ADVERTISEMENT

ಮೇ 6ರಂದು ನಿರ್ಣಾಯಕ ಮತದಾನ; ಫ್ರಾನ್ಸ್ ಅಧ್ಯಕ್ಷೀಯ ಚುನಾವಣೆ ಆರಂಭ

​ಪ್ರಜಾವಾಣಿ ವಾರ್ತೆ
Published 22 ಏಪ್ರಿಲ್ 2012, 19:30 IST
Last Updated 22 ಏಪ್ರಿಲ್ 2012, 19:30 IST

ಪ್ಯಾರಿಸ್ (ಎಪಿ): ಫ್ರಾನ್ಸ್‌ನಲ್ಲಿ ಮೊದಲ ಹಂತದ ಅಧ್ಯಕ್ಷೀಯ ಚುನಾವಣೆಗೆ ಭಾನುವಾರ ಚಾಲನೆ ದೊರೆತಿದೆ. ಮತ್ತೊಮ್ಮೆ ಅಧ್ಯಕ್ಷ ಸ್ಥಾನದ ಹುದ್ದೆಗೆ ಏರುವ ತವಕದಲ್ಲಿರುವ ಅಧ್ಯಕ್ಷ ನಿಕೊಲಸ್ ಸರ್ಕೊಜಿ ಅವರ ಭವಿಷ್ಯ ಅನಿಶ್ಚಿತವಾಗಿದೆ ಎಂದು ಹೇಳಲಾಗುತ್ತಿದೆ. ಚುನಾವಣೆಯಲ್ಲಿ ಅಚ್ಚರಿಯ ಫಲಿತಾಂಶ ಬರುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ ಎನ್ನಲಾಗಿದೆ.

ದೇಶದ ಆರ್ಥಿಕ ಪರಿಸ್ಥಿತಿ ಮತ್ತು ನಿರುದ್ಯೋಗ ಸಮಸ್ಯೆಗಳನ್ನು ಸರ್ಕೊಜಿ ಅವರ ಆಡಳಿತ ನಿರ್ವಹಿಸಿದ ರೀತಿಯ ಬಗ್ಗೆ ಫ್ರಾನ್ಸ್‌ನ ಹಲವು ನಾಗರಿಕರು ಅಸಮಾಧಾನ ಹೊಂದಿದ್ದಾರೆ ಎಂಬುದನ್ನು ಮೊದಲ ಹಂತದ ಚುನಾವಣೆ ತೋರಿಸಿದೆ.

ಮೊದಲ ಹಂತದ ಚುನಾವಣೆಯಲ್ಲಿ  ಒಟ್ಟು 10 ಅಭ್ಯರ್ಥಿಗಳು ಸ್ಪರ್ಧಿಸಿದ್ದು, ಇವರಲ್ಲಿ ಇಬ್ಬರು ಅಂತಿಮ ಹಂತಕ್ಕೆ ಆಯ್ಕೆಯಾಗಲಿದ್ದಾರೆ. ಮೇ 6ರಂದು ನಿರ್ಣಾಯಕ ಚುನಾವಣೆ ನಡೆಯಲಿದೆ. ಆ ಚುನಾವಣೆಯಲ್ಲಿ ವಿಜೇತರಾದ ಅಭ್ಯರ್ಥಿ ಮುಂದಿನ ಐದು ವರ್ಷಗಳ ಕಾಲ ಯುರೋಪಿಯನ್ ಒಕ್ಕೂಟದ ಪ್ರಮುಖ ಆಧಾರಸ್ತಂಭವಾದ ಫ್ರಾನ್ಸ್‌ನ ಆಡಳಿತ ಚುಕ್ಕಾಣಿ ಹಿಡಿಯಲಿದ್ದಾರೆ.

ಕನ್ಸರ್ವೇಟಿವ್ ಪಕ್ಷದವರಾದ ಸರ್ಕೊಜಿ ಅವರ ಜನಪ್ರಿಯತೆ ಕುಸಿದಿರುವುದು ಕಳೆದ ಕೆಲವು ತಿಂಗಳಿಂದ ನಡೆದ ಜನ ಮತ ಸಂಗ್ರಹಣೆಯಿಂದ ತಿಳಿದುಬಂದಿದೆ. ಈ ಚುನಾವಣೆಯಲ್ಲಿ ಸೋಷಿಯಲಿಸ್ಟ್ ಪಕ್ಷದ ಫ್ರಾಂಕೊಯಿಸ್ ಹೊಲ್ಲಾಂಡೆ ಅವರು ಗೆಲ್ಲುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

