ADVERTISEMENT

ಭಾರತೀಯ ವೃತ್ತಿಪರರ ಮೇಲೆ ಹೊರೆ

​ಪ್ರಜಾವಾಣಿ ವಾರ್ತೆ
Published 24 ಡಿಸೆಂಬರ್ 2010, 6:40 IST
Last Updated 24 ಡಿಸೆಂಬರ್ 2010, 6:40 IST

ವಾಷಿಂಗ್ಟನ್ (ಪಿಟಿಐ): ಎಚ್-1ಬಿ ಮತ್ತು ಎಲ್ 1 ವೀಸಾಗಳ ಮೇಲೆ ಹೆಚ್ಚುವರಿ ಶುಲ್ಕ ವಿಧಿಸುವ ಮಸೂದೆಗೆ ಅಮೆರಿಕ ಸಂಸತ್ತು ಅಂಗೀಕಾರ ನೀಡಿದ್ದು, ಇದರಿಂದ ಈ ವೀಸಾಗಳನ್ನು ಹೆಚ್ಚಾಗಿ ಬಳಸುತ್ತಿದ್ದ ಭಾರತೀಯ ವೃತ್ತಿಪರರ ಮೇಲೆ ತಲಾ 2000 ಡಾಲರ್‌ಗಳಷ್ಟು ಅಧಿಕ ಹೊರೆ ಬೀಳಲಿದೆ.

  ಹೊರಗುತ್ತಿಗೆಯಲ್ಲಿ ತೊಡಗಿರುವ ಭಾರತದ ಕಂಪೆನಿಗಳ ಮೇಲೂ ಇದರಿಂದ ಹೊರೆ ಬೀಳಲಿದೆ. ನ್ಯೂಯಾರ್ಕಿನ ಅವಳಿ ಗೋಪುರ ನೆಲಸಮಗೊಂಡ ನಂತರ ನಡೆದ ‘ಗ್ರೌಂಡ್ ಜೀರೋ’ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿ ಅನಾರೋಗ್ಯಕ್ಕೆ ತುತ್ತಾದವರಿಗೆ ಉಚಿತ ಚಿಕಿತ್ಸೆ- ಪರಿಹಾರ ನೀಡಲು 430 ಕೋಟಿ ಡಾಲರ್ ನಿಧಿ ಸಂಗ್ರಹಿಸುವುದು ಈ ಮಸೂದೆಯ ಉದ್ದೇಶ.

ಕೆಲವು ವಿದೇಶಿ ಕಂಪೆನಿಗಳ ಮೇಲೆ ಶೇ 2ರಷ್ಟು ಉತ್ಪಾದನಾ ತೆರಿಗೆ ವಿಧಿಸುವ ಜತೆಗೆ ಇನ್ನಿತರ ಕ್ರಮಗಳ ಮೂಲಕ ನಿಧಿಯನ್ನು ಸಂಗ್ರಹಿಸುವ ಯೋಜನೆಯನ್ನೂ ಮಸೂದೆ ಹೊಂದಿದೆ.

ಎಚ್-1ಬಿ ಮತ್ತು ಎಲ್1 ವೀಸಾಗಳ ಶುಲ್ಕ ಹೆಚ್ಚಳವನ್ನು ಏಳು ವರ್ಷಗಳ ಅವಧಿಗೆ ವಿಸ್ತರಿಸಿರುವುದು ಸಂಪನ್ಮೂಲ ಸಂಗ್ರಹಕ್ಕೆ ಕೈಗೊಂಡಿರುವ ಮತ್ತೊಂದು ಕ್ರಮ.  ಹೀಗಾಗಿ, 2014ರ ಸೆಪ್ಟೆಂಬರ್ 30ರಂದು ಕೊನೆಯಾಗಬೇಕಿದ್ದ ವೀಸಾ ಶುಲ್ಕ ಹೆಚ್ಚಳ ನೀತಿ 2021ರ ಸೆಪ್ಟೆಂಬರ್ 30ರವರೆಗೂ ವಿಸ್ತರಣೆಯಾಗಲಿದೆ.
ಅದೇ ರೀತಿ ರಾಷ್ಟ್ರಕ್ಕೆ ಭೇಟಿ ನೀಡುವ ಕೆಲವು ಪ್ರವಾಸಿಗರಿಗೆ ವಿಧಿಸುತ್ತಿರುವ ಶುಲ್ಕವನ್ನು ಇನ್ನಷ್ಟು ಅವಧಿಗೆ ಮುಂದುವರಿಸಲಾಗುವುದು.

ಈ ಮಸೂದೆ ಸೆನೆಟ್‌ನಲ್ಲಿ (ಮೇಲ್ಮನೆ) ಒಮ್ಮತದಿಂದ ಅನುಮೋದನೆಗೊಂಡಿತು. ಕೆಳಮನೆಯಲ್ಲಿ ಮಸೂದೆ ಪರವಾಗಿ 206 ಮತಗಳು ಬಿದ್ದರೆ ವಿರುದ್ಧವಾಗಿ 60 ಮತಗಳು ಬಿದ್ದವು.

‘ನಾವು ಬಹುದಿನಗಳಿಂದ ನಿರೀಕ್ಷಿಸುತ್ತಿದ್ದ ಮಸೂದೆ ಇದೀಗ ಕ್ರಿಸ್‌ಮಸ್‌ನ ಶುಭ ಸಂದರ್ಭದಲ್ಲೇ ಅಂಗೀಕಾರವಾಗಿರುವುದರಿಂದ ತುಂಬಾ ಸಂತಸವಾಗಿದೆ’ ಎಂದು ಕೆಳಮನೆಯಲ್ಲಿ ಆಡಳಿತ ಪಕ್ಷದ ನಾಯಕರಾದ ಸ್ಟೆನಿ ಎಚ್.ಹೋಯರ್ ಮತ್ತು ನ್ಯೂಯಾರ್ಕಿನ ಸೆನೆಟರ್‌ಗಳಾದ ಚಾರ್ಲ್ಸ್ ಸ್ಕ್ಯೂಮರ್ ಹಾಗೂ ಕ್ರಿಸ್ಟಿನ್ ಗಿಲ್ಲಿ ಬ್ರ್ಯಾಂಡ್ ಹೇಳಿದ್ದಾರೆ.

