ADVERTISEMENT

ಮುಂಬೈ ದಾಳಿ ಪ್ರಕರಣ ಆರೋಪಿಗಳ ತನಿಖೆ ವಿಳಂಬ: ಪಾಕ್

​ಪ್ರಜಾವಾಣಿ ವಾರ್ತೆ
Published 9 ಜೂನ್ 2011, 19:30 IST
Last Updated 9 ಜೂನ್ 2011, 19:30 IST

ಇಸ್ಲಾಮಾಬಾದ್ (ಪಿಟಿಐ): ಮುಂಬೈ ದಾಳಿ ವಿಚಾರಣೆ ಸಂಬಂಧ ತಾನು ರಚಿಸಿರುವ  ನ್ಯಾಯಾಂಗ ಆಯೋಗಕ್ಕೆ ಭೇಟಿ ನೀಡಲು ಅನುಮತಿ ನೀಡುವ ಬಗ್ಗೆ ಭಾರತದ ಸರ್ಕಾರ ನಿರ್ಧಾರ ಕೈಗೊಳ್ಳದಿದ್ದರೆ, ಮುಂಬೈ ದಾಳಿ ಪ್ರಕರಣದ ಶಂಕಿತ ಆರೋಪಿಗಳ ವಿಚಾರಣೆ ವಿಳಂಬವಾಗುತ್ತದೆ ಎಂದು ಪಾಕಿಸ್ತಾನ ಹೇಳಿದೆ.

`ಮುಂಬೈ ದಾಳಿ ಸಂಬಂಧ ಬಂಧಿಸಿರುವ ಏಳು ಶಂಕಿತ ಆರೋಪಿಗಳ ವಿಚಾರಣೆಯನ್ನು ತ್ವರಿತವಾಗಿ ಮುಗಿಸಬೇಕೆಂಬು ದು ಉದ್ದೇಶ ನಮ್ಮದಾಗಿದೆ. ಆದರೆ ನ್ಯಾಯಾಂಗ ಆಯೋಗಕ್ಕೆ ಅಲ್ಲಿನ ಅಧಿಕಾರಿಗಳೊಂದಿಗೆ ಚರ್ಚಿಸಲು ಅವಕಾಶ ನೀಡದಿದ್ದರೆ ವಿಚಾರಣೆಯ ವಿಳಂಬಕ್ಕೆ ಭಾರತವೇ ಹೊಣೆಯಾಗುತ್ತದೆ~ ಎಂದು ಗೃಹ ಸಚಿವ ರೆಹಮಾನ್ ಮಲಿಕ್ ಸ್ಪಷ್ಟಪಡಿಸಿದ್ದಾರೆ.

ಮುಂಬೈ ದಾಳಿಯ ನಿಜವಾದ ಸಂಚುಕೋರರ ವಿರುದ್ಧ ಪಾಕಿಸ್ತಾನ ಕ್ರಮ ಕೈಗೊಳ್ಳದ ತನಕ ಎರಡೂ ರಾಷ್ಟ್ರಗಳ ನಡುವೆ ವಿಶ್ವಾಸ ಬೆಳೆಯಲು ಸಾಧ್ಯವಿಲ್ಲ ಎಂದು ಭಾರತದ ಗೃಹ ಸಚಿವ ಪಿ.ಚಿದಂಬರಂ ಅವರು ಬುಧವಾರ ಅಸಮಾಧಾನ ವ್ಯಕ್ತಪಡಿಸಿದ್ದ ಬೆನ್ನಲ್ಲೇ ಮಲಿಕ್ ಹೀಗೆ ಪ್ರತಿಕ್ರಿಯಿಸಿದ್ದಾರೆ.

ಕರಾಚಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದಾಳಿ ಪ್ರಕರಣದ ಶಂಕಿತ ಆರೋಪಿಗಳ ವಿರುದ್ಧ ಪಾಕಿಸ್ತಾನ ಕ್ರಮ ಕೈಗೊಳ್ಳಬೇಕಾದರೆ ಭಾರತ ಮತ್ತಷ್ಟು ಸಾಕ್ಷ್ಯ ಒದಗಿಸಬೇಕು ಎಂದೂ ಪುನರುಚ್ಚರಿಸಿದರು.

`ನಮ್ಮ ನ್ಯಾಯಾಂಗ ಆಯೋಗದ ಸದಸ್ಯರಿಗೆ ಭಾರತದ ಅಧಿಕಾರಿಗಳೊಂದಿಗೆ ಚರ್ಚಿಸಲು ಅನುಮತಿ ನೀಡಬೇಕು ಎಂದು ಮುಂಚಿನಿಂದಲೂ ಒತ್ತಾಯಿಸುತ್ತಿದ್ದೇವೆ. ನಮ್ಮ ಗೃಹ ಇಲಾಖೆ ಕಾರ್ಯದರ್ಶಿಗಳು ಆ ರಾಷ್ಟ್ರದ ಗೃಹ ಕಾರ್ಯದರ್ಶಿಗಳೊಡನೆ ಈ ಬಗ್ಗೆ ಮಾತುಕತೆಯನ್ನೂ ನಡೆಸಿದ್ದಾರೆ. ಇದಕ್ಕೆ ಭಾರತ ಸಕಾರಾತ್ಮಕವಾಗಿ ಸ್ಪಂದಿಸಲಿದೆ ಎಂಬುದು ನಮ್ಮ ನಿರೀಕ್ಷೆ~ ಎಂದರು.

