ADVERTISEMENT

ಮಾಲ್ಡೀವ್ಸ್ ಸಂಪುಟ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 12 ಫೆಬ್ರುವರಿ 2012, 19:30 IST
Last Updated 12 ಫೆಬ್ರುವರಿ 2012, 19:30 IST

ಮಾಲೆ (ಪಿಟಿಐ): ಮಾಲ್ಡೀವ್ಸ್‌ನ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿರುವ ಮೊಹಮದ್ ವಹೀದ್ ಹಸನ್, ಭಾನುವಾರ ಏಳು ನೂತನ ಸಚಿವರನ್ನು ನೇಮಿಸಿಕೊಳ್ಳುವ ಮೂಲಕ ತಮ್ಮ ಸಚಿವ ಸಂಪುಟವನ್ನು ವಿಸ್ತರಿಸ್ದ್ದಿದಾರೆ.

ಈ ಹೊಸ ಸಚಿವರಲ್ಲಿ ರಾಷ್ಟ್ರದ ಮೊದಲ ಮಹಿಳಾ ಅಟಾರ್ನಿ ಜನರಲ್ ಅಜಿಮಾ ಶಕೂರ್ ಕೂಡ ಸೇರಿದ್ದಾರೆ. ಪದಚ್ಯುತ ಅಧ್ಯಕ್ಷ ಮೊಹಮ್ಮದ್ ನಶೀದ್ ವಿರೋಧ ವ್ಯಕ್ತಪಡಿಸಿದ್ದ `ಒಕ್ಕೂಟ ಸರ್ಕಾರ~ವನ್ನು ಜಾರಿಗೆ ತರುವ ನಿಟ್ಟಿನಲ್ಲಿ ವಹೀದ್ ವಿವಿಧ ರಾಜಕೀಯ ಪಕ್ಷಗಳಿಂದ ಈ ಏಳು ಮಂದಿಯನ್ನು ಆರಿಸಿದ್ದಾರೆ.

ಇದೇ ವೇಳೆ ಮಾಜಿ ಸರ್ವಾಧಿಕಾರಿ ಮೌಮೂನ್ ಅಬ್ದುಲ್ ಗಯೂಮ್ ಅವರ ಪ್ರೋಗ್ರೆಸಿವ್ ಪಾರ್ಟಿ ಆಫ್ ಮಾಲ್ಡೀವ್ಸ್‌ನ (ಪಿಪಿಎಂ) ವಕ್ತಾರರಾಗಿರುವ ಮೊಹಮದ್ ಹುಸೇನ್ ಶರೀಫ್ ಮುಂಡು ಅವರೂ ಹೊಸ ಸಚಿವ ಸಂಪುಟದಲ್ಲಿ ಸ್ಥಾನ ಪಡೆದಿದ್ದಾರೆ. ಮುಂಡು ಅವರಿಗೆ ಯುವಜನ ವ್ಯವಹಾರ ಮತ್ತು ಕ್ರೀಡಾ ಖಾತೆ ನೀಡಲಾಗಿದ್ದು, ಅಹಮದ್ ಜಮ್‌ಶೆದ್ ಆರೋಗ್ಯ ಮತ್ತು ಕುಟುಂಬ, ಅಹಮದ್ ಮೊಹಮದ್ ಆರ್ಥಿಕ ಅಭಿವೃದ್ಧಿ ಹಾಗೂ ಅಹಮದ್ ಶಮ್‌ಶೆದ್ ಅವರಿಗೆ ಸಾರಿಗೆ ಮತ್ತು ಸಂಪರ್ಕ ಖಾತೆಯನ್ನು ನೀಡಲಾಗಿದೆ.

ಅಮೆರಿಕದ ದಕ್ಷಿಣ ಮತ್ತು ಕೇಂದ್ರ ಏಷ್ಯಕ್ಕಾಗಿನ ಸಹಾಯಕ ಕಾರ್ಯದರ್ಶಿ ರಾಬರ್ಟ್ ಬ್ಲೇಕ್ ಅವರು ವಹೀದ್ ಮತ್ತು ನಶೀದ್ ಇಬ್ಬರನ್ನೂ ಭೇಟಿ ಮಾಡಿ, ವಹೀದ್ ಅವರ ಉದ್ದೇಶಿತ ಐಕ್ಯಮತದ ಸರ್ಕಾರ ರಚನೆಗೆ ಬೆಂಬಲ ವ್ಯಕ್ತಪಡಿಸಿದ ಮಾರನೆ ದಿನವೇ ಸಚಿವ ಸಂಪುಟ ವಿಸ್ತರಣೆ ನಡೆದಿದೆ.

ಆದರೆ ದೇಶದ ಮೊದಲ ಪ್ರಜಾಪ್ರಭುತ್ವ ಸರ್ಕಾರದ ಮೊದಲ ಅಧ್ಯಕ್ಷರಾಗಿ ಆಯ್ಕೆಯಾಗಿದ್ದ ನಶೀದ್, ಹೊಸದಾಗಿ ಚುನಾವಣೆ ನಡೆಸಬೇಕೆನ್ನುವ ತಮ್ಮ ನಿಲುವಿಗೇ ಬದ್ಧರಾಗಿದ್ದಾರೆ.

ರಾಜಧಾನಿ ಮಾಲೆಯಲ್ಲಿ ಶನಿವಾರ ರಾತ್ರಿ ಮತ್ತೆ ಬೆಂಬಲಿಗರ ಬೃಹತ್ ರ‌್ಯಾಲಿ ನಡೆಸಿದ ಅವರು, `ಜನ ನಿಜವಾಗಲೂ ಏನನ್ನು ಬಯಸುತ್ತಿದ್ದಾರೆ ಎಂಬುದನ್ನು ತಿಳಿಯಬೇಕಿದ್ದರೆ ಚುನಾವಣೆ ಅತ್ಯಗತ್ಯ~ ಎಂದು ಒತ್ತಿ ಹೇಳಿದರು. ತಮ್ಮ ಪದಚ್ಯುತಿಗೆ ಕಾರಣವಾದ `ಕ್ಷಿಪ್ರಕ್ರಾಂತಿ~ಯ ಬಗ್ಗೆ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.