ADVERTISEMENT

ಮೊ ಯಾನ್‌ಗೆ ಸಾಹಿತ್ಯದ ನೊಬೆಲ್

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2012, 19:30 IST
Last Updated 11 ಅಕ್ಟೋಬರ್ 2012, 19:30 IST

ಸ್ಟಾಕ್‌ಹೋಮ್ (ಐಎಎನ್‌ಎಸ್/ಎಪಿ): ಮೊ ಯಾನ್ ಕಾವ್ಯನಾಮದಿಂದ ಪ್ರಸಿದ್ಧರಾಗಿರುವ ಚೀನಾ ಸಾಹಿತಿ ಗುವಾನ್ ಮೊಯ್ ಅವರನ್ನು 2012ನೇ ಸಾಲಿನ ನೊಬೆಲ್ ಸಾಹಿತ್ಯ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ.
ಇತ್ತೀಚಿನ ವರ್ಷಗಳಲ್ಲಿ ಐರೋಪ್ಯ ಬರಹಗಾರರನ್ನೇ ಹೆಚ್ಚಾಗಿ ಪ್ರಶಸ್ತಿಗೆ ಪರಿಗಣಿಸುತ್ತಿದ್ದ ನೊಬೆಲ್ ಆಯ್ಕೆ ಸಮಿತಿಯ ಈ ನಿರ್ಧಾರ ಅಚ್ಚರಿಗೆ ಕಾರಣವಾಗಿದೆ.

ಮೊ ಯಾನ್ ಚೀನಾ ಸಾಹಿತಿಗಳ ಪೈಕಿ ಜಗತ್ತಿನಾದ್ಯಂತ ಅತಿ ಜನಪ್ರಿಯರಾಗಿರುವ, ಹಲವು ಬಾರಿ ನಿಷೇಧಕ್ಕೆ ಒಳಗಾಗಿರುವ ಬರಹಗಾರ. `ಅವರ ಕೃತಿಗಳಲ್ಲಿ ಭ್ರಾಮಕ ವಾಸ್ತವ ಅಡಗಿದ್ದು, ಜನಪದ ಕಥೆಗಳು, ಇತಿಹಾಸ ಹಾಗೂ ಸಮಕಾಲೀನ ಸಮಾಜದ ಸತ್ಯಗಳು ಸುಂದರವಾಗಿ ಮಿಳಿತವಾಗಿರುತ್ತವೆ~ ಎಂದು ನೊಬೆಲ್ ಪುರಸ್ಕಾರ ನೀಡುವ ಸ್ವಿಡಿಷ್ ಅಕಾಡೆಮಿ ಪ್ರಶಂಸಿಸಿದೆ.

57 ವರ್ಷದ ಮೊ ಯಾನ್ ನೊಬೆಲ್ ಸಾಹಿತ್ಯ ಪುರಸ್ಕಾರಕ್ಕೆ ಪಾತ್ರರಾಗಿರುವ ಮೊದಲ ಚೀನಾ ಪ್ರಜೆ. ಹಾಗೆಂದು ಈ ಗೌರವಕ್ಕೆ ಪಾತ್ರರಾಗಿರುವ ಮೊದಲ ಚೀನಿಯ ಅವರಲ್ಲ. ಫ್ರಾನ್ಸ್‌ಗೆ ವಲಸೆ ಹೋಗಿರುವ ಸಾಹಿತಿ ಗಾವೊ ಕ್ಸಿಂಗ್‌ಜಿಯಾನ್ ಅವರಿಗೆ 2000ನೇ ಇಸ್ವಿಯಲ್ಲಿ ನೊಬೆಲ್ ದೊರಕಿತ್ತು. ಚೀನಾದ ಕಮ್ಯುನಿಸ್ಟ್ ಸರ್ಕಾರ ಅವರ ಕೃತಿಗಳನ್ನು ತಮ್ಮ ದೇಶದಲ್ಲಿ ನಿಷೇಧಿಸಿದ್ದು, ಗಾವೊ ತಮ್ಮವರಲ್ಲ ಎಂದು ಹೇಳಿಕೊಂಡಿತ್ತು.

ಆದರೆ, ಮೊ ಅವರಿಗೆ ಸಂದಿರುವ ಪ್ರಶಸ್ತಿಯನ್ನು ಚೀನಾ ಸರ್ಕಾರ ತೆರೆದ ಮನಸ್ಸಿನಿಂದ ಸ್ವೀಕರಿಸುವ ಸಾಧ್ಯತೆಯಿದೆ.

ಹಿನ್ನೆಲೆ: ಪೂರ್ವದ ಶಾಂಡಾಂಗ್ ಪ್ರಾಂತ್ಯದ ಗೊಮಿ ಪಟ್ಟಣದಲ್ಲಿ ಕೃಷಿಕರ ಕುಟುಂಬದಲ್ಲಿ 1955ರಲ್ಲಿ ಜನಿಸಿದ ಗುವಾನ್ ಮೊಯ್ 12ನೇ ವಯಸ್ಸಿನಲ್ಲೇ ಶಾಲೆ ಬಿಟ್ಟರು. ಮೊದಲು ಹೊಲದಲ್ಲಿ ಆನಂತರ ತೈಲ ಕಾರ್ಖಾನೆಯೊಂದರಲ್ಲಿ ಕೆಲಸ ಮಾಡಿದರು. 20ರ ವಯಸ್ಸಿನಲ್ಲಿ `ಪೀಪಲ್ಸ್ ಲಿಬರೇಷನ್ ಆರ್ಮಿ~ ಸೇರಿದರು. ಸೈನಿಕನಾಗಿದ್ದಾಗಲೇ ಸಾಹಿತ್ಯ ಅಧ್ಯಯನದಲ್ಲಿ ತೊಡಗಿಕೊಂಡು ಬರಹ ಕೃಷಿ ಆರಂಭಿಸಿದರು.

ಅವರ ಮೊದಲ ಸಣ್ಣ ಕಥೆ 1981ರಲ್ಲಿ ಪ್ರಕಟವಾಯಿತು. 1986ರಲ್ಲಿ `ಟೌಮಿಂಗ್ ಡೆ ಹಾಂಗ್ ಲುಬೊ~ ಕಾದಂಬರಿಯ ಮೂಲಕ ಪ್ರಸಿದ್ಧರಾದ ಮೊ ಯಾನ್, 1987ರಲ್ಲಿ `ಹಾಂಗ್ ಗೊಲಿಯಾಂಗ್ ಜಿಯಾಝು~ (ರೆಡ್ ಸಾರ್ಗಮ್) ಕಾದಂಬರಿ ಮೂಲಕ ಕೀರ್ತಿ ಶಿಖರ ಏರಿದರು.

ತಮ್ಮ ಕೃತಿಗಳಲ್ಲಿ ಸಮಕಾಲೀನ ಸಮಾಜದ ಹುಳುಕುಗಳನ್ನು ಎತ್ತಿಹಿಡಿಯುವ ಮೊ ಯಾನ್ ಅವರು ಗೇಬ್ರಿಯಲ್ ಮಾರ್ಕ್ವೆಜ್ ಅವರಿಂದ ಪ್ರಭಾವಿತಗೊಂಡವರು. ವಿಶ್ವ ಸಾಹಿತ್ಯದಲ್ಲಿ ಜರ್ಮನಿಯ ಕಾಫ್ಕಾ ಹಾಗೂ ಅಮೆರಿಕದ ಜೋಸೆಫ್ ಹೆಲ್ಲರ್ ಅವರೊಂದಿಗೆ ಮೊ ಅವರನ್ನು ಹೋಲಿಸಲಾಗುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.