ADVERTISEMENT

ಮನವಿ ಮತ್ತೆ ತಿರಸ್ಕರಿಸಿದ ಪಾಕ್‌

ನೌಕಾಪಡೆಯ ಮಾಜಿ ಅಧಿಕಾರಿ ಜಾಧವ್ ಪ್ರಕರಣ

ಪಿಟಿಐ
Published 2 ಜುಲೈ 2017, 19:33 IST
Last Updated 2 ಜುಲೈ 2017, 19:33 IST
ಕುಲಭೂಷಣ್‌
ಕುಲಭೂಷಣ್‌   

ಇಸ್ಲಾಮಾಬಾದ್‌: ಗಲ್ಲು ಶಿಕ್ಷೆಗೆ ಗುರಿಯಾಗಿರುವ ಭಾರತೀಯ ನೌಕಾಪಡೆಯ ಮಾಜಿ ಅಧಿಕಾರಿ ಕುಲಭೂಷಣ್‌ ಜಾಧವ್‌ ಅವರಿಗೆ ದೂತಾವಾಸ ಕಚೇರಿ ಸಂಪರ್ಕಿಸಲು ಅನುವು ಮಾಡಿಕೊಡಬೇಕು ಎಂಬ ಭಾರತದ ಮನವಿಯನ್ನು ಪಾಕಿಸ್ತಾನ ಮತ್ತೊಮ್ಮೆ ತಿರಸ್ಕರಿಸಿದೆ.

ಜಾಧವ್‌ ಅವರನ್ನು ನಾಗರಿಕ ಕೈದಿ ಎಂದು ಸಮೀಕರಿಸುತ್ತಿರುವ ಭಾರತದ ನಿಲುವು ‘ಹಾಸ್ಯಾಸ್ಪದ ತರ್ಕ’ವಾಗಿದೆ ಎಂದು ಪಾಕಿಸ್ತಾನ ಲೇವಡಿ ಮಾಡಿದೆ.

‘ಕಮಾಂಡರ್‌ ಜಾಧವ್‌ ಅವರ ಪ್ರಕರಣವನ್ನು ನಾಗರಿಕ ಕೈದಿ ಹಾಗೂ ಮೀನುಗಾರರ ಪ್ರಕರಣಕ್ಕೆ ಹೋಲಿಸುವ ಮೂಲಕ ಭಾರತ ನಗೆಪಾಟಲುಗೀಡು ತರ್ಕ ಮಂಡಿಸುತ್ತಿದೆ’ ಎಂದು ವಿದೇಶಾಂಗ ಇಲಾಖೆ ನೀಡಿರುವ ಹೇಳಿಕೆಯಲ್ಲಿ ತಿಳಿಸಿದೆ.

ಉಭಯ ದೇಶಗಳ ಜೈಲಿನಲ್ಲಿರುವ ಕೈದಿಗಳ ಪಟ್ಟಿಯನ್ನು ಶನಿವಾರ ಭಾರತ ಹಾಗೂ ಪಾಕಿಸ್ತಾನ ಹಸ್ತಾಂತರ ಮಾಡಿಕೊಂಡಿತ್ತು, ಮರುದಿನವೇ ಜಾಧವ್‌ಗೆ ಸಂಬಂಧಿಸಿದಂತೆ ಪಾಕ್‌ ವಿದೇಶಾಂಗ ಇಲಾಖೆ ಈ ಹೇಳಿಕೆ ನೀಡಿದೆ.

‘ಕಮಾಂಡರ್‌ ಜಾಧವ್‌ ಭಾರತದ ನೌಕಾಸೇನಾ ಅಧಿಕಾರಿಯಾಗಿದ್ದು, ಭಾರತದ ಬೇಹುಗಾರಿಕೆ ಸಂಸ್ಥೆಯಾದ ‘ರಾ’ ಪಾಕಿಸ್ತಾನದಲ್ಲಿ ಗೂಢಚಾರಿಕೆ ನಡೆಸಲು ಕಳುಹಿಸಿತ್ತು.

ಪಾಕಿಸ್ತಾನದಲ್ಲಿ ಭಯೋತ್ಪಾದಕ ಹಾಗೂ ವಿಧ್ವಂಸಕ ಕೃತ್ಯದಲ್ಲಿ ಭಾಗಿಯಾಗುವ ಮೂಲಕ ಸಾವಿರಾರು ಅಮಾಯಕರ ಪ್ರಾಣಹಾನಿ ಹಾಗೂ ಆಸ್ತಿಪಾಸ್ತಿ ನಷ್ಟಕ್ಕೆ ಕಾರಣಕರ್ತರಾಗಿದ್ದಾರೆ’ ಎಂದು ವಿದೇಶಾಂಗ ಇಲಾಖೆಯು ಪುನರುಚ್ಚರಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.