ADVERTISEMENT

ಮಾನವರ ಮೂಲ ಏಷ್ಯಾ: ಸಂಶೋಧನೆ

​ಪ್ರಜಾವಾಣಿ ವಾರ್ತೆ
Published 6 ಜೂನ್ 2012, 19:30 IST
Last Updated 6 ಜೂನ್ 2012, 19:30 IST

ವಾಷಿಂಗ್ಟನ್ (ಪಿಟಿಐ): ಎಲ್ಲರೂ ನಂಬಿರುವಂತೆ ಆಧುನಿಕ ಮಾನವರ ಪೂರ್ವಜರು ಹುಟ್ಟಿದ್ದು ಆಫ್ರಿಕಾದಲ್ಲಿ ಅಲ್ಲ, ಏಷ್ಯಾದಲ್ಲಿ ಎನ್ನುವುದು ಅಧ್ಯಯನವೊಂದರಿಂದ ಗೊತ್ತಾಗಿದೆ.

ಅಂತರರಾಷ್ಟ್ರೀಯ ಮಾನವ ಶಾಸ್ತ್ರಜ್ಞರ ತಂಡ ಮ್ಯಾನ್ಮಾರ್‌ನಲ್ಲಿ  ನಡೆಸಿದ ಪಳೆಯುಳಿಕೆಗಳ ಅಧ್ಯಯನದಿಂದ ಈ ವಿಷಯ ದೃಢಪಟ್ಟಿದೆ.

ಮಂಗಗಳು, ಚಿಂಪಾಂಜಿಗಳು, ಗೊರಿಲ್ಲಾ, ಮಾನವರು ಸೇರಿದಂತೆ ವಾನರ ಪ್ರಭೇದಕ್ಕೆಲ್ಲ ಮೂಲವಾದ `ಆಂಥ್ರೊಪಾಯ್ಡ~ಗಳು ಹುಟ್ಟಿದ್ದು ಆಫ್ರಿಕಾದಲ್ಲಿ ಎಂದು ಈವರೆಗೆ ನಂಬಲಾಗಿತ್ತು.

ಆದರೆ, ಮ್ಯಾನ್ಮಾರ್‌ನಲ್ಲಿ `ಆಫ್ರಾಸಿಯಾ ಡ್ಜಿಜಿಡೆ~ ಎಂಬ  `ಆಂಥ್ರೊಪಾಯ್ಡ~ನ  ಹಲ್ಲು ದೊರಕಿದೆ. ಈ ಜೀವಿ 3.7 ಕೋಟಿ ವರ್ಷಗಳ ಹಿಂದೆ ಬದುಕಿತ್ತು ಎನ್ನಲಾಗಿದೆ. ಏಷ್ಯಾ ಮತ್ತು ಆಫ್ರಿಕಾ ನಡುವಿನ ನಾಪತ್ತೆಯಾಗಿದ್ದ ಕೊಂಡಿ ಎಂದು `ಆಫ್ರಾಸಿಯಾ~ವನ್ನು ಈಗ ಬಣ್ಣಿಸಲಾಗುತ್ತಿದೆ.

ಇತ್ತೀಚೆಗಷ್ಟೆ ಲಿಬಿಯಾದ ಸಹರಾ ಮರು ಭೂಮಿಯಲ್ಲಿ `ಆಫ್ರಾಸಿಯಾ~ ವನ್ನು ಹೋಲುವ 3.8 ಕೋಟಿ ವರ್ಷಗಳ ಹಿಂದಿನ `ಆಫ್ರೊಟಾರ್ಸಿಯಸ್ ಲಿಬಿಕಸ್~ ಪಳೆಯುಳಿಕೆ ಪತ್ತೆಯಾಗಿತ್ತು. ಆ ಸಮಯದಲ್ಲಿ ಆಫ್ರಿಕಾದ `ಆಂಥ್ರೊಪಾಯ್ಡ~ಗಳು ವೈವಿಧ್ಯಮಯ ರಚನೆ ಹೊಂದಿದ್ದರಿಂದ ಅವುಗಳ ಮೂಲ ಬೇರೆಲ್ಲೋ ಇರಬಹುದು ಎಂದು ವಿಜ್ಞಾನಿಗಳು ಊಹಿಸಿದ್ದರು.

ಮ್ಯಾನ್ಮಾರ್‌ನಲ್ಲಿ ದೊರಕಿದ `ಆಫ್ರಾಸಿಯಾ~ದ ಪಳೆಯುಳಿಕೆಯಿಂದ ಆಫ್ರಿಕಾದ `ಆಂಥ್ರೊಪಾಯ್ಡ~ಗಳ ಮೂಲ ಏಷ್ಯಾ ಎಂದು ಊಹಿಸಬಹುದಾಗಿದೆ. ಆಫ್ರಿಕಾ ಮಾನವರ ಮೂಲ. ಆದರೆ, ಮಾನವರ ಪೂರ್ವಜರ ಮೂಲ ಏಷ್ಯಾ ಎಂದು ಫ್ರಾನ್ಸ್‌ನ ಪಳೆಯುಳಿಕೆ ಶಾಸ್ತ್ರಜ್ಞ ಜೀನ್ ಜಾಕ್ವಿಸ್ ಜೇಗರ್ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.