಿರಿದ ಮಾರುಕಟ್ಟೆ ಸಮೀಪದ ಗ್ರೆನೇಡ್ ದಾಳಿಯಲ್ಲಿ ವಹಿಸಿದ ಪಾತ್ರಕ್ಕಾಗಿ ಭಾರತವು ಹನೀಫ್ ಪತ್ತೆಗೆ ಹುಡುಕಾಟ ನಡೆಸಿತ್ತು.

ರೈಲ್ವೇ ನಿಲ್ದಾಣದಲ್ಲಿ ನಡೆದ ಎರಡನೇ ಗ್ರೆನೇಡ್ ದಾಳಿ ಸಂಚಿನಲ್ಲೂ ಈತ ಆರೋಪಿಯಾಗಿದ್ದು, ಈ ದಾಳಿಯಲ್ಲಿ 12 ಜನ ಗಂಭೀರವಾಗಿ ಗಾಯಗೊಂಡಿದ್ದರು.

ಭಾರತೀಯ ಅಧಿಕಾರಿಗಳಿಂದ ಚಿತ್ರಹಿಂಸೆಗೆ ಗುರಿಯಾಗಬಹುದು ಎಂಬ ಕಾರಣ ನೀಡುತ್ತಾ ಹನೀಫ್ ಇದುವರೆಗೂ ತನ್ನ ಹಸ್ತಾಂತರಕ್ಕೆ ವಿರೋಧ ವ್ಯಕ್ತ ಪಡಿಸುತ್ತಾ ಬಂದಿದ್ದ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.