ಮೆಕ್ಸಿಕೊ ನಗರ (ಎಎಫ್‌ಪಿ): ಲ್ಯಾಟಿನ್ ಅಮೆರಿಕದ ಬಹು ದೊಡ್ಡ ದೇಶ ಮೆಕ್ಸಿಕೊದಲ್ಲಿ 7.4 ರಷ್ಟು ತೀವ್ರತೆಯ ಪ್ರಬಲ ಭೂಕಂಪ ಸಂಭವಿಸಿದ್ದು, ದೊಡ್ಡ ದೊಡ್ಡ ಕಟ್ಟಡಗಳಲ್ಲಿ ಬಿರುಕು ಕಾಣಿಸಿಕೊಂಡಿದೆ.
ಸದ್ಯ ಇಲ್ಲಿದ್ದ ಅಮೆರಿಕ ಅಧ್ಯಕ್ಷ ಒಬಾಮ ಪುತ್ರಿ ಮಾಲಿಯಾ ಒಬಾಮ ಅವರು ಸುರಕ್ಷಿತವಾಗಿದ್ದಾರೆ ಎಂದು ಶ್ವೇತಭವನದ ಮೂಲಗಳು ತಿಳಿಸಿವೆ.
ಭೂಕಂಪದ ನಂತರವೂ ಹಲವು ಬಾರಿ ಪಶ್ಚಾತ್ ಕಂಪನಗಳು ಮೆಕ್ಸಿಕೊ ನಗರವನ್ನು ನಡುಗಿಸಿವೆ.
ಶಾಲಾ ಕಟ್ಟಡಗಳೂ ಸೇರಿದಂತೆ ಹಲವು ಕಟ್ಟಡಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದರೆ, ಸೇತುವೆಗಳು ಕುಸಿದು ಬಿದ್ದಿವೆ. ಸಾವಿರಾರು ಮನೆಗಳಿಗೆ ಹಾನಿಯಾಗಿದೆ. ಟೆಲಿಫೋನ್ ಸೇರಿದಂತೆ ಸಂಪರ್ಕ ವ್ಯವಸ್ಥೆ ಅಸ್ತವ್ಯಸ್ತಗೊಂಡಿದೆ.
ಆಸ್ಪತ್ರೆಗಳಲ್ಲೂ ಬಿರುಕು ಕಾಣಿಸಕೊಂಡಿದ್ದು, ಹೆರಿಗೆಗಾಗಿ ಬಂದಿರುವ ಹೆಂಗಸರನ್ನೂ ಸೇರಿದಂತೆ ಎಲ್ಲಾ ರೋಗಿಗಳನ್ನು ಸಮೀಪದ ಉದ್ಯಾನವನಕ್ಕೆ ಸ್ಥಳಾಂತರಿಸಲಾಗಿದೆ. 1985ರ ನಂತರದ ಬಹುದೊಡ್ಡ ಭೂಕಂಪ ಇದೆಂದು ತಜ್ಞರು ವಿಶ್ಲೇಷಿಸಿದ್ದಾರೆ.
11 ಮಂದಿ ಗಾಯಗೊಂಡಿದ್ದಾರೆ ಎಂದು ತಕ್ಷಣಕ್ಕೆ ವರದಿ ಬಂದಿದೆ. ರಕ್ಷಣಾ ಕಾರ್ಯಕ್ಕೆ ಸರ್ಕಾರ ಒತ್ತು ಕೊಟ್ಟಿದ್ದು, ಇನ್ನಷ್ಟು ವಿವರಗಳನ್ನು ನಿರೀಕ್ಷಿಸಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.