ADVERTISEMENT

ರಬ್ಬಾನಿ ