ADVERTISEMENT

ರನ್‌ವೇ ಮೇಲೆ ತೆವಳಿದ ಆಮೆಗಳು!

​ಪ್ರಜಾವಾಣಿ ವಾರ್ತೆ
Published 30 ಜೂನ್ 2011, 19:30 IST
Last Updated 30 ಜೂನ್ 2011, 19:30 IST
ರನ್‌ವೇ ಮೇಲೆ ತೆವಳಿದ ಆಮೆಗಳು!
ರನ್‌ವೇ ಮೇಲೆ ತೆವಳಿದ ಆಮೆಗಳು!   

ನ್ಯೂಯಾರ್ಕ್ (ಪಿಟಿಐ): ಸುಮಾರು 150 ಆಮೆಗಳು ಕಡಲ ತೀರವನ್ನು ಅರಸುತ್ತಾ ಬುಧವಾರ ಇಲ್ಲಿನ ಜಾನ್ ಎಫ್ ಕೆನಡಿ (ಜೆಎಫ್‌ಕೆ) ವಿಮಾನನಿಲ್ದಾಣದ ರಸ್ತೆ ಮೇಲೆ ತೆವಳಿ ಬಂದ ಪರಿಣಾಮ ಕೆಲವು ವಿಮಾನಗಳ ಸಂಚಾರ ವಿಳಂಬ ಆಯಿತು.

ಮೊಟ್ಟೆಗಳನ್ನು ಇಡಲು ಕಡಲ ತೀರ ಅರಸಿ ದಾರಿ ತಪ್ಪಿದ್ದ ಈ ಆಮೆಗಳ ಪಥಸಂಚಲನ ರನ್‌ವೇಯಲ್ಲಿ ಬೆಳಿಗ್ಗೆ 6.45ರ ವೇಳೆಗೆ ಆರಂಭವಾಯಿತು.

ಒಂದು ರನ್‌ವೇ ಮತ್ತು ಟ್ಯಾಕ್ಸಿಗಳು ಸಾಗುವ ಪಕ್ಕದ ರಸ್ತೆಯಲ್ಲಿ ಒಮ್ಮೆಗೇ ಅನೇಕ ಆಮೆಗಳು ಕಾಣಿಸಿಕೊಂಡವು. ಈ ಕಾರಣ ಕೆಲ ವಿಮಾನಗಳು ಮತ್ತೊಂದು ರನ್‌ವೇಯಿಂದ ಹೊರಡಬೇಕಾಯಿತು ಎಂದು  ನ್ಯೂಯಾರ್ಕ್ ಮತ್ತು ನ್ಯೂಜೆರ್ಸಿಯ ಬಂದರು ಅಧಿಕಾರಿಗಳು ಹೇಳಿದ್ದಾರೆ.

ವಿಮಾನಗಳ ಹಾರಾಟದಲ್ಲಿ ಸುಮಾರು 30 ನಿಮಿಷಗಳ ವ್ಯತ್ಯಯ ಆಯಿತು. ಜೆಎಫ್‌ಕೆ ವಿಮಾನನಿಲ್ದಾಣವು ಕೊಲ್ಲಿ ಮತ್ತು ನೀರಿರುವ ಪ್ರದೇಶದಿಂದ ಸುತ್ತುವರಿದಿದ್ದು ನ್ಯೂಯಾರ್ಕ್ ಮತ್ತು ನ್ಯೂಜೆರ್ಸಿಯ ಬಂದರು ಪ್ರಾಧಿಕಾರವು ನಿಲ್ದಾಣದ ಮಾಲೀಕತ್ವ ಪಡೆದಿದೆ.

`ಈ ಆಮೆಗಳು ಮೊಟ್ಟೆಗಳನ್ನು ಇಡಲು ಸೂಕ್ತ ಸ್ಥಳಕ್ಕೆ ಹುಡುಕಾಟ ನಡೆಸಿದ್ದವು. ಇವುಗಳು ನೀರಿನಲ್ಲಿಯೇ ಮೊಟ್ಟೆ ಇಡುತ್ತವೆ~ ಎಂದು ಕೃಷಿ ವಿಭಾಗದ ಕರೋಲ್ ತಿಳಿಸಿದ್ದಾರೆ.

`ಈ ರೀತಿಯ ಘಟನೆ ಪ್ರತಿ ವರ್ಷ ಮರುಕಳಿಸುತ್ತದೆ. 2009ರಲ್ಲಿ ಸುಮಾರು 78 ಆಮೆಗಳು ರನ್‌ವೇ ಬಳಿ ಕಾಣಿಸಿಕೊಂಡಿದ್ದವು~ ಎಂದು ಪ್ರಾಧಿಕಾರದ ವಕ್ತಾರ ರಾನ್ ಮ್ಯಾರಿಸ್ಕೊ ಹೇಳಿದ್ದಾರೆ.

ಈ ಸುದ್ದಿ ತಿಳಿಯುತ್ತಿದ್ದಂತೆಯೇ ಸಾವಿರಾರು ಆಸಕ್ತರು ಟ್ವಿಟರ್‌ನಲ್ಲಿ ತಮ್ಮ ಅನಿಸಿಕೆಗಳನ್ನು ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.