ADVERTISEMENT

‘ಈ ಮಸೂದೆಯಲ್ಲಿ ಕೆಲವು ಸಣ್ಣಪುಟ್ಟ ಲೋಪಗಳಿದ್ದರೂ ಒಟ್ಟಾರೆ ಸಮಾಧಾನ ತರುವಂತಿದೆ. 430 ಕೋಟಿ ಡಾಲರ್ ನಿಧಿ ತೀರಾ ಸಣ್ಣ ಮೊತ್ತವೇನೂ ಅಲ್ಲ’ ಎಂದು ಸೆನೆಟ್‌ನಲ್ಲಿ ಆಡಳಿತ ಪಕ್ಷದ ನಾಯಕರಾಗಿರುವ ಹ್ಯಾರಿ ರೀಡ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

‘ಈ ಮಸೂದೆಯ ಅಂಗೀಕಾರ ಅಮೆರಿಕದ, ವಿಶೇಷವಾಗಿ ನ್ಯೂಯಾರ್ಕ್ ಮತ್ತು ನ್ಯೂಜೆರ್ಸಿಯ ಜನರಿಗೆ ಸಂದ ಜಯವಾಗಿದೆ’ ಎಂದೂ ಅವರು ಹೇಳಿದ್ದಾರೆ.

ಅಮೆರಿಕದ ವಾಣಿಜ್ಯೋದ್ಯಮಿಗಳ ಸಂಘ ಸೇರಿದಂತೆ ಹಲವು ವಾಣಿಜ್ಯ ಸಂಘಟನೆಗಳು ಈ ಮಸೂದೆಗೆ ವಿರೋಧ ವ್ಯಕ್ತಪಡಿಸಿದ್ದವು. ಸಾಕಷ್ಟು ಸಂಖ್ಯೆಯಲ್ಲಿ ರಿಪಬ್ಲಿಕನ್ ಪಕ್ಷದ ಸಂಸದರೂ ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದರು.

ವಿದೇಶಿ ಕಂಪೆನಿಗಳ ಮೇಲೆ ಶೇ 2ರಷ್ಟು ಉತ್ಪಾದನಾ ತೆರಿಗೆ ವಿಧಿಸುವುದು ಅಸಮಂಜಸ ಹಾಗೂ ಅಪಾಯಕಾರಿ. ವಿದೇಶಗಳಲ್ಲಿ ವಹಿವಾಟು ಮಾಡಬೇಕೆಂಬ ಯೋಜನೆ ಹೊಂದಿರುವ ಅಮೆರಿಕದ ಕಂಪೆನಿಗಳಿಗೆ ಇದರಿಂದ ಧಕ್ಕೆಯಾಗುತ್ತದೆ ಎಂದು ಟೆಕ್ಸಾಸ್ ಸಂಸದ ಕೆವಿನ್ ಬ್ರ್ಯಾಂಡಿ ಟೀಕಿಸಿದ್ದಾರೆ.

ವಿದೇಶಗಳಲ್ಲಿ ಪೈಪೋಟಿ ನಡೆಸುತ್ತಿರುವ ನಮ್ಮ ಕಂಪೆನಿಗಳ ಮೇಲೆ ಆ ರಾಷ್ಟ್ರಗಳೂ ತೆರಿಗೆ ವಿಧಿಸಲು ಇದು ಪ್ರಚೋದನೆ ನೀಡುತ್ತದೆಂಬುದು ಅವರ ಆತಂಕ.

‘ಗ್ರೌಂಡ್ ಜೀರೋ’ ಪರಿಹಾರ ಕಾರ್ಯಾಚರಣೆಯಲ್ಲಿ ದೀರ್ಘಕಾಲ ಪಾಲ್ಗೊಂಡಿದ್ದರ ಪರಿಣಾಮ ರೋಗಕ್ಕೆ ತುತ್ತಾಗಿ ಮೃತರಾದ ಪೊಲೀಸ್ ಅಧಿಕಾರಿ ಜೇಮ್ಸ್ ಝಡ್ರೋಗ ಅವರ ಹೆಸರನ್ನೇ ಈ ಕಾಯ್ದೆಗೆ ನಾಮಕರಣ ಮಾಡಲಾಗಿದೆ.

ಇವು ಈ ಮಸೂದೆಯ ಪ್ರಮುಖ ಅಂಶಗಳಾಗಿದ್ದು ಇನ್ನೂ ಹೆಚ್ಚಿನ ವಿವರಗಳು ಇನ್ನೂ ಬಹಿರಂಗಗೊಂಡಿಲ್ಲ ಎಂಬುದೂ ಗಮನಾರ್ಹ. ಇದೀಗ ಈ ಮಸೂದೆ ಶ್ವೇತಭವನಕ್ಕೆ ಹೋಗಲಿದ್ದು, ಅಧ್ಯಕ್ಷ ಬರಾಕ್ ಒಮಾಮ ಅವರ ಅಂಕಿತ ಬಿದ್ದ ನಂತರ ಕಾಯ್ದೆಯಾಗಿ ಜಾರಿಗೊಳ್ಳಲಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.