ಮುಂಬೈ ದಾಳಿ ಸಂಚಿನಲ್ಲಿ ಡೇವಿಡ್ ಹೆಡ್ಲಿಗೆ ನೆರವಾದ ಮೇಜರ್ ಇಕ್ಬಾಲ್ ಎಂಬ ಐಎಸ್‌ಐ ಅಧಿಕಾರಿ ಸೇರಿದಂತೆ ಇನ್ನೂ ಐವರು ಶಂಕಿತರನ್ನು ಪಾಕಿಸ್ತಾನ ಬಂಧಿಸಬೇಕು ಎಂದು ಚಿದಂಬರಂ ಒತ್ತಾಯಿಸಿದ್ದಾರೆ. ಆದರೆ, ಮೇಜರ್ ಇಕ್ಬಾಲ್ ಹಾಗೂ ಮತ್ತಿತರರ ವಿರುದ್ಧ  ಕ್ರಮ ಕೈಗೊಳ್ಳಬೇಕೆಂದರೆ ಭಾರತ ಮತ್ತಷ್ಟು ಪುರಾವೆಗಳನ್ನು ಒದಗಿಸಬೇಕು ಎಂದರು.

`ಮೇಜರ್ ಇಕ್ಬಾಲ್ ಎಂಬುದು ಒಂದು ವಂಶದ ಹೆಸರು. ಆ ಹೆಸರು ಪಾಕಿಸ್ತಾನದಲ್ಲಿ ಸಾಮಾನ್ಯ. ಅದರ ಸುಳಿವು ಹಿಡಿದು ಯಾರನ್ನೂ ಪತ್ತೆ ಮಾಡಲು ಸಾಧ್ಯವಿಲ್ಲ~ ಎಂದೂ ಸಮರ್ಥಿಸಿಕೊಂಡರು. `ಡೇವಿಡ್ ಹೆಡ್ಲಿಗೆ ಸಂಬಂಧಿಸಿದಂತೆ ಭಾರತಕ್ಕೆ ನಾವು 36 ಪ್ರಶ್ನೆ ಕೇಳಿದ್ದೆವು. ಅದಕ್ಕೆ ಈವರೆಗೆ ಪ್ರತಿಕ್ರಿಯೆ ಬಂದಿಲ್ಲ~ ಎಂದ ಅವರು, ಷಿಕಾಗೊ ನ್ಯಾಯಾಲಯದಲ್ಲಿ ತಹಾವುರ್ ರಾಣಾ ವಿಚಾರಣೆ ವೇಳೆ ಡೇವಿಡ್ ಹೆಡ್ಲಿ ದಾಳಿ ಕುರಿತು ನೀಡಿರುವ ಹೇಳಿಕೆಗಳನ್ನು ತಳ್ಳಿಹಾಕಿದರು.

ಪಾಕಿಸ್ತಾನಿ ತಂದೆಯ ಮಗನಾದ ಹೆಡ್ಲಿ ನಿಜವಾಗಿಯೂ ಡಬಲ್ ಏಜೆಂಟ್. ಆತ ಭಾರತಕ್ಕೆ ಒಂಬತ್ತು ಬಾರಿ, ಪಾಕಿಸ್ತಾನ ಹಾಗೂ ಯೂರೋಪ್‌ಗೆ ಹಲವಾರು ಬಾರಿ ಭೇಟಿ ನೀಡಿದ್ದ. ಇಷ್ಟು ಬಾರಿ ವಿದೇಶಗಳಿಗೆ ಭೇಟಿ ನೀಡಲು ಆತನಿಗೆ ಹಣ ಎಲ್ಲಿಂದ ಬಂತು? ಯಾರಾದರೂ ಅದನ್ನು ಪೂರೈಸಿರಲೇಬೇಕಲ್ಲವೇ?- ಎಂದು ಅವರು ಮಾರ್ಮಿಕವಾಗಿ ಕೇಳಿದರು.

2007ರಲ್ಲಿ 42 ಪಾಕಿಸ್ತಾನೀಯರನ್ನು ಬಲಿಪಡೆದ ಸಂಜೋತಾ ಎಕ್ಸ್‌ಪ್ರೆಸ್ ರೈಲಿನ ಬಾಂಬ್ ಸ್ಫೋಟ ಪ್ರಕರಣದ ಬಗ್ಗೆ ಭಾರತ ಶೀಘ್ರವೇ ತನಿಖೆ ನಡೆಸಬೇಕು. ಈ ದುರಂತದ ಹಿಂದೆ ಭಾರತದ ಬೇಹುಗಾರಿಕಾ ದಳ ಹಾಗೂ ಸೇನಾಪಡೆಗಳ ಕೈವಾಡವಿದೆ. ಆದರೂ ವಿನಾಕಾರಣ ಐಎಸ್‌ಐ ಮೇಲೆ ಗೂಬೆ ಕೂರಿಸಲಾಗುತ್ತದೆ ಎಂದರು. ಮುಂಬೈ ದಾಳಿ ಸಂಬಂಧ ಪಾಕಿಸ್ತಾನ ಬಂಧಿಸಿರುವ ಏಳು ಶಂಕಿತ ಆರೋಪಿಗಳ ಪೈಕಿ ಲಷ್ಕರ್ ಎ ತೊಯ್ಬಾ ಕಮಾಂಡರ್ ಜಕೀಉರ್ ರೆಹಮಾನ್ ಲಖ್ವಿಯೂ ಸೇರಿದ್ದಾನೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.