ADVERTISEMENT

ಮಾರುಕಟ್ಟೆ ತಲ್ಲಣ: ಅಮೆರಿಕ ತನಿಖೆ

ಕುಲಾಂತರಿ ಗೋಧಿ ಆಮದು ರದ್ದುಗೊಳಿಸಿದ ಜಪಾನ್

​ಪ್ರಜಾವಾಣಿ ವಾರ್ತೆ
Published 1 ಜೂನ್ 2013, 19:59 IST
Last Updated 1 ಜೂನ್ 2013, 19:59 IST

ವಾಷಿಂಗ್ಟನ್(ಎಎಫ್‌ಪಿ): ಜಪಾನಿನ ಕೆಲವೆಡೆ ಕುಲಾಂತರಿ ಗೋದಿಯ ಆಮದನ್ನು (ಜೆನಟಿಕಲಿ ಮಾಡಿಫೈಡ್ಸ್) ನಿಷೇಧಿಸಿರುವ ಹಾಗೂ ಬಳಕೆದಾರ ಗುಂಪುಗಳು ಆ ತಳಿಯ ಗೋಧಿ ವಿರುದ್ಧ ಧ್ವನಿ ಎತ್ತಿರುವ ಹಿನ್ನೆಲೆಯಲ್ಲಿ ಅಮೆರಿಕ ಸರ್ಕಾರದ ಕೃಷಿ ಇಲಾಖೆ ಒರೆಗಾನ್ ಕ್ಷೇತ್ರದಲ್ಲಿ ಬೆಳೆಯುತ್ತಿರುವ ಕುಲಾಂತರಿ ಗೋಧಿ ಕುರಿತು ತನಿಖೆ ನಡೆಸಲು ಮುಂದಾಗಿದೆ.

`ಕುಲಾಂತರಿ ತಳಿಗಳಿಂದ ಯಾವುದೇ ಅಪಾಯವಿಲ್ಲ. ಆದರೆ ಈ ತಳಿಯ ಗೋಧಿ ಉತ್ಪಾದನೆಯಿಂದ ವಿಶ್ವದ ಮಾರುಕಟ್ಟೆ ಮೇಲೆ ಏನಾದರೂ ವ್ಯತಿರಿಕ್ತ ಪರಿಣಾಮ ಬೀರಬಹುದೇ ಎಂಬುದನ್ನು ತನಿಖೆಯಿಂದ ತಿಳಿಯಬಹುದಾಗಿದೆ' ಎಂದು ಕೃಷಿ ತಜ್ಞರು ಅಭಿಪ್ರಾಯಪಟ್ಟಿದ್ದಾರೆ.

ಈ ಬೆಳವಣಿಗೆ ನಡುವೆ, `ಇಲ್ಲಿಯವರೆವಿಗೆ ಯಾವ ಗ್ರಾಹಕರೂ ಕುಲಾಂತರಿ ತಳಿ ಗೋಧಿಯನ್ನು ಅಪೇಕ್ಷಿಸಿಲ್ಲ' ಎಂದು ಪ್ರತಿಪಾದಿಸಿರುವ ಆಹಾರ ಸುರಕ್ಷತಾ ಕೇಂದ್ರದ ವಿಜ್ಞಾನ ವಿಶ್ಲೇಷಕ ಬಿಲ್ ಫ್ರೀಸ್, 2004ರಲ್ಲಿ ಬೀಜೋತ್ಪಾದಕ ಕಂಪೆನಿ ಮಾನ್ಸೆಂಟೊ, ಕುಲಾಂತರಿ ತಳಿಯನ್ನು ವಾಣಿಜ್ಯೀಕರಣಗೊಳಿಸಲು ಮುಂದಾದಾಗ ವ್ಯಾಪಕ ವಿರೋಧ ವ್ಯಕ್ತವಾಗಿದ್ದನ್ನು ಉಲ್ಲೇಖಿಸಿದ್ದಾರೆ.

ವಿಶ್ವದ ಯಾವುದೇ ಭಾಗದಲ್ಲಿ ಕುಲಾಂತರಿ ಗೋಧಿಯನ್ನು ವಾಣಿಜ್ಯ ಉದ್ದೇಶಕ್ಕಾಗಿ ಬೆಳೆಯಲು ಅನುಮತಿ ನೀಡಿಲ್ಲ. ಆದರೆ ಒರೆಗಾನ್ ಕೃಷಿ ಕ್ಷೇತ್ರದಲ್ಲಿ ಕೆಲವೊಂದು ಸಸ್ಯಜನ್ಯ ಕೀಟನಾಶಕ (ಹರ್ಬಿಸೈಡ್) ನಿರೋಧಕ ಗಿಡಗಳು ಏಪ್ರಿಲ್‌ನಲ್ಲಿ ಪತ್ತೆಯಾಗಿದ್ದವು ಎಂದು ಸರ್ಕಾರದ ತನಿಖಾ ಅಧಿಕಾರಿಗಳು ತಿಳಿಸಿದ್ದಾರೆ.

ಅಮೆರಿಕದಿಂದ ಬರಬೇಕಿದ್ದ 25000 ಟನ್‌ಗಳಷ್ಟು ಕುಲಾಂತರಿ ಗೋಧಿ ಆಮದನ್ನು ಜಪಾನ್  ರದ್ದುಗೊಳಿಸಿದ್ದರಿಂದ ಮಾರುಕಟ್ಟೆಯಲ್ಲಿ ತಲ್ಲಣ ಉಂಟಾಗಿದೆ. ಜೊತೆಗೆ, ಐರೋಪ್ಯ ಒಕ್ಕೂಟ ಕೂಡ, ಅಮೆರಿಕದಿಂದ ರಫ್ತಾಗುತ್ತಿರುವ ಗೋಧಿಯನ್ನು ಪರೀಕ್ಷಿಸುವಂತೆ ತನ್ನ ಸದಸ್ಯ ರಾಷ್ಟ್ರಗಳಿಗೆ ಸೂಚಿಸಿ, ಯಾವುದೇ ಕಾರಣಕ್ಕೂ ಆ ತಳಿಯ ಗೋಧಿ ಗ್ರಾಹಕರಿಗೆ ತಲುಪದಂತೆ ನೋಡಿಕೊಳ್ಳಬೇಕೆಂದು ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.