ADVERTISEMENT

ಮಂಡೇಲಾ ಸ್ಮರಣೆಗೆ ಜನಸಾಗರ

​ಪ್ರಜಾವಾಣಿ ವಾರ್ತೆ
Published 10 ಡಿಸೆಂಬರ್ 2013, 19:30 IST
Last Updated 10 ಡಿಸೆಂಬರ್ 2013, 19:30 IST

ಜೋಹಾನ್ಸ್‌ಬರ್ಗ್‌ (ಐಎಎನ್‌ಎಸ್‌): ನೆಲ್ಸನ್‌ ಮಂಡೇಲಾ ಅವರ ಸಂಸ್ಮರಣಾ ದಿನದ ಅಂಗವಾಗಿ ಮಂಗಳವಾರ ಭಾರಿ ಮಳೆಯನ್ನೂ ಲೆಕ್ಕಿಸದೇ ಸಾವಿರಾರು ಜನ ಇಲ್ಲಿನ ಸೊವಿಟೊದ ಮೈದಾನದಲ್ಲಿ ಸೇರಿದ್ದರು.

ಮಹಾನ್‌ ನಾಯಕನ ಸಂಸ್ಮರಣಾ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲು ಮೈದಾನದ ದ್ವಾರ ತೆರೆಯುವ ಮೊದಲೇ ನಸುಕಿನ ಎರಡು ಗಂಟೆಯಿಂದಲೇ ಜನ ಸಾಲುಗಟ್ಟಿದ್ದರು.

ವಿಶ್ವ ಸಂಸ್ಥೆಯ ಮಹಾ ಪ್ರಧಾನ ಕಾರ್ಯದರ್ಶಿ ಬಾನ್‌ ಕಿ ಮೂನ್‌ ಹಾಗೂ ದಕ್ಷಿಣ ಆಫ್ರಿಕದ ಅಧ್ಯಕ್ಷ, ರಾಷ್ಟ್ರಪತಿ ಪ್ರಣವ್‌ ಮುಖರ್ಜಿ, ರಷ್ಯಾ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಅವರಲ್ಲದೇ ಹಲವು ದೇಶಗಳ ಗಣ್ಯರು  ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕ್ಯೂಬಾ ಅಧ್ಯಕ್ಷ ರೌಲ್‌ ಕ್ಯಾಸ್ಟ್ರೊ ಹಾಗೂ ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮ ಪರಸ್ಪರ ಕೈ ಕುಲುಕಿ ಅಭಿನಂದಿಸಿಕೊಂಡಿದ್ದು ಈ ಸಭೆಯ ವಿಶೇಷವಾಗಿತ್ತು. ಸುಮಾರು 80,000 ಜನ ಸೇರಿದ್ದರು.

ಅತ್ಯುನ್ನತ ವ್ಯಕ್ತಿತ್ವದ ಮಂಡೇಲಾ: ಕ್ಷಮಾಗುಣ ಹಾಗೂ ಸಾಮರಸ್ಯ ಇವು ಅತ್ಯು­ನ್ನತ ವ್ಯಕ್ತಿತ್ವದ ನೆಲ್ಸನ್‌ ಮಂಡೇಲಾ ಅವರು ಬಿಟ್ಟು ಹೋದ ಆಸ್ತಿ. ಅವರ ಈ ಗುಣಗಳನ್ನು ಜಗತ್ತು ಎಂದಿಗೂ ಗೌರವಿಸುತ್ತದೆ ಎಂದು ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಹೇಳಿದರು. ಮಂಡೇಲಾ ಸಂಸ್ಮರಣ ಕಾರ್ಯಕ್ರ­ಮ­ದಲ್ಲಿ ಮಾತ­ನಾಡಿದ ಅವರು, ‘ಮಂಡೇಲಾ ಅವರು ತ್ಯಾಗದ ಜೀವನ ನಡೆಸಿದ್ದವರು. ಆ ಮೂಲಕ ತಮ್ಮ ಗುರಿಯನ್ನು ತಲುಪಿದವರು’ ಎಂದು ಸ್ಮರಿಸಿದರು.
ಭಾರತೀಯರು ಮಂಡೇಲಾ ಅವರನ್ನು ಮೆಚ್ಚಿ­ದ್ದಾರೆ. ಭಾರತದ ಕುರಿತು ಅವರಿಗಿರುವ ಸ್ನೇಹ ಮತ್ತು ಪ್ರೀತಿಯನ್ನು ಗೌರವಿಸುತ್ತೇವೆ, ಅವರ ಪರಂಪರೆಯನ್ನು ಮುಂದುವರಿಸುತ್ತೇವೆ ಎಂದರು.

ಆಫ್ರಿಕಾ ಗಾಂಧಿಗೆ ಒಬಾಮ ನಮನ
ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮ ತಮ್ಮ ಸ್ಫೂರ್ತಿಯ ಸೆಲೆ ನೆಲ್ಸನ್‌ ಮಂಡೇಲಾ ಅವರಿಗೆ ಅಂತಿಮ ನಮನ ಸಲ್ಲಿಸಿದರು.ಈ ಸಂದರ್ಭದಲ್ಲಿ ಮಾತನಾಡಿದ ಅವರು, ‘ಮಂಡೇಲಾ ಅವರು ಮಹಾನ್‌  ಪುರುಷ. ಅವರು ಗಾಂಧಿ, ಮಾರ್ಟಿನ್‌ ಲೂಥರ್‌ ಕಿಂಗ್‌ ಹಾಗೂ ಅಬ್ರಹಾಂ ಲಿಂಕನ್‌ ಅವರ ಸಾಲಿಗೆ ಸೇರುತ್ತಾರೆ. ಕಪ್ಪುಜನರ ಸಮಾನತೆಗಾಗಿ ಹೋರಾಡಿ, ನ್ಯಾಯ ದೊರಕಿಸಿ ಕೊಟ್ಟ ಆ ವ್ಯಕ್ತಿತ್ವವನ್ನು ಮಾತುಗಳಲ್ಲಿ ಬಣ್ಣಿಸಲು ಸಾಧ್ಯವಿಲ್ಲ. ಅವರು ಇಪ್ಪತ್ತನೇ ಶತಮಾನದ ಅದ್ಭುತ ನಾಯಕ’ ಎಂದು ಬಣ್ಣಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT