ADVERTISEMENT

ಮೈಕಲ್‌ ಶುಮಾಕರ್ ಆರೋಗ್ಯ ಸ್ಥಿತಿ ಸ್ಥಿರ

​ಪ್ರಜಾವಾಣಿ ವಾರ್ತೆ
Published 1 ಜನವರಿ 2014, 19:30 IST
Last Updated 1 ಜನವರಿ 2014, 19:30 IST

ಗ್ರೆನೋಬಲ್ (ಪಿಟಿಐ/ಐಎಎನ್‌ಎಸ್): ಮಾಜಿ ಫಾರ್ಮುಲಾ ಒನ್ ರೇಸ್ ಚಾಲಕ ಮೈಕಲ್ ಶುಮಾಕರ್ ಸ್ಕೀಯಿಂಗ್ ವೇಳೆ ನಿಯಂತ್ರಣ ತಪ್ಪಿ ಬಿದ್ದು ಆಸ್ಪತ್ರೆ ಸೇರಿ ಮೂರು ದಿನ ಕಳೆದಿದ್ದು ಅವರ ಆರೋಗ್ಯ ಸ್ಥಿತಿ ಸ್ಥಿರವಾಗಿದೆ.

ಅವರು  ಪ್ರಜ್ಞಾಹೀನ ಸ್ಥಿತಿಯಲ್ಲಿಯೇ ಇದ್ದು, ವೈದ್ಯರು ನಿರಂತರವಾಗಿ ಚಿಕಿತ್ಸೆ ನೀಡುತ್ತಿದ್ದಾರೆ. ಮಂಗಳವಾರ ಅವರಿಗೆ ಎರಡನೇ ಬಾರಿ ಶಸ್ತ್ರ ಚಿಕಿತ್ಸೆ ನಡೆಸಿದ ನಂತರ ಅಲ್ಪ ಚೇತರಿಕೆ ಕಂಡಿರುವುದು ಮೆದುಳಿನ ಸ್ಕ್ಯಾನಿಂಗ್‌ ವೇಳೆ ತಿಳಿದಿದೆ. ಜೊತೆಗೆ ಅವರ ದೇಹದ ಉಷ್ಣಾಂಶವು 34 ರಿಂದ 35 ಸೆಲ್ಸಿಯಸ್‌ಗೆ ಇಳಿಕೆ ಕಂಡಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಘಟನೆ ನಡೆದಾಗ ಅವರು ಗಂಟೆಗೆ ಕೇವಲ 10 ಕಿ.ಮೀ ವೇಗದಲ್ಲಿ ಸ್ಕೀಯಿಂಗ್‌ನಲ್ಲಿ ತೊಡಗಿಕೊಂಡಿದ್ದರು. ತಿರುವಿನ ವೇಳೆ ನಿಯಂತ್ರಣ ತಪ್ಪಿ ಬಿದ್ದಾಗ ಅವರ ತಲೆ ಹಿಮಬಂಡೆಗೆ ಬಡಿಯಿತು. ಈ ಸಂದರ್ಭ ಅವರು ಧರಿಸಿದ್ದ ಹೆಲ್ಮೆಟ್ ಚೂರಾಗಿ ರಕ್ತಸಿಕ್ತಗೊಂಡಿತ್ತು ಎಂದು ಅವರ  ಮ್ಯಾನೇಜರ್ ಸೆಬೀನ್ ಕೆಹ್ಮ್ ಹೇಳಿದ್ದಾರೆ.

ಶುಮಾಕರ್ ಶುಕ್ರವಾರ 45 ನೇ ವಸಂತಕ್ಕೆ ಕಾಲಿರಿಸಲಿದ್ದಾರೆ. ಅವರಿಗೆ ಚಿಕಿತ್ಸೆ ನೀಡುತ್ತಿರುವ ಸಿಎಚ್‌ಯು ಆಸ್ಪತ್ರೆ ವೈದ್ಯರು ಅವರು ಪ್ರಾಣಾಪಾಯದಿಂದ ಪಾರಾಗಿಲ್ಲ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.