ಲಾಗೋಸ್, ನೈಜೀರಿಯ (ಐಎಎನ್‌ಎಸ್): ಆಫ್ರಿಕಾದ ತೈಲ ಸಂಪದ್ಭರಿತ ದೇಶವಾದ ನೈಜೀರಿಯಾ ಜತೆ ಜಂಟಿ ಶೈಕ್ಷಣಿಕ ಯೋಜನೆ ಸೇರಿದಂತೆ ತಂತ್ರಗಾರಿಕೆ ಪಾಲುಗಾರಿಕೆಗೆ ಮುಂದಾಗಿರುವ ಭಾರತ, ಆ ದೇಶದೊಂದಿಗೆ ಉನ್ನತ ಮಟ್ಟದ ಮಾತುಕತೆ ನಡೆಸಿದೆ.
ಜಂಟಿ ರಕ್ಷಣಾ ಉತ್ಪಾದನೆ ಸೇರಿದಂತೆ ಉಭಯ ದೇಶಗಳ ಚಿಂತಕರು ದ್ವಿಪಕ್ಷೀಯ ಮಾತುಕತೆ ನಡೆಸಿದ್ದಾರೆ. ವಿಶ್ವ ವ್ಯವಹಾರಗಳ ಭಾರತೀಯ ಪರಿಷತ್ (ಐಸಿಡಬ್ಲ್ಯುಎ)ನ ಮಹಾ ನಿರ್ದೇಶಕ ಸುಧೀರ್ ಟಿ.ದೇವಾರೆ ನೇತೃತ್ವದ ಉನ್ನತ ಮಟ್ಟದ ರಾಜತಾಂತ್ರಿಕ ಅಧಿಕಾರಿಗಳ ತಂಡ ಭಾರತ ಸರ್ಕಾರದ ಸೂಚನೆಯಂತೆ ನೈಜೀರಿಯದ ವಾಣಿಜ್ಯ ನಗರಿಯಲ್ಲಿ ದ್ವಿಪಕ್ಷೀಯ ಮಾತುಕತೆ ನಡೆಸಿದೆ.
ಮಾರ್ಚ್ 14ಮತ್ತು 15ರಂದು ಎರಡು ದಿನಗಳ ಕಾಲ ಈ ಮಾತುಕತೆ ನಡೆದಿದೆ. ನೈಜೀರಿಯದ ಅಂತರರಾಷ್ಟ್ರೀಯ ವ್ಯವಹಾರಗಳ ಸಂಸ್ಥೆ ಈ ಸಮಾವೇಶವನ್ನು ಏರ್ಪಡಿಸಿತ್ತು.
ಉಭಯ ದೇಶಗಳ ಜಂಟಿ ಶೈಕ್ಷಣಿಕ ಯೋಜನೆಗೆ ಅನುಕೂಲಕರವಾಗುವ ನಿಟ್ಟಿನಲ್ಲಿ ವಿದ್ವಾಂಸರ ವಿನಿಮಯ, ಹಿಂದೂ ಮಹಾಸಾಗರದಲ್ಲಿ ಕಡಲ್ಗಳ್ಳರ ನಿಯಂತ್ರಣಕ್ಕೆ ಪರಸ್ಪರ ಸಹಕಾರ ಮತ್ತು ಬದ್ಧತೆ, ಜಂಟಿ ರಕ್ಷಣಾ ಉತ್ಪಾದನೆಗೆ ಪ್ರೋತ್ಸಾಹ ನೀಡುವ ಕುರಿತು ಮಾತುಕತೆ ನಡೆಸಲಾಗಿದೆ.
ಇದನ್ನು ಶೈಕ್ಷಣಿಕ ಸಮಾವೇಶ ಎಂದು ಕರೆಯಲಾಗಿದ್ದು, ಇಲ್ಲಿ ತೆಗೆದುಕೊಂಡಿರುವ ನಿರ್ಣಯಗಳು ಹಾಗೂ ಸಹಮತದ ವಿಷಯಗಳ ಕುರಿತು ಮುಂಬರುವ ದಿನಗಳಲ್ಲಿ ಉಭಯತ್ರರ ನಡುವೆ ಒಪ್ಪಂದ ಏರ್ಪಡಲಿದೆ.
