ADVERTISEMENT

ಮುಂಬೈ ದಾಳಿ ತಡೆಯಾಗದಿರಲಿ

​ಪ್ರಜಾವಾಣಿ ವಾರ್ತೆ
Published 23 ಜನವರಿ 2011, 19:30 IST
Last Updated 23 ಜನವರಿ 2011, 19:30 IST

ಲಾಹೋರ್ (ಪಿಟಿಐ): 2008ರ ಮುಂಬೈ ಮೇಲಿನ ಉಗ್ರರ ದಾಳಿಯ ಪ್ರಕರಣವನ್ನು ಮುಂದಿಟ್ಟುಕೊಂಡು ಭಾರತ-ಪಾಕ್ ನಡುವಿನ ದ್ವಿಪಕ್ಷೀಯ ಮಾತುಕತೆಗೆ ಹಿನ್ನಡೆ ಆಗುವುದು ಬೇಡ ಎಂದು ಪಾಕ್ ಪ್ರಧಾನಿ ಯೂಸುಫ್ ರಜಾ ಗಿಲಾನಿ ಹೇಳಿದರು.

ಉಭಯ ದೇಶಗಳ ನಡುವಿನ ವಿದೇಶಾಂಗ ಕಾರ್ಯದರ್ಶಿಗಳ ನಡುವಿನ ಮಾತುಕತೆ ನಿರಂತರ ಮುಂದೆ ಹೋಗುತ್ತಿರುವುದನ್ನು ಉಲ್ಲೇಖಿಸಿ ಅವರು ಈ ರೀತಿ ಹೇಳಿದರು. ಮಾತುಕತೆ ಪುನರಾರಂಭಿಸಲು ಭಾರತದ ಪ್ರಧಾನಿ ಮನಮೋಹನ್ ಸಿಂಗ್  ರಾಜಕೀಯ ಒತ್ತಡ ಎದುರಿಸುತ್ತಿದ್ದಾರೆ. ಆದರೆ ಮಾತುಕತೆ ಆರಂಭಕ್ಕೆ ಮುಂಬೈ ದಾಳಿಯೇ ಪ್ರಮುಖ ತಡೆ ಆಗಬಾರದು ಎಂದು ವಿದೇಶಿ ಪತ್ರಕರ್ತರೊಂದಿಗೆ  ಮಾತನಾಡಿದ  ಗಿಲಾನಿ ಅಭಿಪ್ರಾಯಪಟ್ಟರು.

ಕಾಶ್ಮೀರ ವಿಷಯಕ್ಕೆ ಸಂಬಂಧಿಸಿದಂತೆ ಶಾಂತಿಯುತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಭಾರತದೊಂದಿಗೆ ರಾಜತಾಂತ್ರಿಕ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ ಎಂದ ಅವರು, ಹೆಚ್ಚಿನ ಮಾಹಿತಿ ನೀಡಲಿಲ್ಲ.ಮುಂಬೈ ದಾಳಿಯನ್ನು ಮುಂದಿಟ್ಟುಕೊಂಡು ಭಾರತ ಮಾತುಕತೆ ಸ್ಥಗಿತಗೊಳಿಸಿರುವುದಕ್ಕೆ ಸಂಬಂಧಿಸಿದಂತೆ, ಪುನಃ ಮಾತುಕತೆ ಆರಂಭವಾಗುತ್ತದೆಯೇ ಎನ್ನುವ ಪ್ರಶ್ನೆಗೆ ಶೇ 50: 50ರಷ್ಟು ಎಂದು ಮಾರ್ಮಿಕವಾಗಿ ನುಡಿದರು.

ಮುಂಬೈ ದಾಳಿಯ ಸಂದರ್ಭದಲ್ಲಿ ಮೃತರಾದ ಇಬ್ಬರು ಯಹೂದಿಗಳ ಸಂಬಂಧಿಕರು ಅಮೆರಿಕ ನ್ಯಾಯಾಲಯದಲ್ಲಿ ಹೂಡಿರುವ ದಾವೆಗೆ ಸಂಬಂಧಿಸಿದಂತೆ ಕೇಳಲಾದ ಪ್ರಶ್ನೆಗೆ, ವಾದಿಸಬೇಕೆ, ಬೇಡವೇ ಎನ್ನುವ ಕುರಿತು ಐಎಸ್‌ಐ ನಿರ್ಧಾರ ಕೈಗೊಳ್ಳಲಿದೆ.ಈ ನಿಟ್ಟಿನಲ್ಲಿ ಐಎಸ್‌ಐಗೆ ಪೂರ್ಣ ಅಧಿಕಾರ ನೀಡಲಾಗಿದೆ ಹಾಗೂ ಬೆಂಬಲ ನೀಡುವುದಾಗಿ ಹೇಳಿದರು.

ಹಾಗೆಯೆ ದಾವೆಯಲ್ಲಿ ಪ್ರತಿವಾದಿಯಾಗಿರುವ ಲಷ್ಕರ್-ಎ-ತೊಯ್ಬಾ ಸಂಘಟನೆಯ ಸಂಸ್ಥಾಪಕ ಹಫೀಜ್ ಮಹಮ್ಮದ್ ಸಯೀದ್ ಅವರ ಪರವಾಗಿಯೂ ವಾದಿಸಲಾಗುವುದೇ ಎನ್ನುವ ಪ್ರಶ್ನೆಗೆ, ಕಾನೂನಿನಂತೆ ಐಎಸ್‌ಐ ನಿರ್ಧಾರ ಕೈಗೊಳ್ಳುತ್ತದೆ. ಕಾನೂನಿಗಿಂತ ಯಾರೂ ಮೇಲಿಲ್ಲ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.