ADVERTISEMENT

ಭಾರತೀಯ ವಿದ್ಯಾರ್ಥಿನಿಗೆ ಗಾಯ :ಗುಂಡಿನ ದಾಳಿ: 7 ಸಾವು

​ಪ್ರಜಾವಾಣಿ ವಾರ್ತೆ
Published 3 ಏಪ್ರಿಲ್ 2012, 19:30 IST
Last Updated 3 ಏಪ್ರಿಲ್ 2012, 19:30 IST

ವಾಷಿಂಗ್ಟನ್ (ಪಿಟಿಐ): ಕ್ಯಾಲಿಫೋರ್ನಿಯಾದ ಧಾರ್ಮಿಕ ಕಾಲೇಜೊಂದರ ವಿದ್ಯಾರ್ಥಿಯೊಬ್ಬ ತನ್ನ ಸಹಪಾಠಿಗಳ ಮೇಲೆ ಯದ್ವಾತದ್ವಾ ಗುಂಡಿನ ದಾಳಿ ನಡೆಸಿದ ಪರಿಣಾಮ ಏಳು ಮಂದಿ ಮೃತಪಟ್ಟು, ಭಾರತೀಯ ಮೂಲದ ವಿದ್ಯಾರ್ಥಿನಿ ಸೇರಿದಂತೆ ಮೂವರು ಗಾಯಗೊಂಡಿದ್ದಾರೆ.

ತೀವ್ರ ಗಾಯಗೊಂಡಿರುವ ವಿದ್ಯಾರ್ಥಿನಿಯನ್ನು ದಾವೀಂದರ್ ಕೌರ್ (19) ಎಂದು ಗುರುತಿಸಲಾಗಿದೆ. ಆಕೆಯ ಬಲ ತೋಳಿಗೆ ಗುಂಡು ಗುಲಿದ್ದು, ಸ್ಥಳೀಯ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ. ಈ ಘಟನೆಯಿಂದ ಇಡೀ ಅಮೆರಿಕ ರಾಷ್ಟ್ರವೇ ತಲ್ಲಣಗೊಂಡಿದೆ.

ಶಂಕಿತ ಆರೋಪಿ ಕೊರಿಯಾ ಮೂಲದ ಅಮೆರಿಕ ಪ್ರಜೆ ಗೊಹ್ (43) ಎಂಬಾತನನ್ನು ಇಲ್ಲಿನ ಓಕ್ಲಂಡ್ ಪೊಲೀಸರು ಬಂಧಿಸಿದ್ದಾರೆ.ಈ ಘಟನೆಯಲ್ಲಿ ಮೃತಪಟ್ಟ ವಿದ್ಯಾರ್ಥಿಗಳು ದಕ್ಷಿಣ ಕ್ಯಾಲಿಫೋರ್ನಿಯಾದ ಒಯಿಕಾಸ್ ವಿಶ್ವವಿದ್ಯಾಲಯದ ಸಣ್ಣ ಧಾರ್ಮಿಕ ಕಾಲೇಜಿನವರು ಎನ್ನಲಾಗಿದೆ.

ವಿಚಾರಣೆ ನಡೆಸುತ್ತಿರುವ `ಓಕ್ಲಂಡ್ ಟ್ರಿಬ್ಯೂನ್~ ಪತ್ರಿಕೆ ಪ್ರಕಾರ, `ಗುಂಡು ಹಾರಿಸಿದ ವ್ಯಕ್ತಿ ಕೆಲವು ತಿಂಗಳಿಂದ  ಕಾಲೇಜಿಗೆ ಗೈರು ಹಾಜರಾಗಿದ್ದ. ಘಟನೆ ನಡೆದ ಸೋಮವಾರ ದಿಢೀರನೆ ಪ್ರತ್ಯಕ್ಷನಾದ. ವಿದ್ಯಾರ್ಥಿಗಳಿಗೆ ಗೋಡೆಗೆ ಎದುರಾಗಿ ನಿಲ್ಲುವಂತೆ ಬಂದೂಕನ್ನು ತೋರಿಸಿ ಆದೇಶಿಸಿದ. ಇದರಿಂದ ಗಾಬರಿಗೊಂಡ ವಿದ್ಯಾರ್ಥಿಗಳು ಓಡಲಾರಂಭಿಸಿದರು. ಆಗ ಗುಂಡಿನ ದಾಳಿ ನಡೆಸಿದ~ ಎಂದು ಕೌರ್ ಸಂಬಂಧಿಕರಿಗೆ ಹೇಳಿದ್ದಾಗಿ ಪತ್ರಿಕೆ ವರದಿ ಮಾಡಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.