ADVERTISEMENT

ಮತ್ತೆ ಗಿಲಾನಿ ಕಿವಿ ಹಿಂಡಿದ ಕೋರ್ಟ್

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2013, 15:38 IST
Last Updated 17 ಡಿಸೆಂಬರ್ 2013, 15:38 IST
ಮತ್ತೆ ಗಿಲಾನಿ ಕಿವಿ ಹಿಂಡಿದ ಕೋರ್ಟ್
ಮತ್ತೆ ಗಿಲಾನಿ ಕಿವಿ ಹಿಂಡಿದ ಕೋರ್ಟ್   

ಇಸ್ಲಾಮಾಬಾದ್ (ಪಿಟಿಐ): ನ್ಯಾಯಾಂಗದೊಂದಿಗೆ ಸಂಘರ್ಷಕ್ಕೆ ಇಳಿದಿರುವ ಪಾಕಿಸ್ತಾನದ ಪ್ರಧಾನಿ ಯೂಸುಫ್ ರಜಾ ಗಿಲಾನಿ ಅವರತ್ತ ಸುಪ್ರೀಂ  ಕೋರ್ಟ್ ಗುರುವಾರ ಮತ್ತೆ ಚಾಟಿ ಬೀಸಿದೆ.  ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರ ವಿರುದ್ಧದ ಭ್ರಷ್ಟಾಚಾರ ಆರೋಪಗಳ ಮರು ತನಿಖೆಗಾಗಿ ಸ್ವಿಟ್ಜರ್‌ಲೆಂಡ್‌ಗೆ ಪತ್ರ ಬರೆಯಬೇಕೆಂಬ ತನ್ನ ಆದೇಶವನ್ನು ಪಾಲಿಸದೆ ಅನ್ಯ ಮಾರ್ಗವಿಲ್ಲ ಎಂದು ಅವರಿಗೆ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದೆ.

ಗಿಲಾನಿ ಅವರ ವಾದವನ್ನು ಆಲಿಸಲು ನಿರಾಕರಿಸಿದ ಮುಖ್ಯ ನ್ಯಾಯಮೂರ್ತಿ ಇಫ್ತಿಕಾರ್ ಚೌಧರಿ ನೇತೃತ್ವದ ಎಂಟು ನ್ಯಾಯಮೂರ್ತಿಗಳ ಪೀಠ, `ನ್ಯಾಯಾಲಯದ ಆದೇಶ ಪಾಲಿಸಿ, ಇಲ್ಲವೇ ನ್ಯಾಯಾಂಗ ನಿಂದನೆ ಆರೋಪ ಎದುರಿಸಲು ಸಜ್ಜಾಗಿ~ ಎಂದು ಕಟು ಶಬ್ದಗಳಲ್ಲಿ ಅಸಮಾಧಾನ  ವ್ಯಕ್ತಪಡಿಸಿದೆ.

`ಭ್ರಷ್ಟಾಚಾರ ಹಗರಣದಲ್ಲಿ ಭಾಗಿಯಾದ ವ್ಯಕ್ತಿ ಗಿಲಾನಿ ಅವರ ಪಾಕಿಸ್ತಾನ ಪೀಪಲ್ಸ್ ಪಕ್ಷಕ್ಕೆ ಸೇರಿರಬಹುದು. ಆದರೆ, ಕಾನೂನಿಗಿಂತ ಯಾರೂ ದೊಡ್ಡವರಲ್ಲ~ ಎಂದು ಹೇಳುವ ಮೂಲಕ ಸುಪ್ರೀಂಕೋರ್ಟ್ ಮತ್ತೊಮ್ಮೆ ಪ್ರಧಾನಿಯ ಕಿವಿ ಹಿಂಡಿದೆ.

