ವಾಷಿಂಗ್ಟನ್ (ಐಎಎನ್‌ಎಸ್): ಭಾರತ `ಅಗ್ನಿ-5~ ಖಂಡಾಂತರ ಕ್ಷಿಪಣಿಯ ಯಶಸ್ವಿ ಪರೀಕ್ಷಾರ್ಥ ಪ್ರಯೋಗ ಮಾಡಿರುವುದನ್ನು ಅಮೆರಿಕ, ಬ್ರಿಟನ್ ಮತ್ತು ದಕ್ಷಿಣ ಏಷ್ಯಾ ಸೇರಿದಂತೆ ಜಗತ್ತಿನ ಪ್ರಮುಖ ಮಾಧ್ಯಮಗಳು ಮಹತ್ವದ ಸುದ್ದಿಯಾಗಿ ಬಿಂಬಿಸಿವೆ. ಅದರಲ್ಲೂ ಮುಖ್ಯವಾಗಿ ಈ ಕ್ಷಿಪಣಿ ವ್ಯಾಪ್ತಿಯು ಚೀನಾದ ಬಹು ಭಾಗವನ್ನು ಒಳಗೊಂಡಿರುವ ಬಗ್ಗೆ ಅವು ಹೆಚ್ಚು ಒತ್ತು ನೀಡಿವೆ.
ಈ ಕ್ಷಿಪಣಿಯ ಪರೀಕ್ಷಾರ್ಥ ಪ್ರಯೋಗವು ಏಷ್ಯಾದಲ್ಲಿ ಶಸ್ತ್ರಾಸ್ತ್ರ ಪೈಪೋಟಿ ತೀವ್ರಗೊಳಿಸುವಂತಹುದಾಗಿದೆ. ಇದರೊಂದಿಗೆ ಉಭಯ ರಾಷ್ಟ್ರಗಳ ನಡುವಿನ ಸೇನಾ ಸಾಮರ್ಥ್ಯದ ಅಂತರ ತಗ್ಗಿದೆ ಎಂದು ನ್ಯೂಯಾರ್ಕ್ ಟೈಮ್ಸ ವಿಶ್ಲೇಷಿಸಿದೆ.
ಭಾರತವು ತನ್ನ ಕ್ಷಿಪಣಿ ಸಾಮರ್ಥ್ಯದ ಬಗ್ಗೆ ಚೀನಾಕ್ಕೆ ಸ್ಪಷ್ಟ ಸಂದೇಶ ಕಳುಹಿಸಿದಂತಾಗಿದೆ ಎಂದು ವಾಲ್ ಸ್ಟ್ರೀಟ್ ಜರ್ನಲ್ ಹೇಳಿದೆ.
2014-15ರಲ್ಲಿ ಸಶಸ್ತ್ರ ಪಡೆಗೆ ಸೇರ್ಪಡೆಯಾಗಲಿರುವ ಈ ಕ್ಷಿಪಣಿಯಿಂದ ಭಾರತದ ಅಣ್ವಸ್ತ್ರ ಪ್ರತಿರೋಧ ಸಾಮರ್ಥ್ಯ ಮತ್ತಷ್ಟು ಹೆಚ್ಚಾಗಲಿದೆ ಎಂದು ಬಿಬಿಸಿ ವರದಿ ಮಾಡಿದೆ. ಚೀನಾದ ಮೇಲೆ ಕಣ್ಣಿಟ್ಟು ಭಾರತವು ದೂರಗಾಮಿ ಕ್ಷಿಪಣಿ ಪರೀಕ್ಷಾರ್ಥ ಪ್ರಯೋಗ ನಡೆಸಿದೆ ಎಂದು ಪಾಕಿಸ್ತಾನದ ದೈನಿಕ ಟೈಮ್ಸ ಹೇಳಿದೆ.
ಬಾಂಗ್ಲಾದೇಶದ ದೈನಿಕ `ಡೈಲಿ ಸ್ಟಾರ್~, ಶ್ರೀಲಂಕಾದ `ಮಿರರ್~ ದೈನಿಕಗಳೂ ಕ್ಷಿಪಣಿ ಪರೀಕ್ಷೆ ಬಗ್ಗೆ ಹೆಚ್ಚಿನ ಮಹತ್ವ ನೀಡಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.