ADVERTISEMENT

ಯೆಮನ್: ವಿದ್ಯಾರ್ಥಿಗಳನ್ನು ಹತ್ತಿಕ್ಕಲು ಯತ್ನ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2011, 16:20 IST
Last Updated 16 ಫೆಬ್ರುವರಿ 2011, 16:20 IST

ಸನಾ (ಎಪಿ): ಭಯೋತ್ಪಾದಕ ಸಂಘಟನೆ ಅಲ್‌ಖೈದಾ ವಿರುದ್ಧದ ಹೋರಾಟದಲ್ಲಿ ಅಮೆರಿಕದ ಜೊತೆ ಕೈಜೋಡಿಸಿರುವ ಯೆಮನ್‌ನಲ್ಲಿ ಕಳೆದ ಆರು ದಿನಗಳಿಂದ ನಿರಂತರವಾಗಿ ನಡೆಯುತ್ತಿರುವ ಪ್ರತಿಭಟನೆಯನ್ನು ತಹಬಂದಿಗೆ ತರಲು ಸರ್ಕಾರ ಬುಧವಾರ ಸಾವಿರಾರು ಪೊಲೀಸರನ್ನು ರಾಜಧಾನಿಗೆ ರವಾನಿಸಿದೆ.

ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲು ಹೊರಟಿದ್ದ ಸಾವಿರಾರು ವಿದ್ಯಾರ್ಥಿಗಳನ್ನು ಸಾಮಾನ್ಯ ವಸ್ತ್ರದಲ್ಲಿದ್ದ ಪೊಲೀಸ್ ಅಧಿಕಾರಿಗಳು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಸನಾ ವಿಶ್ವವಿದ್ಯಾಲಯದ ಬಳಿಯೇ ತಡೆದರು. ವಿದ್ಯಾರ್ಥಿಗಳು ಹೊರಬಾರದಂತೆ ವಿ.ವಿಯ ಗೇಟುಗಳಿಗೆ ಸರಪಳಿ ಬಿಗಿಯಲಾಗಿತ್ತು.

ಈ ಸಂದರ್ಭದಲ್ಲಿ ಪೊಲೀಸರೊಂದಿಗೆ ನಡೆದ ಘರ್ಷಣೆಯಲ್ಲಿ ಕನಿಷ್ಠ ನಾಲ್ವರು ಪ್ರತಿಭಟನಾಕಾರರು ಗಾಯಗೊಂಡರು.
ರಾಜಕೀಯ ಸುಧಾರಣೆ ಮತ್ತು ಅಧ್ಯಕ್ಷ ಅಲಿ ಅಬ್ದುಲ್ಲಾ ಸಲೆಹ್ ಅವರ ಪದಚ್ಯುತಿಗೆ ಆಗ್ರಹಿಸುತ್ತಿರುವ ಪ್ರತಿಭಟನಾಕಾರರು, ದೇಶದಲ್ಲಿ ತಾಂಡವವಾಡುತ್ತಿರುವ ಬಡತನ, ನಿರುದ್ಯೋಗ ಮತ್ತು ಭ್ರಷ್ಟಾಚಾರದ ವಿರುದ್ಧ ತಿರುಗಿಬಿದ್ದಿದ್ದಾರೆ.

ಪ್ರಮುಖ ಸಹಭಾಗಿತ್ವ: ಅಲ್‌ಖೈದಾ ಜಾಲವನ್ನು ಬಗ್ಗುಬಡಿಯಲು ಮುಂದಾಗಿರುವ ಅಮೆರಿಕದೊಂದಿಗೆ ಈ ಬಡ ರಾಷ್ಟ್ರದ ಅಧ್ಯಕ್ಷರು ಪ್ರಮುಖ ಸಹಭಾಗಿತ್ವ ಹೊಂದಿದ್ದಾರೆ.

ಸಂಘಟನೆಯ ನೂರಾರು ಹೋರಾಟಗಾರರು ಸಲೆಹ್ ಅವರ ಅಮೆರಿಕ ಬೆಂಬಲಿತ ಪಡೆಗಳೊಂದಿಗೆ ಕದನ ನಡೆಸಿದ್ದಾರೆ.

ಈ ಪರ್ವತ ರಾಷ್ಟ್ರದಲ್ಲಿ ಭಯೋತ್ಪಾದನೆ ವಿರೋಧಿ ಘಟಕದ ಸಾಮರ್ಥ್ಯ ವೃದ್ಧಿಗಾಗಿ ಅಮೆರಿಕದ ಸೇನೆಯು 75 ದಶಲಕ್ಷ ಡಾಲರ್ ವೆಚ್ಚದಲ್ಲಿ ತರಬೇತಿ ಕಾರ್ಯಕ್ರಮವನ್ನು ಆಯೋಜಿಸಿದೆ. ಈ ನಡುವೆ, ಅಮೆರಿಕದೊಂದಿಗೆ ಸಲೆಹ್ ಹೊಂದಿರುವ ನಿಕಟ ಬಾಂಧವ್ಯ ಸಾಕಷ್ಟು ಟೀಕೆಗಳಿಗೂ ಗುರಿಯಾಗಿದೆ.

