ADVERTISEMENT

ಭಾರತದಲ್ಲಿ ಆರೋಗ್ಯ ಸಮಸ್ಯೆ ಉಲ್ಬಣ : ವಿಶ್ವಬ್ಯಾಂಕ್ ವರದಿ

​ಪ್ರಜಾವಾಣಿ ವಾರ್ತೆ
Published 13 ಫೆಬ್ರುವರಿ 2011, 18:30 IST
Last Updated 13 ಫೆಬ್ರುವರಿ 2011, 18:30 IST

ವಾಷಿಂಗ್ಟನ್ (ಪಿಟಿಐ): ನಿರ್ದಿಷ್ಟವಾಗಿ ಭಾರತ ಹಾಗೂ ದಕ್ಷಿಣ ಏಷ್ಯಾದ ದೇಶಗಳಲ್ಲಿ ಆರೋಗ್ಯ ಸಮಸ್ಯೆ ತಲೆದೋರಿದ್ದು, ಹೃದಯ ಸಂಬಂಧಿ ಕಾಯಿಲೆ, ಮಧುಮೇಹ, ಬೊಜ್ಜು ಹಾಗೂ ಸಾಂಕ್ರಾಮಿಕವಲ್ಲದ ರೋಗಗಳು ಹೆಚ್ಚುತ್ತಿವೆ ಎಂದು ವಿಶ್ವ ಬ್ಯಾಂಕ್‌ನ ವರದಿ ಆತಂಕ ವ್ಯಕ್ತಪಡಿಸಿದೆ.

ಹೃದಯ ಸಂಬಂಧಿ ಕಾಯಿಲೆಗಳಿಂದ 15ರಿಂದ 69 ವಯೋಮಾನದವರ ಸಾವಿನ ಸಂಖ್ಯೆ ಹೆಚ್ಚಳವಾಗುತ್ತಿದೆ. ವಿಶ್ವದ ಇತರೆಲ್ಲಾ ದೇಶಗಳಿಗಿಂತ ಆರು ವರ್ಷ ಮೊದಲೇ ದಕ್ಷಿಣ ಏಷ್ಯಾದಲ್ಲಿ ಹೃದಯ ಸಂಬಂಧಿ ಕಾಯಿಲೆಯ ಸಾವು ಸಂಭವಿಸುತ್ತಿದೆ ಎಂದೂ ವರದಿಯಲ್ಲಿ ತಿಳಿಸಲಾಗಿದೆ.

2030ರ ವೇಳೆಗೆ ಭಾರತದಲ್ಲಿ ಹೃದಯ ಸಂಬಂಧಿ ಕಾಯಿಲೆಯಿಂದಲೇ ಶೇ 36ರಷ್ಟು ಮಂದಿ ಸಾಯುವರು. ಹಾಗೆಯೇ ಅಧಿಕ ರಕ್ತದ ಒತ್ತಡದಿಂದ ಬಳಲುತ್ತಿರುವವರ ಸಂಖ್ಯೆ ಈಗಿನ 11.82 ಕೋಟಿ ಜನರಿಂದ 21.35 ಕೋಟಿ ಜನರಿಗೆ ಹೆಚ್ಚಲಿದೆ ಎಂದೂ ವರದಿ ತಿಳಿಸಿದೆ.

ದೀರ್ಘ ಕಾಲದ ಶ್ವಾಸಕೋಶದ ಕಾಯಿಲೆ ಉತ್ತರ ಭಾರತದಲ್ಲಿ ಶೇ 2ರಿಂದ 9ರಷ್ಟು ಮತ್ತು ದಕ್ಷಿಣ ಭಾರತದಲ್ಲಿ 1ರಿಂದ 4ರಷ್ಟು ಇದೆ. ಧೂಮಪಾನ ಇದಕ್ಕೆ ಪ್ರಮುಖ ಕಾರಣ ಎಂದು ವರದಿ ಹೇಳಿದೆ.ಭಾರತದಲ್ಲಿ ಶೇ 70ರಷ್ಟು ಕ್ಯಾನ್ಸರ್ ರೋಗಗಳು ಉಲ್ಬಣಾವಸ್ಥೆಯಲ್ಲಿ ಪತ್ತೆಯಾಗುತ್ತಿವೆ. ಹಾಗಾಗಿ ಈ ರೋಗದಿಂದ ಮುಕ್ತರಾಗುವವರ ಸಂಖ್ಯೆ ಅತಿ ವಿರಳ ಎನ್ನಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.