ADVERTISEMENT

ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಅಶಾಂತಿ

​ಪ್ರಜಾವಾಣಿ ವಾರ್ತೆ
Published 15 ಫೆಬ್ರುವರಿ 2011, 16:35 IST
Last Updated 15 ಫೆಬ್ರುವರಿ 2011, 16:35 IST
ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಅಶಾಂತಿ
ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲಿ ಅಶಾಂತಿ   

ಕೈರೊ/ ಟೆಹರಾನ್/ ಮನಾಮ (ಐಎಎನ್‌ಎಸ್): ಈಜಿಪ್ಟ್ ಮತ್ತು ಟ್ಯುನೀಷಿಯಾದ ನಿರಂಕುಶ ಆಡಳಿತಕ್ಕೆ ಅಂತ್ಯ ಹಾಡಿದ ಜನಾಂದೋಲನದ ಪ್ರಭಾವ ಈಗ ಇತರ ದೇಶಗಳಲ್ಲೂ ತೀವ್ರಗೊಳ್ಳಲಾರಂಭಿಸಿದೆ. ಬಹು ಕಾಲದ ‘ಸರ್ವಾಧಿಕಾರ’ವನ್ನು ಕೊನೆಗಾಣಿಸುವ ಪಣ ತೊಟ್ಟು ಸಾವಿರಾರು ನಾಗರಿಕರು ಬೀದಿಗಿಳಿಯತೊಡಗಿದ್ದಾರೆ.
ಯೆಮನ್ ಮತ್ತು ಇರಾನ್ ಸೋಮವಾರ ತೀವ್ರ ಪ್ರತಿಭಟನೆಗೆ ಸಾಕ್ಷಿಯಾಗಿದ್ದರೆ, ಮಂಗಳವಾರ ಬಹರೇನ್‌ನಲ್ಲಿ ಇಂತಹದ್ದೇ ಬೆಳವಣಿಗೆ ನಡೆದಿದೆ. ಇಷ್ಟೇ ಅಲ್ಲದೆ ಅಲ್ಜೀರಿಯಾ, ಜೋರ್ಡಾನ್, ಸಿರಿಯಾಗಳಲ್ಲೂ ಆಡಳಿತಗಾರರ ವಿರುದ್ಧ ನಾಗರಿಕರು ಆಕ್ರೋಶಗೊಂಡಿದ್ದಾರೆ.

ಈಜಿಪ್ಟ್‌ನಲ್ಲಿ ಪ್ರತಿಭಟನಾಕಾರರು ಬಳಸಿದ್ದ ‘ಅಧ್ಯಕ್ಷರೇ ತೊಲಗಿ’ ‘ಈಗಿನ ಆಡಳಿತ ಉರುಳಲಿ, ಇದೇ ಜನರ ಹೆಬ್ಬಯಕೆ’ ಎಂಬಂತಹ ಘೋಷಣೆಗಳನ್ನೇ ಇತರೆ ದೇಶಗಳಲ್ಲೂ ಪ್ರತಿಭಟನಾಕಾರರೂ ಪುನರುಚ್ಚರಿಸುತ್ತಿದ್ದಾರೆ.

ಬಹರೇನ್‌ನ ರಾಜಧಾನಿ ಮನಾಮದಲ್ಲಿ ಮಂಗಳವಾರ ಗುಂಪು ಚದುರಿಸಲು ಪೊಲೀಸರು ಹಾರಿಸಿದ ಗುಂಡೇಟಿಗೆ ಒಬ್ಬ ಪ್ರತಿಭಟನಾಕಾರ ಬಲಿಯಾಗಿದ್ದಾನೆ. ಸೋಮವಾರ ನಡೆದಿದ್ದ ಘರ್ಷಣೆಯಲ್ಲಿ ಮೃತರಾದ ಇಬ್ಬರು ವ್ಯಕ್ತಿಗಳ ಅಂತ್ಯಸಂಸ್ಕಾರದ ಸಂದರ್ಭದಲ್ಲಿ ಈ ಘಟನೆ ನಡೆದಿದೆ.

