ಇಸ್ಲಾಮಾಬಾದ್ (ಪಿಟಿಐ): ಪಾಕ್‌ನಲ್ಲಿ ಹೆಣ್ಣು ಮಕ್ಕಳ ಶಿಕ್ಷಣದ ಪರ ದನಿ ಎತ್ತಿದ್ದ ಬಾಲಕಿ ಮಲಾಲಾ ತಂದೆ ಜಿಯಾವುದ್ದೀನ್ ಯೂಸುಫ್‌ಝೈ ಅವರಿಗೆ ಬ್ರಿಟನ್‌ನಲ್ಲಿರುವ ಪಾಕ್ ಹೈಕಮಿಷನ್‌ನಲ್ಲಿ ಕೆಲಸ ದೊರೆಯುವ ಸಾಧ್ಯತೆ ಇದೆ.
ಸದ್ಯ ಯೂಸುಫ್‌ಝೈ ಕುಟುಂಬ ಬರ್ಮಿಂಗ್‌ಹ್ಯಾಂನ ಎಲಜಬೆತ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಮಗಳ ಆರೈಕೆಯಲ್ಲಿ ತೊಡಗಿದೆ. ಮಲಾಲಾ ಪೂರ್ಣ ಗುಣಮುಖಳಾಗಲು ಕೆಲ ತಿಂಗಳುಗಳು ಬೇಕಾಗುತ್ತವೆ. ಹಾಗಾಗಿ ಬ್ರಿಟನ್‌ನಲ್ಲೇ ಸ್ವಲ್ಪ ಕಾಲ ನೆಲೆಸಲು ಆಶ್ರಯ ಕೋರಿ ಅರ್ಜಿ ಸಲ್ಲಿಸಲು ಯೂಸುಫ್‌ಝೈ ಸಿದ್ಧತೆ ನಡೆಸಿದ್ದಾರೆ.
ಮಲಾಲಾ ತಂದೆಯ ಈ ನಿರ್ಧಾರದಿಂದ ಈಗ ಪಾಕ್ ಮುಜುಗರಕ್ಕೆ ಒಳಗಾಗಿದೆ.
ಈ ಸಂಬಂಧ ಪಾಕಿಸ್ತಾನದ ಒಳಾಡಳಿತ ಸಚಿವ ರೆಹಮಾನ್ ಮಲಿಕ್ ಅವರು, ಮಲಾಲಾ ತಂದೆಗೆ ಆಶ್ರಯ ಕೋರಿ ಬ್ರಿಟನ್‌ಗೆ ಅರ್ಜಿ ಸಲ್ಲಿಸದಂತೆ ಸೂಚಿಸಿದ್ದಾರಲ್ಲದೆ, ಲಂಡನ್‌ನಲ್ಲಿರುವ ಪಾಕಿಸ್ತಾನ ಹೈಕಮಿಷನ್‌ನಲ್ಲಿ ಯೂಸುಫ್‌ಝೈ ಅವರಿಗೆ ಕೆಲಸವನ್ನು ನೀಡುವ ಭರವಸೆ ನೀಡಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಅಲ್ಲದೆ, ಈ ಕುರಿತು ಪಾಕ್ ಅಧ್ಯಕ್ಷ ಆಸಿಫ್ ಅಲಿ ಜರ್ದಾರಿ ಅವರೊಂದಿಗೆ ಮಲಿಕ್ ಅವರು ಮಾತುಕತೆ ನಡೆಸಿದ್ದು, ಯೂಸುಫ್‌ಜೈ ಅವರಿಗೆ ಲಂಡನ್‌ನಲ್ಲಿರುವ ಪಾಕ್ ಹೈಕಮಿಷನ್‌ನಲ್ಲಿ ಕೆಲಸ ನೀಡುವುದರಿಂದ ಅವರ ಕುಟುಂಬ ಕೆಲ ವರ್ಷಗಳ ಕಾಲ ಬ್ರಿಟನ್‌ನಲ್ಲಿ ನೆಲೆಸಬಹುದಾಗಿದೆ ಎಂದು ಮಲಿಕ್ ಹೇಳಿದ್ದಾರೆ ಎಂದು ಮೂಲಗಳು ಹೇಳಿವೆ.
ತೆಹ್ರಿಕ್-ಎ-ತಾಲಿಬಾನ್ ಉಗ್ರರ ಸಂಘಟನೆ ಸ್ವಾತ್ ಕಣಿವೆಯ ಮಿನ್‌ಗೊರಾದಲ್ಲಿರುವ ಶಾಲೆಯಿಂದ ಮನೆಗೆ ಹಿಂದಿರುಗುತ್ತಿದ್ದ 14 ವರ್ಷದ ಬಾಲಕಿ ಮಲಾಲಾ ಯೂಸುಫ್‌ಝೈ ಮೇಲೆ ಗುಂಡಿನ ದಾಳಿ ನಡೆಸಿ ಕೊಲ್ಲಲು ಯತ್ನಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.