ADVERTISEMENT

ಭಾರತ, ಇಂಡೋನೇಷ್ಯಾ, ಶ್ರೀಲಂಕಾ ಸೇರಿ 27 ರಾಷ್ಟ್ರಗಳಲ್ಲಿ ಸುನಾಮಿ: ವಿಜ್ಞಾನಿಗಳ ಎಚ್ಚರಿಕೆ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2012, 8:30 IST
Last Updated 11 ಏಪ್ರಿಲ್ 2012, 8:30 IST
ಭಾರತ, ಇಂಡೋನೇಷ್ಯಾ, ಶ್ರೀಲಂಕಾ ಸೇರಿ 27 ರಾಷ್ಟ್ರಗಳಲ್ಲಿ ಸುನಾಮಿ: ವಿಜ್ಞಾನಿಗಳ ಎಚ್ಚರಿಕೆ
ಭಾರತ, ಇಂಡೋನೇಷ್ಯಾ, ಶ್ರೀಲಂಕಾ ಸೇರಿ 27 ರಾಷ್ಟ್ರಗಳಲ್ಲಿ ಸುನಾಮಿ: ವಿಜ್ಞಾನಿಗಳ ಎಚ್ಚರಿಕೆ   

ವಾಷಿಂಗ್ಟನ್ (ಎಎಫ್ ಪಿ): ಇಂಡೋನೇಷ್ಯಾದ ಸುಮಾತ್ರಾ ಕರಾವಳಿ ಬಳಿ ಹಿಂದೂ ಮಹಾಸಾಗರ ಗರ್ಭದಲ್ಲಿ ಬುಧವಾರ ಸಂಭವಿಸಿರುವ ಭಾರಿ ಪ್ರಮಾಣದ ಭೂಕಂಪದ ಪರಿಣಾಮವಾಗಿ ಭಾರತದ ಕರಾವಳಿ ಪ್ರದೇಶಗಳಾದ ತಮಿಳುನಾಡು, ಆಂಧ್ರ ಪ್ರದೇಶ ಮತ್ತು ಅಂಡಮಾನ್ ನಿಕೋಬಾರ್ ದ್ವೀಪಗಳಲ್ಲೂ ಸುನಾಮಿ ಸಂಭವಿಸುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಲಾಗಿದೆ.

ಇಂಡೋನೇಷ್ಯಾ, ಸಿಂಗಪುರ, ಥಾಯ್ಲೆಂಡ್, ಶ್ರಿಲಂಕಾ, ಬಾಂಗ್ಲಾದೇಶ, ಆಸ್ಟ್ರೇಲಿಯಾ, ಯುಎಇ ಮತ್ತು ಒಮನ್ ಸೇರಿದಂತೆ 27 ರಾಷ್ಟ್ರಗಳಲ್ಲಿ ಸುನಾಮಿ ಅಪಾಯದ ಬಗೆಗೂ ಎಚ್ಚರಿಕೆ ನೀಡಲಾಗಿದೆ.

ಅಮೆರಿಕದ ಭೂ ವಿಜ್ಞಾನಿಗಳು ಈ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಸುಮಾತ್ರಾ ಕರಾವಳಿಯಾಚೆ ಸಾಗರಗರ್ಭದಲ್ಲಿ ಸಂಭವಿಸಿರುವ ಭೂಕಂಪದಿಂದ ಹಿಂದೂ ಮಹಾಸಾಗರದಲ್ಲಿ ಸುನಾಮಿ ಅಲೆ ಏಳುವ ಅಪಾಯ ಇದೆ. ಆದರೆ ಇಂತಹ ರಕ್ಕಸ ಗಾತ್ರದ ಅಲೆ ಏಳಬಹುದೇ ಎಂಬುದು ಇನ್ನೂ ಖಚಿತಗೊಂಡಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ.

~ಈ ಗಾತ್ರದ ಭೂಕಂಪಗಳು ಹಿಂದೂ ಮಹಾಸಾಗರದ ಕರಾವಳಿಯುದ್ದಕ್ಕೂ ವ್ಯಾಪಕ ಹಾನಿ ಮಾಡುವಂತಹ ಸಾಮರ್ಥ್ಯವನ್ನು ಹೊಂದಿರುತ್ತವೆ~ ಎಂದು ಅಮೆರಿಕ ಶಾಂತಸಾಗರ ಸುನಾಮಿ ಮುನ್ನೆಚ್ಚರಿಕೆ ಕೇಂದ್ರ ಹೇಳಿದೆ.

ಭಾರತೀಯ ಕಾಲಮಾನ ಮಧ್ಯಾಹ್ನ 2.08 ಗಂಟೆ ವೇಳೆಗೆ ಸುಮಾತ್ರಾ ಕರಾವಳಿ ಬಳಿ ಸಾಗರಗರ್ಭದಲ್ಲಿ 33 ಕಿ.ಮೀ. ಆಳದಲ್ಲಿ ರಿಕ್ಟರ್ ಮಾಪಕದಲ್ಲಿ 8.7 ಗಾತ್ರದ ಭೂಕಂಪ ಸಂಭವಿಸಿದೆ ಎಂದು ಅಮೆರಿಕದ ಭೂ ಸರ್ವೇಕ್ಷಣಾ ಕೇಂದ್ರ ತಿಳಿಸಿದೆ. ಕೇಂದ್ರವು ಮೊದಲಿಗೆ ರಿಕ್ಟರ್ ಮಾಪಕದಲ್ಲಿ 8.9 ಗಾತ್ರದ ಭೂಕಂಪ ಸಂಭವಿಸಿದೆ ಎಂದು ವರದಿ ಮಾಡಿತ್ತು.

2004ರ ಡಿಸೆಂಬರ್ 26ರಂದು ರಿಕ್ಟರ್ ಮಾಪಕದಲ್ಲಿ 9.2 ಗಾತ್ರದ ಭೂಕಂಪ ಸುಮಾತ್ರಾ ಕರಾವಳಿಯಾಚೆ ಸಾಗರಗರ್ಭದಲ್ಲಿ ಸಂಭವಿಸಿದಾಗ ಎದ್ದಿದ್ದ ರಕ್ಕಸ ಸುನಾಮಿ ದಕ್ಷಿಣ ಏಷ್ಯಾದ್ಯಂತ ಭಾರಿ ಅನಾಹುತ ಉಂಟು ಮಾಡಿ ಸುಮಾರು 2.20 ಲಕ್ಷಕ್ಕೂ ಹೆಚ್ಚು ಜನರನ್ನು ಬಲಿ ತೆಗೆದುಕೊಂಡಿತ್ತು.
 
ಕಳೆದ ವರ್ಷ ರಿಕ್ಟರ್ ಮಾಪಕದಲ್ಲಿ 9 ಪ್ರಮಾಣದ ಸುನಾಮಿ ಅಲೆ ಎದ್ದಾಗ ಜಪಾನ್ ನಲ್ಲಿ ಪರಮಾಣು ಸ್ಥಾವರಗಳು ಹಾನಿಗೊಂಡು 19,000 ಜನ ಅಸು ನೀಗಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.