ADVERTISEMENT

ಮಲಾಲಾ ಹತ್ಯೆ ಯತ್ನ: 120 ಶಂಕಿತರ ಬಂಧನ

​ಪ್ರಜಾವಾಣಿ ವಾರ್ತೆ
Published 14 ಅಕ್ಟೋಬರ್ 2012, 19:30 IST
Last Updated 14 ಅಕ್ಟೋಬರ್ 2012, 19:30 IST

ಇಸ್ಲಾಮಾಬಾದ್ (ಐಎಎನ್‌ಎಸ್): ಹದಿಹರೆಯದ ಮುಸ್ಲಿಂ ಹೆಣ್ಣುಮಕ್ಕಳ ಶಿಕ್ಷಣದ ಹಕ್ಕಿಗಾಗಿ ಹೋರಾಟ ನಡೆಸುತ್ತಿರುವ ಬಾಲಕಿ ಮಲಾಲಾ ಹತ್ಯೆ ಯತ್ನಕ್ಕೆ ಸಂಬಂಧಿಸಿದಂತೆ 120 ಶಂಕಿತರನ್ನು ಪೊಲೀಸರು ಬಂಧಿಸಿರುವುದಾಗಿ ಸ್ಥಳೀಯ ಮಾಧ್ಯಮವೊಂದು ವರದಿ ಮಾಡಿದೆ.

ವಾಯವ್ಯ ಪಾಕಿಸ್ತಾನದ ಬುಡಕಟ್ಟು ವಲಯದಲ್ಲಿರುವ ಮೂವರು ತಾಲಿಬಾನ್ ಉಗ್ರರು ಸೇರಿದಂತೆ 120 ಮಂದಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.

ನಿಷೇಧಿತ ತೆಹ್ರಿಕ್ -ಎ- ತಾಲಿಬಾನ್ ಸಂಘಟನೆ ಸದಸ್ಯರಾದ ನವಶೀರದ ಮೂವರು ಸಹೋದರರನ್ನು ಸ್ವಾತ್ ಕಣಿವೆ ಪ್ರದೇಶದಲ್ಲಿ ಪೊಲೀಸರು ಬಂಧಿಸಿದ್ದಾರೆ ಎಂದು ಡಾನ್ ಪತ್ರಿಕೆ ವರದಿ ಮಾಡಿದೆ.

ಪ್ರಕರಣದ ಸಂಬಂಧ ಪೊಲೀಸರು ಅಕ್ಬರ್‌ಪುರ ಎಂಬಲ್ಲಿನ ತರ್ಖಾ ಹಳ್ಳಿಯ ಮನೆಯೊಂದರ ಮೇಲೆ ದಾಳಿ ನಡೆಸಿ ಖಾರಿ ಇನಾಮುಲ್ಲಾ, ಉಬೇದುಲ್ಲಾ ಮತ್ತು ಅಬ್ದುಲ್ಲ ಹದಿ ಅವರನ್ನು ಬಂಧಿಸಿದ್ದರು. ಇವರೆಲ್ಲ ಸ್ವಾತ್ ಕಣಿವೆ ಪ್ರದೇಶಕ್ಕೆ ಸೇರಿದವರು.

ಬಂಧಿತ ಮೂವರು ಶಂಕಿತ ಉಗ್ರರು ಮೌಲ್ವಿ ಮೌಲಾನಾ ಫಝುಲುಲ್ಲಾನ ಸಹಚರರು ಎಂದು ವರದಿಯಲ್ಲಿ ತಿಳಿಸಲಾಗಿದೆ. ಬಂಧಿತ ಶಂಕಿತ ಉಗ್ರರರಲೊಬ್ಬರ ತಂದೆ ರೆಹಮಾನ್ ತರ್ಖಾದ ಮಸೀದಿಯಲ್ಲಿ  ಪ್ರಮುಖ ಮೌಲ್ವಿ ಎಂದು ತಿಳಿದು ಬಂದಿದೆ. ಪ್ರಕರಣ ಸಂಬಂಧ ಈ ಹಿಂದೆ 50 ಮಂದಿಯನ್ನು ಸ್ವಾತ್ ಮತ್ತು ಖೈಬರ್ ಫಖುತ್ವನ್‌ಖ್ವಾ ಪ್ರದೇಶದಿಂದ ಬಂಧಿಸಲಾಗಿತ್ತು.

ಜಿಯೋ ಸುದ್ದಿ ವಾಹಿನಿಯ ವರದಿ ಪ್ರಕಾರ, ಉಗ್ರರ ದಾಳಿ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲಾಲಾ ಶಾಲೆಯ ಲೆಕ್ಕಾಧಿಕಾರಿ ಮತ್ತು ಭದ್ರತಾ ಸಿಬ್ಬಂದಿಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು, ದಾಳಿಕೋರರನ್ನು ಗುರುತಿಸುವಂತೆ ಒತ್ತಡ ಹೇರಿದ್ದಾರೆ.

