ವಿಶ್ವಸಂಸ್ಥೆ (ಪಿಟಿಐ): ನೆರೆಯ ಉಕ್ರೇನ್ ದೇಶದ ಮೇಲೆ ಅತಿಕ್ರಮಣ ಮಾಡಿರುವುದನ್ನು ರಷ್ಯಾ ಬಲವಾಗಿ ಸಮರ್ಥಿಸಿಕೊಂಡಿದೆ. ವಿಶ್ವ ಸಮುದಾಯದ ವ್ಯಾಪಕ ಟೀಕೆಗೆ ಗುರಿಯಾಗಿರುವ ಉಕ್ರೇನ್ ಅತಿಕ್ರಮಣ ಪ್ರಕರಣ ಸೋಮವಾರ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ತುರ್ತು ಸಭೆಯಲ್ಲಿ ಪ್ರತಿಧ್ವನಿಸಿತು.
ಈ ಸಂದರ್ಭದಲ್ಲಿ ತನ್ನ ಕ್ರಮವನ್ನು ಸಮರ್ಥಿಸಿಕೊಂಡ ರಷ್ಯಾ, ಉಕ್ರೇನ್‌ನ ಪದಚ್ಯುತ ಅಧ್ಯಕ್ಷ ವಿಕ್ಟರ್ ಯನುಕೋವಿಚ್ ಮನವಿ ಹಿನ್ನೆಲೆಯಲ್ಲಿ ರಷ್ಯಾ ಸೈನಿಕರು ಆ ರಾಷ್ಟ್ರದ ಮೇಲೆ ನಿಯಂತ್ರಣ ಸಾಧಿಸಿದ್ದಾರೆ ಎಂದು ತಿಳಿಸಿದರು.
ರಷ್ಯಾ ಸೇನೆಯ ನೆರವು ಕೋರಿ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರಿಗೆ ಉಕ್ರೇನ್ ಪದಚ್ಯುತ ಅಧ್ಯಕ್ಷರು ಬರೆದ ಪತ್ರವನ್ನು ಉಕ್ರೇನ್‌ನಲ್ಲಿರುವ ರಷ್ಯಾದ ರಾಯಭಾರಿ ಪ್ರದರ್ಶಿಸಿದರು.
ಪತ್ರದ ವಿಷಯ ಬಿಸಿ ಚರ್ಚೆಗೆ ನಾಂದಿಯಾಯಿತು. ರಷ್ಯಾ ಸಮರ್ಥನೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ವಿಶ್ವಸಂಸ್ಥೆಯಲ್ಲಿರುವ ಉಕ್ರೇನ್ ಪ್ರತಿನಿಧಿ ಯೂರಿ ಸರ್ಜೆವ್, ಪದಚ್ಯುತ ಅಧ್ಯಕ್ಷರಿಗೆ ವಿದೇಶಿ ನೆರವು ಕೋರುವ ಅಧಿಕಾರ ಇಲ್ಲ ಎಂದರು.
ಸದ್ಯದ ಪರಿಸ್ಥಿತಿಯಲ್ಲಿ ವಿಕ್ಟರ್ ಒಬ್ಬ ಸಾಮಾನ್ಯ ಪ್ರಜೆಯಷ್ಟೇ. ಹೀಗಾಗಿ ಅವರ ಪತ್ರಕ್ಕೆ ಯಾವುದೇ ಮಾನ್ಯತೆ ಇಲ್ಲ. ಉಕ್ರೇನ್ ಸಂಸತ್ತು ಕೈಗೊಳ್ಳುವ ನಿರ್ಧಾರ ಮಾತ್ರ ಅಂತಿಮವಾಗುತ್ತದೆ ಎಂದು ಅವರು ವಾದ ಮಂಡಿಸಿದರು.
ರಷ್ಯಾ ಸೇನೆ ವಾಪಸ್ (ಕೀವ್ ವರದಿ): ಬಹಿರಂಗವಾಗಿ ಉಕ್ರೇನ್ ಬೆಂಬಲಕ್ಕೆ ನಿಂತಿರುವ ಅಮೆರಿಕ ತನ್ನ ನಿಲುವನ್ನು ಮತ್ತಷ್ಟು ಬಿಗಿಗೊಳಿಸಿದೆ. ಈ ನಡುವೆ ವಿದೇಶಾಂಗ ಕಾರ್ಯದರ್ಶಿ ಜಾನ್ ಕೆರಿ ಅವರನ್ನು ಉಕ್ರೇನ್‌ಗೆ ಕಳಿಸಿದೆ.