`ಯೂರೋಪ್‌ನ ಭವಿಷ್ಯದ ದೃಷ್ಟಿಯಿಂದ ಈ ಚುನಾವಣೆ ಅತ್ಯಂತ ಮಹತ್ವದ್ದಾಗಿದೆ. ಹಾಗಾಗಿಯೇ ತುಂಬಾ ಜನರು ನಮ್ಮನ್ನು ಗಮನಿಸುತ್ತಿದ್ದಾರೆ~ ಎಂದು ಹೊಲ್ಲಾಂಡೆ ಭಾನುವಾರ ಮತ ಚಲಾಯಿಸಿದ ಬಳಿಕ ಹೇಳಿದ್ದಾರೆ.
`ಚುನಾವಣೆಯಲ್ಲಿ ಯಾರು ಜಯಗಳಿಸಬಹುದು ಎಂಬ ಬಗ್ಗೆ ಜನರು ಅಷ್ಟು ಕುತೂಹಲ ವ್ಯಕ್ತಪಡಿಸುತ್ತಿಲ್ಲ. ಭವಿಷ್ಯದಲ್ಲಿ ಯಾವ ನಿಯಮಗಳು ಜಾರಿಗೆ ಬರಬಹುದು ಎಂಬ ಬಗ್ಗೆ ಜನರು ಕುತೂಹಲಿಗಳಾಗಿದ್ದಾರೆ~ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

`ಅದಕ್ಕಾಗಿ ನಾನು ಕೇವಲ ಹೆಸರಾಂತ ವ್ಯಕ್ತಿಗಳು ಇರುವ ಸ್ಪರ್ಧೆಯಲ್ಲಿಲ್ಲ. ನಾನು ನನ್ನ ದೇಶದ ಜನರಲ್ಲಿ ಹೊಸ ಆಶಾ ಭಾವವನ್ನು ಮೂಡಿಸಬೇಕಾದ ಮತ್ತು ಯೂರೋಪ್‌ಗೆ ಹೊಸ ಬದ್ಧತೆಯನ್ನು ನೀಡಬೇಕಾದಂತಹ  ಸ್ಪರ್ಧೆಯಲ್ಲಿದ್ದೇನೆ~ ಎಂದು ಹೊಲ್ಲಾಂಡೆ ಅವರು ಹೇಳಿದ್ದಾರೆ.

ಪ್ರಚಾರದ ಸಂದರ್ಭದಲ್ಲಿ ಅಧ್ಯಕ್ಷ ಸರ್ಕೊಜಿ ಅವರು ನಿರಂತರವಾಗಿ  ಆರ್ಥಿಕ ಹಿಂಜರಿತ ಮತ್ತು ಸಾಲದ ಸಮಸ್ಯೆಗಳು ಕೇವಲ ಫ್ರಾನ್ಸ್‌ನಲ್ಲಿ ಮಾತ್ರವಲ್ಲ ಯೂರೋಪಿನಾದ್ಯಂತ ಇದೆ ಎಂದು ಹೇಳುತ್ತಲೇ ತಮ್ಮ ಆಡಳಿತವನ್ನು ಸಮರ್ಥಿಸುತ್ತಾ ಬಂದಿದ್ದರು.

ಮೊದಲ ಹಂತದಲ್ಲಿ ಸ್ಪರ್ಧಿಸಿರುವ ಇತರ ಸ್ಪರ್ಧಿಗಳಾದ  ಬಲಪಂಥೀಯ ನ್ಯಾಷನಲ್ ಫ್ರಂಟ್‌ನ ಮೆರೈನ್ ಲೆ ಪೆನ್, ಕಮ್ಯುನಿಸ್ಟ್ ಬೆಂಬಲಿತ  ಜೀನ್ ಲುಕ್ ಮೆಲೆಂಖೊನ್, ತಟಸ್ಥ ನಿಲುವಿನ ಫ್ರಾಂಕೊಯಿಸ್  ಬಾಯ್ರ್ ಅವರು ಪ್ರಬಲ ಸ್ಪರ್ಧೆ ಒಡ್ಡಲಿದ್ದಾರೆ.

ಚುನಾವಣೆಯಲ್ಲಿ ಇವರು ಜಯಶಾಲಿಯಾಗದಿದ್ದರೂ ಇವರಲ್ಲಿ ಯಾರಾದರೊಬ್ಬರು ಅಥವಾ ಎಲ್ಲರೂ ಪಡೆಯುವ ಮತಗಳು ಎರಡನೇ ಹಂತದ  ಚುನಾವಣೆ ಮೇಲೆ ಪ್ರಭಾವ ಬೀರುವ ಸಾಧ್ಯತೆ ಇದೆ ಎಂದು ವಿಶ್ಲೇಶಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.