ADVERTISEMENT

ಮಿಶೆಲ್ ಒಬಾಮ, ಹಿಲರಿ ಕ್ಲಿಂಟನ್ ಕಾರ್ಯವೈಖರಿಗೆ ಶ್ಲಾಘನೆ

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2012, 19:59 IST
Last Updated 27 ಡಿಸೆಂಬರ್ 2012, 19:59 IST

ವಾಷಿಂಗ್ಟನ್ (ಪಿಟಿಐ): ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಅವರ ಹೊಸ ಸಂಪುಟಕ್ಕೆ ಅಮೆರಿಕ ಜನತೆಯಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ, ಒಬಾಮ ಪತ್ನಿ ಮಿಶೆಲ್ ಹಾಗೂ ವಿದೇಶಾಂಗ ಕಾರ್ಯದರ್ಶಿ ಹಿಲರಿ ಕ್ಲಿಂಟನ್ ಅವರ ಸಾಧನೆಗೆ ಹೆಚ್ಚಿನ ಅಂಕಗಳನ್ನು ನಾಗರಿಕರು ನೀಡಿದ್ದಾರೆ.

ಸಿಎನ್‌ಎನ್/ಒಆರ್‌ಸಿ ಇಂಟರ್‌ನ್ಯಾಷನಲ್ ಇತ್ತೀಚೆಗೆ ನಡೆಸಿರುವ ಸಮೀಕ್ಷೆಯಲ್ಲಿ ಜನರು ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಸಮೀಕ್ಷೆ ವಿವರಗಳನ್ನು ಬುಧವಾರ ಬಹಿರಂಗಗೊಳಿಸಲಾಗಿದೆ.

ಡಿ.17 ಮತ್ತು 18ರಂದು ಈ ಸಮೀಕ್ಷೆ ನಡೆಸಲಾಗಿದ್ದು, ಇದಕ್ಕಾಗಿ 620 ಅಮೆರಿಕನ್ನರನ್ನು ದೂರವಾಣಿ ಮೂಲಕ ಸಂದರ್ಶಿಸಲಾಗಿತ್ತು.

ಎರಡನೇ ಬಾರಿಗೆ ಶ್ವೇತಭವನದ ಚುಕ್ಕಾಣಿ ಹಿಡಿದಿರುವ ಒಬಾಮ ಪರವಾಗಿ ಶೇ 52 ಮಂದಿ ಬೆಂಬಲ ವ್ಯಕ್ತಪಡಿಸಿದ್ದಾರೆ. ಸಮೀಕ್ಷೆಯಲ್ಲಿ ಭಾಗವಹಿಸಿರುವ  ಶೇ 43 ಜನರು, ವಿವಿಧ ವಿಚಾರಗಳನ್ನು ಒಬಾಮ ಅವರು ನಿರ್ವಹಿಸುವ ರೀತಿಗೆ ಅಸಮ್ಮತಿ ಸೂಚಿಸಿದ್ದಾರೆ.

ಉಪಾಧ್ಯಕ್ಷ ಜೋಯ್ ಬಿಡೆನ್ ಅವರನ್ನು ಶೇ 54ರಷ್ಟು ಜನರು ಒಪ್ಪಿದ್ದಾರೆ. ಶೇ 40ರಷ್ಟು ಮಂದಿ 79 ವರ್ಷದ ಉಪಾಧ್ಯಕ್ಷರ ಕುರಿತಾಗಿ ವಿರೋಧಾಭಿಪ್ರಾಯ ಹೊಂದಿದ್ದಾರೆ.
ರಾಷ್ಟ್ರದ ಮೊದಲ ಮಹಿಳೆಯಾಗಿ ಮಿಶೆಲ್ ಅವರು ತಮ್ಮ ಕೆಲಸವನ್ನು ನಿರ್ವಹಿಸುತ್ತಿರುವ ಬಗೆಯನ್ನು ಶೇ 73ರಷ್ಟು ಜನರು ಒಪ್ಪಿಕೊಂಡಿದ್ದಾರೆ. ಶೇ 20ರಷ್ಟು ಜನರು ಮಾತ್ರ ಮಿಶೆಲ್ ಅವರ ಕಾರ್ಯವೈಖರಿಗೆ ಅಸಮಾಧಾವ ವ್ಯಕ್ತಪಡಿಸಿದ್ದಾರೆ.

ವಿದೇಶಾಂಗ ಇಲಾಖೆ ಕಾರ್ಯದರ್ಶಿ, 65 ವರ್ಷದ ಹಿಲರಿ ಕ್ಲಿಂಟನ್ ಅವರಿಗೂ ಸಮೀಕ್ಷೆಯಲ್ಲಿ ಉತ್ತಮ ಅಂಕಗಳು ಲಭಿಸಿವೆ. ಹಿಲರಿ ಅವರ ಕಾರ್ಯವೈಖರಿಯನ್ನು ಶೇ 65ರಷ್ಟು ಅಮೆರಿಕನ್ನರು ಮೆಚ್ಚಿದ್ದಾರೆ. ಶೇ 30ರಷ್ಟು ಜನರು ಮಾತ್ರ ಕ್ಲಿಂಟನ್ ವಿರುದ್ಧವಾಗಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ಸೆಪ್ಟೆಂಬರ್‌ನಲ್ಲಿ ಲಿಬಿಯಾದ ಬೆಂಗಝಿಯಲ್ಲಿ ಅಮೆರಿಕ ರಾಯಭಾರಿ ಕಚೇರಿ ಮೇಲೆ ನಡೆದ ದಾಳಿಯನ್ನು ವಿವರಿಸುವ ವರದಿ ಬಿಡುಗಡೆಗೂ ಮುನ್ನ ಈ ಸಮೀಕ್ಷೆ ನಡೆಸಲಾಗಿತ್ತು. ಈ ಘಟನೆಗೆ ಸಂಬಂಧಿಸಂತೆ ಹಿಲರಿ ಕ್ಲಿಂಟನ್ ಅವರ ಇಲಾಖೆಯಲ್ಲಿ `ವ್ಯವಸ್ಥಿತ ವೈಫಲ್ಯ ಹಾಗೂ ನಾಯಕತ್ವ ಮತ್ತು ನಿರ್ವಹಣೆ ಕೊರತೆಗಳಿದ್ದವು' ಎಂದು ವರದಿ ಉಲ್ಲೇಖಿಸಿತ್ತು.
ಹಿಲರಿ ಕ್ಲಿಂಟನ್ ಈಗ ತಮ್ಮ ಹುದ್ದೆ ತೊರೆಯುವ ಸಿದ್ಧತೆಯಲ್ಲಿದ್ದಾರೆ.

2016ರ ಚುನಾವಣೆಯಲ್ಲಿ ಡೆಮಾಕ್ರಟಿಕ್ ಪಕ್ಷದಿಂದ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸುವ ಯೋಚನೆಯಲ್ಲಿ ಅವರಿದ್ದಾರೆ ಎಂಬ ವದಂತಿಗಳ ನಡುವೆಯೇ, ತಾವು ರಾಜಕೀಯದಿಂದ ದೂರ ಸರಿಯುವುತ್ತಿರುವುದಾಗಿ ಹಿಲರಿ ಹೇಳಿಕೊಂಡಿದ್ದಾರೆ. ಹುದ್ದೆಯಿಂದ ಕೆಳಗಿಳಿದ ಬಳಿಕ ವಿಶ್ರಾಂತ ಜೀವನ ಅನುಭವಿಸುವುದಾಗಿ ಹೇಳಿದ್ದಾರೆ.

ಒಬಾಮ ಅವರು ಕಳೆದ ವಾರ ವಿದೇಶಾಂಗ ಕಾರ್ಯದರ್ಶಿ ಸ್ಥಾನಕ್ಕೆ ಜಾನ್ ಕೆರ‌್ರಿ ಅವರ ಹೆಸರನ್ನು ನಾಮಕರಣ ಮಾಡಿದ್ದಾರೆ. ಸೆನೆಟ್‌ನಲ್ಲಿ ಒಬಾಮ ಸಹೋದ್ಯೋಗಿಗಳು ಕೆರ‌್ರಿ ಅವರ ಹೆಸರನ್ನು ಅನುಮೋದಿಸುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.