ಗಲಭೆಗ್ರಸ್ತ ಉಕ್ರೇನ್‌ಗೆ ಒಬಾಮ ಆಡಳಿತ ಆರು ಸಾವಿರ ಕೋಟಿ ರೂಪಾಯಿ ವಿಶೇಷ ಪ್ಯಾಕೇಜ್ ಘೋಷಿಸಿದೆ ಎಂದು ಕೆರಿ ತಿಳಿಸಿದರು.
ಈ ಬೆಳವಣಿಗೆಯಂದಾಗಿ ಮಾಸ್ಕೊ ಮತ್ತು ವಾಷಿಂಗ್ಟನ್ ನಡುವಣ ಶೀತಲ ಸಮರ ತಾರಕಕ್ಕೆ ಏರಿದೆ. ಅಮೆರಿಕ ಮತ್ತು ಐರೋಪ್ಯ ಒಕ್ಕೂಟ ರಷ್ಯಾ ವಿರುದ್ಧ ಕಠಿಣ ಕ್ರಮದ ಎಚ್ಚರಿಕೆ ನೀಡಿದ ಬೆನ್ನಲ್ಲೇ ಉಕ್ರೇನ್ ಗಡಿಯಲ್ಲಿ ಸಮರಾಭ್ಯಾಸದಲ್ಲಿ ತೊಡಗಿದ್ದ ಯೋಧರಿಗೆ ಸೇನಾನೆಲೆಗಳಿಗೆ ಮರಳುವಂತೆ ರಷ್ಯಾ ಆದೇಶಿಸಿದೆ. ಇದರಿಂದಾಗಿ ಗಡಿಯಲ್ಲಿ ಪ್ರಕ್ಷುಬ್ಧ ಸ್ಥಿತಿ ಕೊಂಚ ಮಟ್ಟಿಗೆ ಕರಗಿದೆ.
ಸಂವಿಧಾನ ವಿರೋಧಿ ದಂಗೆ: ಪುಟಿನ್
ಮಾಸ್ಕೊ: ಉಕ್ರೇನ್ ಬೆಳವಣಿಗೆಯನ್ನು ಸಂವಿಧಾನ ಬಾಹಿರವಾದ ದಂಗೆ ಎಂದು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಕರೆದಿದ್ದಾರೆ. ಸ್ಥಳೀಯ ಸುದ್ದಿವಾಹಿನಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಅವರು, ಪದಚ್ಯುತರಾದರೂ ವಿಕ್ಟರ್ ಯನುಕೋವಿಚ್ ಈಗಲೂ ಉಕ್ರೇನ್‌ನ ಏಕಮಾತ್ರ ಅಧ್ಯಕ್ಷ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
‘ಪ್ರಜಾಸತ್ತಾತ್ಮಕ ರೀತಿಯಲ್ಲಿ ಚುನಾವಣೆ ನಡೆದಲ್ಲಿ ವಿಕ್ಟರ್ ಮರು ಆಯ್ಕೆ ಅಸಾಧ್ಯವಾಗಿತ್ತು. ವಿರೋಧ ಪಕ್ಷಗಳು ಸೇನಾದಂಗೆಯ ಮೂಲಕ ಅಧಿಕಾರ ಹಿಡಿಯುವ ಅಗತ್ಯವಿರಲಿಲ್ಲ’ ಎಂದು ಪುಟಿನ್ ಹೇಳಿದ್ದಾರೆ.
ವಿಕ್ಟರ್ ಅವರಿಗೆ ರಷ್ಯಾ ಆಶ್ರಯ ನೀಡದಿದ್ದರೆ ಅವರನ್ನು ಹತ್ಯೆ ಮಾಡಲಾಗುತ್ತಿತ್ತು. ಮಾನವೀಯ ನೆಲೆಯಲ್ಲಿ ರಷ್ಯಾ ಅವರಿಗೆ ಆಶ್ರಯ ನೀಡಿದೆ. ಸಮಯ ಮತ್ತು ಸಂದರ್ಭಕ್ಕೆ ಅನುಗುಣವಾಗಿ ರಷ್ಯಾ ಕ್ರಮ ತೆಗೆದುಕೊಂಡಿದೆ ಎಂದು ಅವರು ರಷ್ಯಾದ ಕ್ರಮವನ್ನು ಸಮರ್ಥಿಸಿಕೊಂಡಿದ್ದಾರೆ. ಉಕ್ರೇನ್ ಜತೆ ರಷ್ಯಾ ಎಂದಿಗೂ ಯುದ್ಧ ಮಾಡಲು ಬಯಸುವುದಿಲ್ಲ ಎಂದು ಅವರು ಇದೇ ವೇಳೆ ಅವರು ಸ್ಪಷ್ಟಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.