ಹದಿನಾಲ್ಕರ ಹರೆಯದ ಮಲಾಲಾ ತನ್ನ ಇಬ್ಬರು ಗೆಳತಿಯರೊಡನೆ ಶಾಲೆಯಿಂದ ಮನೆಗೆ ವಾಪಸಾಗುತ್ತಿದ್ದ ವೇಳೆ ತಾಲಿಬಾನ್ ಉಗ್ರರು ಗುಂಡಿನ ದಾಳಿ ನಡೆಸಿದ್ದರು. ಹೆಣ್ಣು ಮಕ್ಕಳ ಶಿಕ್ಷಣ ಹಕ್ಕು ಕುರಿತು ತಾಲಿಬಾನ್ ಸಂಘಟನೆ ವಿರುದ್ಧ ದನಿ ಎತ್ತಿದ್ದಕ್ಕಾಗಿ ಈಕೆಯ ಮೇಲೆ ದಾಳಿ ನಡೆಸಲಾಗಿತ್ತು.

ಮಲಾಲಾ ಆರೋಗ್ಯದಲ್ಲಿ ಚೇತರಿಕೆ: ಮಲಾಲಾ ಆರೋಗ್ಯದಲ್ಲಿ ಚೇತರಿಕೆ ಕಂಡಿದೆ ಎಂದು ಪಾಕಿಸ್ತಾನದ ಸೇನೆಯ ಮೂಲಗಳು ತಿಳಿಸಿವೆ.

ಕೈ-ಕಾಲುಗಳಲ್ಲಿ ಚೇತರಿಕೆಯ ಗುಣಾತ್ಮಕವಾಗಿ ಲಕ್ಷಣಗಳು ಕಾಣಿಸುತ್ತಿದ್ದು, ಆರೋಗ್ಯದಲ್ಲಿ ಸ್ವಲ್ಪ ಸುಧಾರಣೆ ಕಂಡಿದೆ ಎಂದು ಒಳಾಡಳಿತ ಸೇವೆಯಲ್ಲಿ ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಧಾನ ನಿರ್ದೇಶಕ ಮೇಜರ್ ಜನರಲ್ ಅಸೀಂ ಬಜ್ವಾ ಅವರು ಹೇಳಿದ್ದಾರೆ.

ಚಿಕಿತ್ಸೆಗಾಗಿ ಸೌದಿ ಅರೇಬಿಯಾಗೆ?
ತಾಲಿಬಾನ್ ಉಗ್ರರ ಗುಂಡಿನ ದಾಳಿಗೆ ಒಳಗಾಗಿ ತೀವ್ರವಾಗಿ ಗಾಯಗೊಂಡಿರುವ ಬಾಲಕಿ ಮಲಾಲಾ ಚಿಕಿತ್ಸೆಗಾಗಿ ಸೌದಿ ಅರೇಬಿಯಾ ಸರ್ಕಾರವು ಏರ್ ಆಂಬುಲೆನ್ಸ್ ಕಳುಹಿಸಿದೆ ಎಂದು ಪಾಕಿಸ್ತಾನ ಸರ್ಕಾರ ತಿಳಿಸಿದೆ.

ಮಲಾಲಾ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ವಿದೇಶಕ್ಕೆ ಕಳುಹಿಸಲು ವೈದ್ಯರು ಇನ್ನೂ ನಿರ್ಧರಿಸಿಲ್ಲ. ಆದರೂ ಮುಂಜಾಗ್ರತೆ ಕ್ರಮವಾಗಿ ಏರ್ ಆಂಬುಲೆನ್ಸ್ ಕಾಯ್ದಿರಿಸಲಾಗಿದೆ.

ಆರು ಮಂದಿ ವೈದ್ಯರು ಹಾಗೂ ಸಿಬ್ಬಂದಿಗಳನ್ನು ಯುಎಇ ಗೆ ಪ್ರಯಾಣಿಸಲು ವೀಸಾ ಪ್ರಕ್ರಿಯೆ ಅಂತಿಮ ಹಂತದಲ್ಲಿದೆ ಎಂದು ಇಸ್ಲಾಮಾಬಾದ್‌ನಲ್ಲಿ ಸೌದಿ ಅರೇಬಿಯಾ ರಾಯಭಾರಿ ಜಮೀಲ್ ಅಹ್ಮದ್ ಖಾನ್ ಜಿಯೋ ಸುದ್ದಿವಾಹಿನಿಗೆ ತಿಳಿಸಿದ್ದಾರೆ.

