ADVERTISEMENT

ಮ್ಯಾಥ್ಯೂ ಅಬ್ಬರಕ್ಕೆ ಹೈಟಿ ನುಚ್ಚುನೂರು

ರಾಯಿಟರ್ಸ್
Published 8 ಅಕ್ಟೋಬರ್ 2016, 20:20 IST
Last Updated 8 ಅಕ್ಟೋಬರ್ 2016, 20:20 IST
ಹೈಟಿಯ ಜೆರೆಮಿ ಪ್ರಾಂತ್ಯದಲ್ಲಿ ಮ್ಯಾಥ್ಯು ಚಂಡಮಾರುತದಿಂದ ಜನವಸತಿ ಪ್ರದೇಶವೊಂದು ನಾಶವಾಗಿರುವುದು  -ಎಎಫ್‌ಪಿ ಚಿತ್ರ
ಹೈಟಿಯ ಜೆರೆಮಿ ಪ್ರಾಂತ್ಯದಲ್ಲಿ ಮ್ಯಾಥ್ಯು ಚಂಡಮಾರುತದಿಂದ ಜನವಸತಿ ಪ್ರದೇಶವೊಂದು ನಾಶವಾಗಿರುವುದು -ಎಎಫ್‌ಪಿ ಚಿತ್ರ   

ಹೈಟಿ : ಹೈಟಿಯಲ್ಲಿ ಮ್ಯಾಥ್ಯೂ ಚಂಡಮಾರುತ ಸಂಬಂಧಿತ ಘಟನೆಗಳಲ್ಲಿ ಬಲಿಯಾದವರ ಸಂಖ್ಯೆ ಶನಿವಾರ ಸಂಜೆ ವೇಳೆಗೆ 900 ಮುಟ್ಟಿದೆ.
ಇನ್ನೂ ಹಲವು ಜನರು ನಾಪತ್ತೆಯಾಗಿದ್ದು, ಸಾವಿನ ಸಂಖ್ಯೆ ಮತ್ತಷ್ಟು ಹೆಚ್ಚುವ ಸಾಧ್ಯತೆ ಇದೆ ಎಂದು ರಕ್ಷಣಾ ಕಾರ್ಯಕರ್ತರು  ಮಾಹಿತಿ ನೀಡಿದ್ದಾರೆ.

ಮಳೆ ನೀರು, ಪ್ರವಾಹದ ನೀರು ಸುಲಭವಾಗಿ ಹರಿದು ಹೋಗದ ಕಾರಣ ಸಾಂಕ್ರಾಮಿಕ ರೋಗದ ಭೀತಿ ಕಾಡುತ್ತಿದೆ. ಹಲವೆಡೆ ಕಾಲರಾದಿಂದ ಕೆಲವರು ಮೃತಪಟ್ಟಿರುವುದು ದೃಢಪಟ್ಟಿದ್ದು, ಎಲ್ಲೆಡೆ ಕಾಲರಾ ಹರಡುವ ಅಪಾಯ ಇದೆ ಎಂದು ಆರೋಗ್ಯಾಧಿಕಾರಿಗಳು ಎಚ್ಚರಿಸಿದ್ದಾರೆ.

ಚಂಡಮಾರುತಕ್ಕೆ ದೇಶದ ಬಹುತೇಕ ಎಲ್ಲಾ ನಗರ, ಪಟ್ಟಣ ಮತ್ತು ಹಳ್ಳಿಗಳ ಮನೆಗಳ ಚಾವಣಿಗಳು ಹಾರಿ ಹೋಗಿವೆ. ಅಲ್ಲದೆ ಕೆಸರಿನಲ್ಲಿ ಹೂತು ಹೋಗಿವೆ.

ಹೀಗಾಗಿ ಲಕ್ಷಾಂತರ ಜನರು ನಿರಾಶ್ರಿತರಾಗಿದ್ದಾರೆ. ಅವರಲ್ಲಿ ಕೇವಲ 65 ಸಾವಿರ ಜನರಿಗಷ್ಟೇ ತಾತ್ಕಾಲಿಕ ವಸತಿ ಕಲ್ಪಿಸಲಾಗಿದೆ. ರಸ್ತೆಗಳು ಸಂಪೂರ್ಣ ಹಾಳಾಗಿರುವುದರಿಂದ ರಕ್ಷಣಾ ಕಾರ್ಯಾಚರಣೆಗೆ ತೀವ್ರ ತೊಡಕಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.

2010ರಲ್ಲಿ ಪ್ರಬಲ ಭೂಕಂಪಕ್ಕೆ ತುತ್ತಾಗಿದ್ದ ಹೈಟಿ, ಇನ್ನೂ ಅದರಿಂದ ಚೇತರಿಸಿಕೊಂಡಿಲ್ಲ. ಈಗ ಚಂಡಮಾರುತದಿಂದ ಭಾರಿ ಹಾನಿ ಸಂಭವಿಸಿದೆ. ಎಲ್ಲಡೆ ಆಹಾರದ ಕೊರತೆ ಆರಂಭವಾಗಿದೆ.

ಫ್ಲಾರಿಡಾದಲ್ಲಿ ನಾಲ್ಕು ಸಾವು: ಚಂಡಮಾರುತವು ಶನಿವಾರ ಅಮೆರಿಕವನ್ನು ಪ್ರವೇಶಿಸಿದ್ದು, ಫ್ಲಾರಿಡಾದಲ್ಲಿ ನಾಲ್ಕು ಜನರು ಮಳೆ ಸಂಬಂಧಿ ಅವಘಡಗಳಿಗೆ ಬಲಿಯಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ.
*
ಅಂಕಿ ಅಂಶ
900
ಹೈಟಿಯಲ್ಲಿ ಮ್ಯಾಥ್ಯೂಗೆ ಬಲಿಯಾದವರು
233ಕಿ.ಮೀ/ಗಂಟೆ ಹೈಟಿಯಲ್ಲಿ ಚಂಡಮಾರುತದ ವೇಗ
65 ಸಾವಿರ ನಿರಾಶ್ರಿತರಿಗಷ್ಟೇ ವಸತಿ ಕಲ್ಪಿಸಲಾಗಿದೆ
195ಕಿ.ಮೀ/ಗಂಟೆ ಪ್ಲಾರಿಡಾದಲ್ಲಿ ಮ್ಯಾಥ್ಯೂ ವೇಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.