ADVERTISEMENT

ಭಾರತ-ಜಪಾನ್ ಮಾತುಕತೆ: ಪರಮಾಣು ಸಹಕಾರಕ್ಕೆ ಆದ್ಯತೆ

​ಪ್ರಜಾವಾಣಿ ವಾರ್ತೆ
Published 29 ಅಕ್ಟೋಬರ್ 2011, 19:30 IST
Last Updated 29 ಅಕ್ಟೋಬರ್ 2011, 19:30 IST

ಟೋಕಿಯೊ (ಪಿಟಿಐ): ಉಭಯ ದೇಶಗಳ ನಡುವಿನ 5ನೇ ತಂತ್ರಗಾರಿಕೆಯ ಮಾತುಕತೆಯಲ್ಲಿ ನಾಗರಿಕ ಪರಮಾಣು ಸಹಕಾರಕ್ಕೆ ಸಂಬಂಧಿಸಿದಂತೆ ಚರ್ಚಿಸುವುದಾಗಿ ಜಪಾನ್ ಶನಿವಾರ ಭಾರತಕ್ಕೆ ಭರವಸೆ ನೀಡಿದೆ.

ತನ್ನ ದೇಶದಲ್ಲಿ ಸಂಭವಿಸಿದ ಅಣು ದುರಂತದ ಮಧ್ಯೆಯೂ ಜಪಾನ್ ಈ ಭರವಸೆ ನೀಡಿರುವುದು ಮಹತ್ವದ್ದಾಗಿದೆ. ಭಾರತದ ಏಳು ಪರಮಾಣು ಸಾಮಗ್ರಿಗಳ ಮೇಲೆ ವಿಧಿಸಿದ್ದ ನಿಷೇಧವನ್ನು ತೆಗೆದು ಹಾಕುವ ಜಪಾನ್ ನಿರ್ಧಾರಕ್ಕೆ  ವಿದೇಶಾಂಗ ವ್ಯವಹಾರ ಸಚಿವ ಎಸ್.ಎಂ.ಕೃಷ್ಣ ಮೆಚ್ಚುಗೆ ವ್ಯಕ್ತಪಡಿಸಿದರು.

ಜಪಾನ್ ತೆಗೆದುಕೊಂಡ ಈ ನಿರ್ಧಾರವು ಉನ್ನತ ತಂತ್ರಜ್ಞಾನಕ್ಕೆ ಸಂಬಂಧಿಸಿದ ದ್ವಿಪಕ್ಷೀಯ ವ್ಯಾಪಾರಕ್ಕೆ ಸುಗಮ ಹಾದಿ ಮಾಡಿಕೊಡಲಿದೆ. `ಪರಸ್ಪರ ನಾಗರಿಕ ಪರಮಾಣು ಸಹಕಾರಕ್ಕೆ ಸಂಬಂಧಿಸಿದಂತೆ ನಾನು ಜಪಾನ್ ವಿದೇಶಾಂಗ ಸಚಿವ ಕೊಯ್ಚಿರೊ ಜೆಂಬಾ ಅವರ ಜೊತೆ ಚರ್ಚಿಸಿದ್ದೇನೆ.

ಈಗಾಗಲೇ ಈ ಸಂಬಂಧ 3 ಸುತ್ತಿನ ಮಾತುಕತೆ ನಡೆಸಿದ್ದೇವೆ. ಉಭಯ ದೇಶಗಳ ನಡುವಿನ ಸಹಭಾಗಿತ್ವವನ್ನು ಉನ್ನತ ಮಟ್ಟಕ್ಕೆ ಏರಿಸುವುದು ನಮ್ಮ ಉದ್ದೇಶವಾಗಿದೆ~ ಎಂದು ಕೃಷ್ಣ ತಿಳಿಸಿದರು.

ಮೆಟ್ರೊ ರೈಲು ಸಂಪರ್ಕ ಜಾಲ ವ್ಯವಸ್ಥೆಯಲ್ಲಿ ಯಶಸ್ವಿ ಜಂಟಿ ಸಹಕಾರದ ಬಳಿಕ ಇದೀಗ ಜಪಾನ್, ಭಾರತದಲ್ಲಿ ಅತಿ ವೇಗದ ಬುಲೆಟ್ ರೈಲು ಯೋಜನೆಗೆ ನೆರವು ನೀಡುವ ಪ್ರಸ್ತಾಪ ಮುಂದಿಟ್ಟಿದೆ.

ದೆಹಲಿ, ಆಗ್ರಾ, ಬೆಂಗಳೂರು, ಚೆನ್ನೈ ಮಾರ್ಗ ಹಾಗೂ ಬೆಂಗಳೂರು -ಹೈದರಾಬಾದ್ ಮಾರ್ಗದಲ್ಲಿ ಬುಲೆಟ್ ರೈಲು ಯೋಜನೆಗೆ ಸಂಬಂಧಿಸಿದ ಅಧ್ಯಯನ ವರದಿ ಸಿದ್ಧವಾಗಿರುವುದಾಗಿ ಜೆಂಬಾ ಈ ಸಂದರ್ಭದಲ್ಲಿ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.