ಹಿಂದಿನ ಸೇನಾ ಆಡಳಿತಾಧಿಕಾರಿ ಪರ್ವೇಜ್ ಮುಷರಫ್ ಅವರು 2009ರಲ್ಲಿ ಭ್ರಷ್ಟಾಚಾರದ ವಿರುದ್ಧ ನೀಡಿದ್ದ ಕ್ಷಮಾದಾನದಿಂದಾಗಿ, ಸ್ವಿಟ್ಜರ್‌ಲೆಂಡ್‌ನಲ್ಲಿ ಅಕ್ರಮವಾಗಿ ಹಣ ಇಟ್ಟಿರುವ ಆರೋಪ ಹೊತ್ತ ಪ್ರಕರಣಗಳಿಂದ ಗಿಲಾನಿ ಪಾರಾಗಿದ್ದರು. ಅಧ್ಯಕ್ಷರಿಗೆ ಅಪರಾಧ ಪ್ರಕರಣಗಳಿಂದ ಸಂಪೂರ್ಣ ವಿನಾಯಿತಿ ಇರುವುದರಿಂದ ಪ್ರಕರಣಗಳ ಮರು ತನಿಖೆ ಅಸಾಧ್ಯ ಎಂದು ಸರ್ಕಾರ ಕೋರ್ಟ್‌ನಲ್ಲಿ ವಾದಿಸಿತ್ತು.

ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೇ 13ರಂದು ನ್ಯಾಯಾಲಯಕ್ಕೆ ಹಾಜರಾಗಬೇಕೆಂಬ ಸುಪ್ರೀಂಕೋರ್ಟ್ ಆದೇಶದ ವಿರುದ್ಧ ಗಿಲಾನಿ ಸಲ್ಲಿಸಿದ್ದ 200 ಪುಟಗಳ ಮೇಲ್ಮನವಿಯನ್ನು ಪರಿಶೀಲಿಸಿದ ಪೀಠ, ಅದರಲ್ಲಿರುವ ಕೆಲವು ಆಕ್ಷೇಪಾರ್ಹ ಅಂಶಗಳನ್ನು ಅಳಿಸಿಹಾಕಬೇಕು ಎಂದು ವಕೀಲರಿಗೆ ಆದೇಶಿಸಿತು.
`ಪತ್ರ ಬರೆಯುವಂತೆ ಆದೇಶ ನೀಡಿ ಎರಡು ವರ್ಷವಾದರೂ ನ್ಯಾಯಾಲಯದ ಆದೇಶ ಪಾಲನೆಯಾಗಿಲ್ಲ. ನ್ಯಾಯಾಲಯ ಎರಡು ವರ್ಷಗಳಿಂದ ತಾಳ್ಮೆಯಿಂದ ಸಹಿಸಿಕೊಂಡಿದೆ~ ಎಂದು ಚೌಧರಿ ಅಸಮಾಧಾನ ಹೊರಹಾಕಿದರು. 


 ಸ್ವಿಸ್ ಅಧಿಕಾರಿಗಳಿಗೆ ಪತ್ರ ಬರೆದರೆ ಗಿಲಾನಿ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣ ತಾನಾಗಿಯೇ ಕೊನೆಗೊಳ್ಳಲಿದೆ. ಅದಕ್ಕೂ ಮುಖ್ಯವಾಗಿ ವಿದೇಶಿ ಬ್ಯಾಂಕುಗಳಲ್ಲಿರುವ ಆರು ಕೋಟಿ ಡಾಲರ್ ಪಾಕಿಸ್ತಾನಕ್ಕೆ ಮರಳಿ ಬರಲಿದೆ ಎಂದರು.

`ಪ್ರಧಾನಿಯಾದವರು ಯಾವುದೇ ಸಂಸ್ಥೆಯನ್ನು ಶಿಥಿಲಗೊಳಿಸಬಾರದು. ಈ ಹಣ ನಮ್ಮ ಜೇಬಿನಿಂದ ಬಂದಿದ್ದಲ್ಲ. ಜನಸಾಮಾನ್ಯರಿಗೆ ಸೇರಿದ ಹಣವನ್ನು ಮರಳಿ ದೇಶಕ್ಕೆ ತರಬೇಕು~ ಎಂದು ಹೇಳಿದರು. 

