ಇಸ್ಲಾಮಾಬಾದ್ (ಪಿಟಿಐ): ಪಾಕಿಸ್ತಾನದ ಮಾಜಿ ಅಧ್ಯಕ್ಷ ಪರ್ವೇಜ್ ಮುಷರಫ್ ಅವರ ಮೇಲೆ ಉಗ್ರರ ದಾಳಿಯ ಸಾಧ್ಯತೆ ಕುರಿತು ಭದ್ರತಾ ಜಾಗೃತಿಗಾಗಿ ಮುನ್ನೆಚ್ಚರಿಕೆ ಸಂದೇಶ ನೀಡಿದ ಪ್ರಕರಣದಲ್ಲಿ ವಿವರಣೆ ನೀಡಲು ರಹಸ್ಯ ವಿಚಾರಣೆಗೆ ಹಾಜರಾಗುವಂತೆ ಉನ್ನತ ಗುಪ್ತಚರ ಅಧಿಕಾರಿಗಳಿಗೆ ವಿಶೇಷ ನ್ಯಾಯಾಲಯ ಬುಧವಾರ ಸಮನ್ಸ್ ನೀಡಿದೆ.
2007ರಲ್ಲಿ ತುರ್ತು ಪರಿಸ್ಥಿತಿ ಹೇರಿದ್ದ ಕಾರಣಕ್ಕಾಗಿ ಮುಷರಫ್ ದೇಶದ್ರೋಹ ಮೊಕದ್ದಮೆ ಎದುರಿಸುತ್ತಿದ್ದು, ನ್ಯಾಯಮೂರ್ತಿ ಫೈಸಲ್ ಅರಬ್ ನೇತೃತ್ವದ ಮೂವರು ಸದಸ್ಯರ ಪೀಠ ವಿಚಾರಣೆನಡೆಸುತ್ತಿದೆ. ಈ ವಿಚಾರಣೆ ಗುರುವಾರಕ್ಕೆ ಮುಂದೂಡಲ್‍ಪಟ್ಟಿದೆ.
ವಕೀಲರಿಗೆ ಪ್ರವೇಶ ನಿರ್ಬಂಧ
ಈ ಮಧ್ಯೆ, ಮುಷರಫ್ ಪರ ವಕೀಲ ರಾಣಾ ಇಜಾಜ್ ಅವರನ್ನು ನ್ಯಾಯಾಲಯ ಪ್ರವೇಶಿಸದಂತೆ ಭದ್ರತಾ ಸಿಬ್ಬಂದಿ ಬುಧವಾರ ತಡೆದ ಘಟನೆ ನಡೆಯಿತು.
ಮಂಗಳವಾರ ವಿಚಾರಣೆ ಸಂದರ್ಭದಲ್ಲಿ ನ್ಯಾಯಾಧೀಶರೊಂದಿಗೆ ಅನುಚಿತವಾಗಿ ನಡೆದುಕೊಂಡ ಕಾರಣಕ್ಕಾಗಿ ಅವರಿಗೆ ಕೋರ್ಟ್ ಪ್ರವೇಶ ನಿರ್ಬಂಧಿಸಿ ರಿಜಿಸ್ಟ್ರಾರ್ ಅಬ್ದುಲ್ ಘನಿ ಸೂಮ್ರೊ ಆದೇಶ ಹೊರಡಿಸಿದ್ದರು.
‘ಲ್ಯಾರಿ ಗ್ಯಾಂಗ್’ನಿಂದ ತಮಗೆ ಬೆದರಿಕೆ ಕರೆ ಬಂದಿದ್ದು, ಇದರಲ್ಲಿ ನ್ಯಾ. ಫೈಸಲ್ ಅರಬ್ ಅವರ ಕೈವಾಡ ಇದೆ ಎಂದು ವಿಚಾರಣೆ ವೇಳೆ ನೇರವಾಗಿ ಇಜಾಜ್ ಆರೋಪಿಸಿದ್ದರು. ಇದರಿಂದ ಕೆಂಡಾಮಂಡಲರಾದ ಪೈಜಲ್ ಅವರು ಇಜಾಜ್ ಅವರನ್ನು ಭದ್ರತಾ ಸಿಬ್ಬಂದಿ ಮೂಲಕ ಹೊರಹಾಕಿಸಿದ್ದರು.
ಅಲ್ಲದೆ, ‘ಇದು ನ್ಯಾಯಾಲಯ ಅಲ್ಲ, ಕಟುಕರ ಮನೆ’ ಎಂದು ಕೂಗಾಡಿದ್ದರು. ಇದಕ್ಕೆ ಕ್ಷಮೆ ಕೇಳಲು ನ್ಯಾಯಾಧೀಶರು ಹೇಳಿದಾಗ, ಇಜಾಜ್ ನಿರಾಕರಿಸಿದ ಕಾರಣ ಅವರಿಗೆ ನ್ಯಾಯಾಲಯದ ಒಳಗೆ ಪ್ರವೇಶ ನಿರ್ಬಂಧಿಸಲಾಗಿತ್ತು.
ಮುಂಬೈ ದಾಳಿ: ವಿಚಾರಣೆ 19ಕ್ಕೆ
ಲಾಹೋರ್ (ಪಿಟಿಐ): ಮುಂಬೈ ದಾಳಿ ಪ್ರಕರಣದ ಏಳು ಆರೋಪಿಗಳ ವಿಚಾರಣೆಯನ್ನು ಪಾಕಿಸ್ತಾನ ನ್ಯಾಯಾಲಯ ಈ ತಿಂಗಳ 19ಕ್ಕೆ ಮುಂದೂಡಿದೆ.
ಇತ್ತೀಚೆಗೆ ಪಾಕ್ ನ್ಯಾಯಾಲಯದ ಮೇಲೆ ಉಗ್ರರ ದಾಳಿ ನಡೆದ ಹಿನ್ನೆಲೆಯಲ್ಲಿ ಭದ್ರತೆಯ ದೃಷ್ಟಿಯಿಂದ ವಿಚಾರಣೆಯನ್ನು ಮುಂದೂಡಲಾಗಿದೆ ಎಂದು ಮೂಲಗಳು ತಿಳಿಸಿವೆ.
ಪೂರ್ಣ ಪ್ರಮಾಣದ ಭದ್ರತೆ ಒದಗಿಸದ ಹೊರತು ಉನ್ನತ ಮಟ್ಟದ ಪ್ರಕರಣಗಳ ವಿಚಾರಣೆಯಲ್ಲಿ ಭಾಗವಹಿಸುವುದಿಲ್ಲ ಎಂದು ವಕೀಲ ಚೌಧರಿ ಅಜರ್ ಘೋಷಿಸಿದ್ದಾರೆ. ಮುಂಬೈ ದಾಳಿ ಪ್ರಕರಣದ ಸರ್ಕಾರಿ ವಕೀಲ ಜುಲ್ಫಿಕರ್ ಅಲಿ ಅವರ ಹತ್ಯೆ ನಂತರ ಚೌಧರಿ ಅಲಿ ಸರ್ಕಾರಿ ವಕೀಲರಾಗಿ ನೇಮಕಗೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.