ಮನಾಮದ ಪಶ್ಚಿಮಕ್ಕಿರುವ ಶಿಯಾ ಜನಾಂಗ ಪ್ರಾಬಲ್ಯದ ದರಾಜ್ ಮತ್ತು ಸನಾಬಿಸ್ ಗ್ರಾಮಗಳು ಉದ್ವಿಗ್ನಗೊಂಡಿವೆ. ಸೋಮವಾರ ದಿಯಾ ಎಂಬ ಗ್ರಾಮದಲ್ಲಿ ನಡೆದ ಹಿಂಸಾಚಾರದಲ್ಲಿ ಕನಿಷ್ಠ 14 ಮಂದಿ ಗಾಯಗೊಂಡಿದ್ದರು. ಇದನ್ನು ‘ತೀವ್ರ ಕ್ರೋಧ’ದ ದಿನ ಎಂದು ವಿರೋಧ ಪಕ್ಷಗಳು ಬಣ್ಣಿಸಿದ್ದರೆ, ಮುಂದಿನ ಶುಕ್ರವಾರವನ್ನು ‘ಕಡು ಕ್ರೋಧ’ದ ದಿನವಾಗಿ ಆಚರಿಸಲು ಪ್ರತಿಭಟನಾರರು ಕರೆ ನೀಡಿದ್ದಾರೆ.

ಟ್ಯುನೀಷಿಯಾದಲ್ಲಿ ಭುಗಿಲೆದ್ದಿದ್ದ ಜನಪರ ಚಳವಳಿಯಿಂದ ಅಧ್ಯಕ್ಷ ಝಿನ್ ಅಲ್ ಅಬಿದಿನ್ ಬೆನ್ ಅಲಿ ಅವರ 23 ವರ್ಷಗಳ ಆಡಳಿತ ಜನವರಿ 14ರಂದು ಕೊನೆಗೊಂಡಿತ್ತು. ಇದಾದ ಕೆಲವೇ ದಿನಗಳಲ್ಲಿ ಈಜಿಪ್ಟ್ ಅಧ್ಯಕ್ಷ ಹೋಸ್ನಿ ಮುಬಾರಕ್ ಅವರ  ಸುದೀರ್ಘಾವಧಿಯ ಆಡಳಿತದ ವಿರುದ್ಧ  ಜನ ಬೀದಿಗಿಳಿದಿದ್ದರು.

ಈ ಎರಡೂ ರಾಷ್ಟ್ರಗಳಲ್ಲಿನ ಪ್ರತಿಭಟನೆಗಳನ್ನು ಬೆಂಬಲಿಸಿ ಇತ್ತೀಚೆಗೆ ಇರಾನ್‌ನ ಟೆಹರಾನ್ ಚೌಕದಲ್ಲಿ ಸೇರಿದ್ದವರನ್ನು ಚದುರಿಸಲು ಭದ್ರತಾ ಪಡೆಗಳು ಅಶ್ರುವಾಯು ಶೆಲ್ ಸಿಡಿಸಿದ್ದವು. ಪ್ರತಿಭಟನೆ ಬೆಂಬಲಿಸಿದ್ದ ವಿರೋಧ ಪಕ್ಷದ ನಾಯಕ ಮೀರ್ ಹುಸೇನ್ ಮೌಸವಿ ಅವರನ್ನು ಗೃಹಬಂಧನದಲ್ಲಿ ಇರಿಸಲಾಗಿತ್ತು.

33 ವರ್ಷಗಳಿಂದ ಅಧಿಕಾರಕ್ಕೆ ಅಂಟಿಕೊಂಡಿರುವ ಅಧ್ಯಕ್ಷ ಅಲಿ ಅಬ್ದುಲ್ಲಾ ಸಲೆಹ್ ಅವರ ಪದಚ್ಯುತಿಗೆ ಆಗ್ರಹಿಸಿ ಯೆಮನ್‌ನ ರಾಜಧಾನಿ ಸನಾ ಮತ್ತು ದಕ್ಷಿಣ ಪ್ರಾಂತ್ಯ ತೈಜ್‌ನಲ್ಲಿ ನಡೆದ ಪ್ರತಿಭಟನೆಗಳಲ್ಲಿ ಕನಿಷ್ಠ 17 ಮಂದಿ ಗಾಯಗೊಂಡಿದ್ದರು. ಅಲ್ ತೆಹ್ರೀರ್ ಚೌಕವನ್ನು ಪ್ರವೇಶಿಸುವ ವಿದ್ಯಾರ್ಥಿಗಳು ಮತ್ತು ವಕೀಲರ ರ್ಯಾಲಿಯ ಯತ್ನವನ್ನು ಅರೆಸೇನಾ ಪಡೆ ಸಿಬ್ಬಂದಿ ವಿಫಲಗೊಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.