ಅದೀಸ್ ಅಬಾಬಾದಲ್ಲಿ 2011ರಲ್ಲಿ ನಡೆದ ಭಾರತ- ಆಫ್ರಿಕಾ ವೇದಿಕೆಯ ಸಮಾವೇಶದಲ್ಲಿ ತೆಗೆದುಕೊಂಡ ನಿರ್ಣಯದ ಭಾಗವಾಗಿ ಭಾರತ- ನೈಜೀರಿಯ ನಡುವೆ ಮಾತುಕತೆ ನಡೆದಿದೆ.
ವಿಶ್ವ ವ್ಯವಹಾರಗಳ ಭಾರತೀಯ ಪರಿಷತ್ ಮತ್ತು ನೈಜೀರಿಯದ ಅಂತರರಾಷ್ಟ್ರೀಯ ವ್ಯವಹಾರಗಳ ಸಂಸ್ಥೆ ಜಂಟಿ ಶೈಕ್ಷಣಿಕ ಯೋಜನೆ ಕುರಿತಂತೆ ಒಪ್ಪಂದವೊಂದಕ್ಕೆ 2007ರಲ್ಲಿ ಸಹಿ ಹಾಕಿದ್ದವು.
ಈ ನಡುವೆ ಭಾರತ- ನೈಜೀರಿಯ ನಡುವೆ ತಂತ್ರಗಾರಿಕೆ ಮತ್ತು ಆರ್ಥಿಕ ಒಪ್ಪಂದಗಳು ಜಾರಿಯಲ್ಲಿದ್ದು, ಈ ಒಪ್ಪಂದಗಳನ್ನು ಇನ್ನಷ್ಟು ಬಲ ಪಡಿಸುವುದು ಈಗಿನ ಮಾತುಕತೆಯ ಉದ್ದೇಶವಾಗಿದೆ.
ಪ್ರಸ್ತುತ ಶೇ 10ರಷ್ಟು ಕಚ್ಚಾ ತೈಲವನ್ನು ನೈಜೀರಿಯ ಭಾರತಕ್ಕೆ ಪೂರೈಕೆ ಮಾಡುತ್ತಿದೆ. ಉಭಯ ದೇಶಗಳ ನಡುವಿನ ವ್ಯವಹಾರ 2010-11ರಲ್ಲಿ 13 ಶತಕೋಟಿ ಡಾಲರ್ ಆಗಿದ್ದು, ಈ ವರ್ಷದ ಅಂತ್ಯಕ್ಕೆ ಸುಮಾರು 19 ಶತಕೋಟಿ ಡಾಲರ್ ವ್ಯವಹಾರ ನಡೆಯುವ ಸಾಧ್ಯತೆ ಇದೆ.
ಸದ್ಯಕ್ಕೆ ಸುಮಾರು ನೂರಕ್ಕೂ ಅಧಿಕ ಭಾರತೀಯ ಕಂಪೆನಿಗಳು ನೈಜೀರಿಯಾದಲ್ಲಿ ವ್ಯವಹಾರ ನಡೆಸುತ್ತಿದ್ದು, 35 ಸಾವಿರಕ್ಕೂ ಅಧಿಕ ಭಾರತೀಯರು ಅಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.
ಉಭಯ ದೇಶಗಳ ನಡುವೆ ವ್ಯವಹಾರ ಮತ್ತು ವೈದ್ಯಕೀಯ ಪ್ರವಾಸ ಪ್ರಮುಖ ಕ್ಷೇತ್ರಗಳಾಗಿದ್ದು, 2011ರಲ್ಲಿ ಸುಮಾರು 33 ಸಾವಿರ ನೈಜೀರಿಯ ಪ್ರಜೆಗಳು ಭಾರತಕ್ಕೆ ಭೇಟಿ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.