ADVERTISEMENT

ಭಾರತಕ್ಕೆ ಬ್ರಿಟನ್ 28 ಕೋಟಿ ಪೌಂಡ್ ನೆರವು

​ಪ್ರಜಾವಾಣಿ ವಾರ್ತೆ
Published 15 ಜೂನ್ 2011, 19:30 IST
Last Updated 15 ಜೂನ್ 2011, 19:30 IST

ಲಂಡನ್ (ಪಿಟಿಐ): ಬ್ರಿಟನ್ ಈಗ ಭಾರತಕ್ಕೆ ನೀಡುತ್ತಿರುವ 28 ಕೋಟಿ ಪೌಂಡ್ ನೆರವನ್ನು ಮುಂದುವರೆಸಬೇಕು ಎಂದು ಹೇಳಿರುವ ಅಲ್ಲಿನ ಉನ್ನತ ಸಂಸದೀಯ ಸಮಿತಿ, 2015ರ ವೇಳೆಗೆ ನೆರವು ನೀತಿಯಲ್ಲಿ ಮೂಲಭೂತ ಬದಲಾವಣೆ ಮಾಡುವ ಅಗತ್ಯ ಇದೆ ಎಂದು ಪ್ರತಿಪಾದಿಸಿದೆ.

ಭಾರತಕ್ಕೆ ಬ್ರಿಟನ್ ನೀಡುತ್ತಿರುವ ನೆರವು ಬಡತನ ನಿವಾರಣೆಯಂತಹ ಕಾರ್ಯಗಳಿಗಷ್ಟೇ ಬಳಸುವಂತಿರಬೇಕು. ಅನ್ಯ ಬಳಕೆಗೆ ವ್ಯರ್ಥ ಆಗಬಾರದು ಎಂದೂ ಅಂತರರಾಷ್ಟ್ರೀಯ ಅಭಿವೃದ್ಧಿಗಾಗಿ ಇರುವ ಸಂಸದೀಯ ಸಮಿತಿ ಅಧ್ಯಕ್ಷ ಮಾಲ್ಕಂ ಬ್ರೂಸ್ ಎಚ್ಚರಿಸಿದ್ದಾರೆ.

ನೆರವಿನ ಹಣವನ್ನು ಆದ್ಯತೆಯ ಮೇಲೆ ನೈರ್ಮಲೀಕರಣ, ಸಾಮಾಜಿಕ ಅಸಮತೋಲನ ನಿರ್ಮೂಲನೆ ಮತ್ತು ಅಪೌಷ್ಠಿಕತೆ ಹೋಗಲಾಡಿಸಲು ಬಳಸಿಕೊಳ್ಳಬೇಕು ಎಂದು ಸಲಹೆ ಮಾಡಿರುವ ಸಮಿತಿ, ಭಾರತದಲ್ಲಿ 40 ಕೋಟಿಗಿಂತ ಹೆಚ್ಚಿನ ಮಂದಿ ಪ್ರತಿ ದಿನ 1.25 ಡಾಲರ್‌ಗಿಂತ ಕಡಿಮೆ ಖರ್ಚು ಮಾಡಲಷ್ಟೇ ಶಕ್ತರಾಗಿದ್ದು, ಕಷ್ಟದಿಂದ ಜೀವನ ಸಾಗಿಸುತ್ತಿದ್ದಾರೆ. ಹೀಗಾಗಿ ಬ್ರಿಟನ್ ನೀಡುವ ನೆರವು ಉಪಯೋಗಕ್ಕೆ ಬರಲಿದೆ ಎನ್ನುವ ಅಭಿಪ್ರಾಯವನ್ನೂ ಬ್ರೂಸ್ ವ್ಯಕ್ತಪಡಿಸಿದ್ದಾರೆ.

ಆರ್ಥಿಕ ಹಿಂಜರಿತದಿಂದ ಈಗ ಚೇತರಿಸಿಕೊಳ್ಳುತ್ತಿರುವ ಬ್ರಿಟನ್, ಆರ್ಥಿಕ ಹಿಂಜರಿತಕ್ಕೆ ಒಳಗಾಗದ ಭಾರತಕ್ಕೆ ನೆರವು ನೀಡುವ ಅಗತ್ಯ ಇದೆಯೇ ಎನ್ನುವ ಕುರಿತೂ ಬ್ರಿಟನ್‌ನಲ್ಲಿ ಚರ್ಚೆ ನಡೆಯುತ್ತಿದೆ.

ಭಾರತ ಸರ್ಕಾರ ಸಾಮಾಜಿಕ ಸುಧಾರಣಾ ಕ್ಷೇತ್ರದಲ್ಲಿ ಸಾಕಷ್ಟು ಪ್ರಮಾಣದಲ್ಲಿ ಹಣ ವ್ಯಯ ಮಾಡುತ್ತಿದೆ. ಆದರೂ ಸಹ ಭಾರತದಲ್ಲಿ ಬಡತನ ಹೆಚ್ಚಿದ್ದು, ಅಂತರರಾಷ್ಟ್ರೀಯ ಮಾನದಂಡಕ್ಕೆ ಸಮನಾಗಿ ಬಡತನ ನಿರ್ಮೂಲನೆ ಗುರಿ ಮುಟ್ಟಲು ಹಲವು ವರ್ಷಗಳು ಬೇಕಾಗುತ್ತದೆ ಎಂದೂ ಅವರು ಹೇಳಿದ್ದಾರೆ.

ಭಾರತದ ಬಾಹ್ಯಾಕಾಶ ಯೋಜನೆಯನ್ನು ಸಮರ್ಥಿಸಿಕೊಂಡಿರುವ ಸಮಿತಿ, ಇದರಿಂದ (ಬಾಹ್ಯಾಕಾಶ ಯೋಜನೆ) ಸಾಮಾಜಿಕ- ಆರ್ಥಿಕವಾಗಿ ಪ್ರಯೋಜನ ಪಡೆಯಬಹುದಾಗಿದೆ. ದೇಶದ ನಕ್ಷೆಯನ್ನು ಗುರುತಿಸುವುದು, ಹವಾಮಾನ ಮಾಹಿತಿ ಪಡೆಯುವುದು, ಪ್ರವಾಹ ಪರಿಸ್ಥಿತಿಯನ್ನು ಅರಿಯಲು ಸಾಧ್ಯವಾಗುತ್ತದೆ ಎಂದು ಸಮಿತಿ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.