ADVERTISEMENT

ಮಣ್ಣಿನ ಬದಲು ಸಮುದ್ರದಲ್ಲಿ ಅಂತ್ಯಸಂಸ್ಕಾರ

​ಪ್ರಜಾವಾಣಿ ವಾರ್ತೆ
Published 2 ಮೇ 2011, 19:30 IST
Last Updated 2 ಮೇ 2011, 19:30 IST

ವಾಷಿಂಗ್ಟನ್ (ಪಿಟಿಐ):  ಒಸಾಮಾ ಬಿನ್ ಲಾಡೆನ್‌ನ ಅಂತಿಮ ಸಂಸ್ಕಾರವನ್ನು ಸಮುದ್ರದಲ್ಲಿ ನೆರವೇರಿಸಲಾಯಿತು ಎಂದು ಅಮೆರಿಕದ ಅಧಿಕಾರಿಗಳು ತಿಳಿಸಿದ್ದಾರೆ.

ಲಾಡೆನ್ ಅನುಯಾಯಿಗಳ ದಾಳಿಯ ಸಾಧ್ಯತೆಯನ್ನು ತಪ್ಪಿಸುವ ಸಲುವಾಗಿ ಮಣ್ಣಿನ ಬದಲು ಸಮುದ್ರದಲ್ಲಿ ಅಂತ್ಯಸಂಸ್ಕಾರ ನಡೆಸಲಾಗಿದೆ.

ಲಾಡೆನ್‌ನನ್ನು ಅಮೆರಿಕ ಪಡೆಗಳು ಹತ್ಯೆಗೈದ ಬಳಿಕ ಸಮುದ್ರದಲ್ಲಿ ಇಸ್ಲಾಂ ಆಚರಣೆಯಂತೆ ಅಂತಿಮ ಸಂಸ್ಕಾರ ನಡೆಸಲಾಯಿತು ಎಂದು  ಅಧಿಕಾರಿಗಳು ತಿಳಿಸಿದ್ದಾರೆ.

‘ಇಸ್ಲಾಂ ಧರ್ಮದ ಆಚರಣೆಯಂತೆ  ಶವಸಂಸ್ಕಾರ ನಡೆಸಲಾಗಿದೆ. ಶವಸಂಸ್ಕಾರದ ವಿಷಯವನ್ನು ನಾವು ಬಹಳ ಗಂಭೀರವಾಗಿಯೇ ಪರಿಗಣಿಸಿದ್ದೆವಲ್ಲದೆ ಇಸ್ಲಾಂ ವಿಧಿವಿಧಾನದ ಪ್ರಕಾರ ಸೂಕ್ತವಾದ ರೀತಿಯಲ್ಲಿಯೇ ಅದನ್ನು ನೆರವೇರಿಸಿದ್ದೇವೆ’ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
 
ಇದನ್ನು ಹೊರತುಪಡಿಸಿದರೆ ಅಂತ್ಯಸಂಸ್ಕಾರದ ಕುರಿತು ಇತರ ಮಾಹಿತಿ ಲಭ್ಯವಿಲ್ಲ ಎನ್ನಲಾಗಿದೆ. ಇದೇ ವೇಳೆ ಲಾಡೆನ್ ಮೃತದೇಹದ ಅಂತ್ಯಸಂಸ್ಕಾರವನ್ನು ನಡೆಸಲು ಯಾವುದೇ ದೇಶ ಮುಂದೆ ಬರಲಾರದು ಎಂಬ ಕಾರಣವೂ ಈ ರೀತಿ ಅಂತ್ಯಸಂಸ್ಕಾರ ನಡೆಸಲು ಕಾರಣ ಎನ್ನಲಾಗಿದೆ. ಹತ್ಯೆಗೈದ ಒಂದು ಗಂಟೆಯೊಳಗಾಗಿ ಅಂತ್ಯಸಂಸ್ಕಾರ ನಡೆದಿದೆ ಎನ್ನಲಾಗಿದೆ.

ಮೃತದೇಹದ ಚಿತ್ರ ಬಿಡುಗಡೆ
ಇಸ್ಲಾಮಾಬಾದ್ (ಪಿಟಿಐ): ಲಾಡೆನ್ ಹತ್ಯೆಯನ್ನು ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅಧಿಕೃತವಾಗಿ ಘೋಷಿಸಿದ ಬಳಿಕ ಪಾಕ್ ಟಿವಿ ಚಾನೆಲ್‌ಗಳು ಆತನ ಮೃತದೇಹದ ಚಿತ್ರಗಳ್ನು ಬಿಡುಗಡೆ ಮಾಡಿವೆ.

ಚಿತ್ರದಲ್ಲಿ ಲಾಡೆನ್‌ನ ಹಣೆ ಮತ್ತು ಎಡ ಕಪೋಲದಲ್ಲಿ ರಕ್ತ ಹರಿದಿರುವುದು ಕಾಣುತ್ತದೆ. ಆತನ ಬಲಗಣ್ಣು ಮುಚ್ಚಿಕೊಂಡಿದ್ದರೂ, ಕಣ್ಣಿನ ಬಿಳಿ ಭಾಗಗಳು ಗೋಚರಿಸುತ್ತದೆ. ಮುಖದಲ್ಲಿ ಪೊದೆಯಂತಹ ಕಪ್ಪು ಗಡ್ಡವಿದ್ದು, ಇತ್ತೀಚೆಗೆ ಬಿಡುಗಡೆ ಮಾಡಲಾಗಿದ್ದ ಆತನ ವಿಡಿಯೊದಲ್ಲಿ ಬಿಳಿ ಮತ್ತು ಬೂದು ಬಣ್ಣದ ಕೂದಲುಗಳು ಹೆಚ್ಚಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.