ಪಾಕ್ ಮುಖಂಡರಿಗೆ ಕರ್ಜೈ ಪತ್ರ
ಕಾಬೂಲ್ (ಎಪಿ):
ಹೆಣ್ಣು ಮಕ್ಕಳಿಗೆ ಶಿಕ್ಷಣ ನೀಡಲು ಶ್ರಮಿಸುತ್ತಿರುವ ಬಾಲಕಿಯರ ಮೇಲೆ ಉಗ್ರಗಾಮಿಗಳು ಪದೇ ಪದೇ ದಾಳಿ ನಡೆಸುತ್ತಿರುವುದನ್ನು ತೀವ್ರವಾಗಿ ಖಂಡಿಸಿರುವ ಆಫ್ಘಾನಿಸ್ತಾದ ಅಧ್ಯಕ್ಷ ಹಮಿದ್ ಕರ್ಜೈ ಅವರು, ತಮ್ಮ ದೇಶ ಮತ್ತು ಪಾಕಿಸ್ತಾನದಲ್ಲಿಯ ಭಯೋತ್ಪಾದಕ ಮತ್ತು ಉಗ್ರಗಾಮಿ ಚಟುವಟಿಕೆಯ ವಿರುದ್ಧ ಹೋರಾಡಲು ನೆರವಾಗಬೇಕು ಎಂದು ಪಾಕಿಸ್ತಾನದ ರಾಜಕಾರಣಿಗಳು ಮತ್ತು ಧಾರ್ಮಿಕ ಮುಖಂಡರನ್ನು ಕೋರಿದ್ದಾರೆ.

ಅಕ್ಟೋಬರ್ 9ರಂದು ತಾಲಿಬಾನ್ ಉಗ್ರಗಾಮಿ ನಡೆಸಿದ ಗುಂಡಿನ ದಾಳಿಯಿಂದ ಬಾಲಕಿ ತೀವ್ರವಾಗಿ ಗಾಯಗೊಂಡಿರುವ ಬಗ್ಗೆ ಆತಂಕ ವ್ಯಕ್ತಪಡಿಸಿರುವ ಕರ್ಜೈ ಅವರು, ಈ ಬಾಲಕಿಯು ಸ್ವಾತ್ ಕಣಿವೆಯಲ್ಲಿ ಹೆಣ್ಣು ಮಕ್ಕಳ ಶಿಕ್ಷಣಕ್ಕಾಗಿ ಶ್ರಮಿಸುತ್ತಿದ್ದರಿಂದ ಎಲ್ಲರ ಮೆಚ್ಚುಗೆಗೆ ಪಾತ್ರಳಾಗಿದ್ದಾಳೆ ಎಂದು ತಿಳಿಸಿದ್ದಾರೆ.

ಗಡಿಯಲ್ಲಿ ಅವಿತುಕೊಂಡು ಎರಡೂ ರಾಷ್ಟ್ರಗಳಿಗೆ ಉಪಟಳ ನೀಡುತ್ತಿರುವ ತಾಲಿಬಾನ್ ಉಗ್ರಗಾಮಿಗಳ ಮೇಲೆ ಕಠಿಣ ಕ್ರಮ ಜರುಗಿಸುವಂತೆ ಕರ್ಜೈ ಅವರು ಪಾಕಿಸ್ತಾನ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಪಾಕಿಸ್ತಾನದ ಅಧ್ಯಕ್ಷ ಅಸಿಫ್ ಅಲಿ ಜರ್ದಾರಿ, ಪ್ರಧಾನಿ ರಜಾ ಪರ್ವೆಜ್ ಅಶ್ರಫ್, ಮುಸ್ಲಿಂ ಲೀಗ್ ಪಕ್ಷದ ಮುಖಂಡ ನವಾಜ್ ಶರೀಫ್, ಜಮಾತ್ ಇಸ್ಲಾಮಿಯ ಕ್ವಾಜಾ ಹುಸ್ಸೇನ್ ಅಹಮದ್, ಪಾಕಿಸ್ತಾನ ಮುಸ್ಲಿಂ ಲೀಗ್-ಕ್ಯೂ ಪಕ್ಷದ ಮುಖ್ಯಸ್ಥ ಚೌಧರಿ ಶುಜಾತ್ ಹುಸ್ಸೇನ್, ಮಾಜಿ ಕ್ರಿಕೆಟಿಗ ಮತ್ತು ತೆಹರಿಕ್-ಎ-ಇನ್ಸಾಫ್‌ನ ಮುಖ್ಯಸ್ಥ ಇಮ್ರಾನ್ ಖಾನ್ ಸೇರಿದಂತೆ ಅನೇಕ ಪ್ರಮುಖರಿಗೆ ಕರ್ಜೈ ಅವರು ಪತ್ರ ಬರೆದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.