ನ್ಯಾಯಾಂಗ ನಿಂದನೆ ಪ್ರಕರಣ ಊರ್ಜಿತವಾದರೆ ಗಿಲಾನಿ 6 ತಿಂಗಳ ಸೆರೆವಾಸದ ಜೊತೆಗೆ 5 ವರ್ಷ ಸಾರ್ವಜನಿಕ ಸೇವೆಯಿಂದ ಅನರ್ಹರಾಗುತ್ತಾರೆ.

ಕೊನೆಗೂ ಬಾರದ ಇಜಾಜ್

ADVERTISEMENT

ಇಸ್ಲಾಮಾಬಾದ್ (ಪಿಟಿಐ): ಮೆಮೊಗೇಟ್ ಹಗರಣಕ್ಕೆ ಸಂಬಂಧಿಸಿದಂತೆ ಇಲ್ಲಿನ ನ್ಯಾಯಾಂಗ ಆಯೋಗದ ಎದುರು ಹಾಜರಾಗಲು ಪಾಕಿಸ್ತಾನ ಮೂಲದ ಅಮೆರಿಕದ ಉದ್ಯಮಿ ಮನ್ಸೂರ್ ಇಜಾಜ್ ಗುರುವಾರ ಸಹ ವಿಫಲರಾಗಿದ್ದಾರೆ.

ಆದರೆ ಇಜಾಜ್ ಲಂಡನ್‌ನಲ್ಲಿನ ಪಾಕಿಸ್ತಾನದ ರಾಯಭಾರ ಕಚೇರಿಯಲ್ಲಿ ಹೇಳಿಕೆ ನೀಡಲು ಸಮ್ಮತಿಸಿದ್ದಾರೆ ಎಂದು ಅವರ ವಕೀಲ ಅಕ್ರಮ್ ಶೇಖ್ ಕೋರ್ಟ್‌ಗೆ ತಿಳಿಸಿದ್ದಾರೆ.

ಇದು ಆಯೋಗದ ಮುಂದೆ ಹಾಜರಾಗಲು ಇಜಾಜ್ ಅವರಿಗೆ ನೀಡಲಾದ ಕೊನೆಯ ಅವಕಾಶವಾಗಿತ್ತು. ಅವರು ಇದಕ್ಕೆ ಮುನ್ನ ಎರಡು ಬಾರಿ ಆಯೋಗದ ಮುಂದೆ ಹಾಜರಾಗಲು ವಿಫಲರಾಗಿದ್ದರು. ಹಿಂದೆ ತಮ್ಮ ಗೈರುಹಾಜರಿಗೆ ನೀಡಿದ್ದ ಭದ್ರತೆಯ ಕಾರಣವನ್ನೇ ಈ ಬಾರಿಯೂ  ಇಜಾಜ್ ನೀಡಿದ್ದಾರೆ.

ಭಯೋತ್ಪಾದಕ ಒಸಾಮ ಬಿನ್ ಲಾಡೆನ್ ಹತ್ಯೆಯ ಬಳಿಕ ದೇಶದಲ್ಲಿ ಸೇನಾ ಕ್ಷಿಪ್ರಕ್ರಾಂತಿ ಸಂಭವಿಸಬಹುದು ಎಂಬ ಆತಂಕವನ್ನು ಒಳಗೊಂಡ ರಹಸ್ಯ ಪತ್ರವೊಂದನ್ನು ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರು ಅಮೆರಿಕಕ್ಕೆ ಕಳುಹಿಸಿದ್ದರು ಎನ್ನಲಾದ ವಿವಾದ ಇದಾಗಿದೆ.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.