ಪುತ್ರನ ವಿರುದ್ಧ ಘೋಷಣೆ: 2013ರ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಮತ್ತು ತಮ್ಮ ಪುತ್ರನನ್ನು ಉತ್ತರಾಧಿಕಾರಿಯಾಗಿ ಮಾಡಲು ಯತ್ನಿಸುವುದಿಲ್ಲ ಎಂದು ಸಲೆಹ್ ಪ್ರತಿಭಟನಾಕಾರರಿಗೆ ಭರವಸೆ ನೀಡಿದ್ದಾರೆ. ಈ ಮೂಲಕ ಪ್ರತಿಭಟನೆಯನ್ನು ಶಮನಗೊಳಿಸುವ ಪ್ರಯತ್ನ ನಡೆಸಿದ್ದಾರೆ.

ಆದಾಗ್ಯೂ ಬುಧವಾರದ ಪ್ರತಿಭಟನೆಗಳಲ್ಲಿ ಅಧ್ಯಕ್ಷರ ಪುತ್ರ ಅಹ್ಮದ್ ಅವರ ವಿರುದ್ಧ ಘೋಷಣೆಗಳು ಪ್ರಮುಖವಾಗಿ ಕೇಳಿಬಂದವು.

ಆ್ಯಡನ್ ಮತ್ತು ತಾಜ್ ನಗರಗಳಲ್ಲೂ ಸರ್ಕಾರದ ವಿರುದ್ಧ ಧರಣಿ ನಡೆಯಿತು. ಧರಣಿನಿರತರು ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಇರಾನ್ ಸರ್ಕಾರದಬೆದರಿಕೆಗೆ ಬಗ್ಗದ  ಚಳವಳಿಗಾರರು

ಟೆಹರಾನ್ (ಎಎಫ್‌ಪಿ): ಸರ್ಕಾರದ ವಿರುದ್ಧ ಹೇಳಿಕೆ ನೀಡುವುದು, ಟೀಕಿಸುವುದು ಹಾಗೂ ಪ್ರತಿಭಟನಾಕಾರರಿಗೆ ಬೆಂಬಲ ವ್ಯಕ್ತಪಡಿಸಿದರೆ ಮರಣದಂಡನೆ ವಿಧಿಸಲಾಗುತ್ತದೆ ಎಂಬ ಎಚ್ಚರಿಕೆಗೆ ಹೆದರದ ವಿರೋಧ ಪಕ್ಷಗಳ ಧುರೀಣರು ಹೋರಾಟವನ್ನು ಮುಂದುವರಿಸಿದ್ದಾರೆ.

ವಿರೋಧ ಪಕ್ಷದ ನಾಯಕರಾದ ಹುಸೇನಿ ಮೌಸವಿ ಮತ್ತು ಮೆಹದಿ ಕರೌಬಿ ಮಂಗಳವಾರ ನಡೆಸಿದ ರ್ಯಾಲಿ ಹಿಂಸಾಚಾರಕ್ಕೆ ತಿರುಗಿ ಇಬ್ಬರು ಸತ್ತಿದ್ದರಿಂದ ಸರ್ಕಾರ ಈ ಇಬ್ಬರು ನಾಯಕರ ವಿರುದ್ಧ ಕಿಡಿ ಕಾರಿದೆ.

ಆಡಳಿತ ಪಕ್ಷದ ಸದಸ್ಯರು ಮತ್ತು ಪ್ರಮುಖ ಧರ್ಮ ಗುರುಗಳು ಈ ಇಬ್ಬರು ನಾಯಕರಿಗೆ ಮರಣ ದಂಡನೆ ವಿಧಿಸುವಂತೆ ಆಗ್ರಹಪಡಿಸಿದ್ದಾರೆ.
‘ಈ ದೇಶದ ಒಬ್ಬ ನಿಷ್ಠಾವಂತ ಸೈನಿಕನಂತೆ 50 ವರ್ಷಗಳಿಂದ ನಾನು ದೇಶ ಸೇವೆ ಮಾಡುತ್ತಿದ್ದು, ದೇಶದ ಒಳಿತಿಗಾಗಿ ನಡೆಸುವ ಹೋರಾಟಕ್ಕೆ ಪ್ರತಿಯಾಗಿ ಯಾವುದೇ ಬೆಲೆ ತೆರಲು ಸಿದ್ಧ’ ಎಂದು ಕರೌಬಿ ವೆಬ್‌ಸೈಟ್ ಮೂಲಕ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.