ADVERTISEMENT

ಯೆಮೆನ್‌ನಲ್ಲಿ ಡ್ರೋಣ್ ದಾಳಿ: ಅಲ್‌ಖೈದಾ ಪ್ರಮುಖರ ಬಲಿ

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2011, 19:30 IST
Last Updated 15 ಅಕ್ಟೋಬರ್ 2011, 19:30 IST

ಆಡನ್ (ಎಎಫ್‌ಪಿ): ಅಮೆರಿಕ ನಡೆಸಿದ ಎಂದು ಶಂಕಿಸಲಾಗಿರುವ ಡ್ರೋಣ್ (ಚಾಲಕರಹಿತ ಯುದ್ಧ ವಿಮಾನ) ದಾಳಿಗೆ ಯೆಮೆನ್‌ನಲ್ಲಿ ಅಲ್-ಖೈದಾ ಸಂಘಟನೆಗೆ ಸೇರಿದ ಪ್ರಮುಖ ಏಳು ಉಗ್ರರು ಬಲಿಯಾಗಿದ್ದಾರೆ.

ಉಗ್ರರ ಪ್ರಮುಖ ನೆಲೆಯಾದ ಶಾಬ್ವಾ ಪ್ರಾಂತ್ಯದ ಅಜಾನ್ ಪಟ್ಟಣದ ಮೇಲೆ ಶುಕ್ರವಾರ ಸಂಜೆ ಮೂರು ಕಡೆ ನಡೆದ ದಾಳಿಗಳಲ್ಲಿ ಉಗ್ರ ಅನ್ವರ್ ಅಲ್ ಅವ್ಲಾಕಿಯ ಪುತ್ರ, ಅವ್ಲಾಕಿ ಬುಡಕಟ್ಟು ಜನಾಂಗದ ಮೂವರು ಹಾಗೂ ಅಲ್‌ಖೈದಾ ಮಾಧ್ಯಮ ಮುಖ್ಯಸ್ಥ ಸೇರಿದಂತೆ ಏಳು ಮಂದಿ ಹತರಾಗಿದ್ದಾರೆ ಎಂದು ಯೆಮೆನ್ ರಕ್ಷಣಾ ಸಚಿವಾಲಯ ಶನಿವಾರ ದೃಢಪಡಿಸಿದೆ.

ಎರಡು ವಾರಗಳ ಹಿಂದಷ್ಟೇ ಅಮೆರಿಕ ಸಂಜಾತ ಉಗ್ರ ಅನ್ವರ್ ಅಲ್-ಅವ್ಲಾಕಿ ಹತ್ಯೆ ನಡೆದಿತ್ತು.
ಯೆಮೆನ್ ನೆಲದಲ್ಲಿ ಅಮೆರಿಕವು ಈ ಕಾರ್ಯಾಚರಣೆ ನಡೆಸಿಲ್ಲ ಎಂಬ ತನ್ನ ಹೇಳಿಕೆಯನ್ನು ರಕ್ಷಣಾ ಸಚಿವಾಲಯ ಮತ್ತೊಮ್ಮೆ ಹೇಳಿದ್ದು, ಕಾರ್ಯಾಚರಣೆಯನ್ನು ತಾನೇ ನಡೆಸಿದ್ದಾಗಿ ಹೇಳಿಕೊಂಡಿದೆ.

ಈಜಿಪ್ಟ್‌ನ ಎಕ್ಯೂಎಪಿ (ಅಲ್ ಖೈದಾ ಅರೇಬಿಯನ್ ಪೆನಿನ್ಸುಲಾ) ಸಂಘಟನೆಯ ಮಾಧ್ಯಮ ಮುಖ್ಯಸ್ಥ ಇಬ್ರಾಹಿಂ ಅಲ್- ಬನ್ನಾ ಕೂಡ ಹತನಾಗಿದ್ದಾನೆ. ಈತ ಅಂತರರಾಷ್ಟ್ರೀಯ ಮಟ್ಟದಲ್ಲಿ ದಾಳಿಗೆ ಸಂಚು ರೂಪಿಸುತ್ತಿದ್ದ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.

ಅನ್ವರ್ ಅಲ್-ಅವ್ಲಾಕಿ ಪುತ್ರನಾದ ಅಬ್ದೆರ್ ರೆಹಮಾನ್ (21),  ಅರಬ್ ಪ್ರಾಂತ್ಯದಲ್ಲಿ ಅಲ್‌ಖೈದಾ ಸಂಘಟನೆಯ ಮುಖಂಡನಾದ ಸರ‌್ಹಾನ್ ಅಲ್-ಖುಸ್ಸಾ ಸಹೋದರ ಫಾದ್ ಅಲ್- ಖುಸ್ಸಾ ದಾಳಿಯಿಂದ ಸಾವನ್ನಪ್ಪಿದ್ದಾರೆ ಎಂದು ಅವ್ಲಾಕಿ ಬುಡಕಟ್ಟು ಸದಸ್ಯನೊಬ್ಬ ಹೇಳಿದ್ದಾನೆ. ಅಬ್ದೆರ್ ರೆಹಮಾನ್ ಮತ್ತು ಫಾದ್ ಅಲ್- ಖುಸ್ಸಾ ಅಮೆರಿಕಕ್ಕೆ ಬೇಕಾದವರ ಉಗ್ರರ ಪಟ್ಟಿಯಲ್ಲಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.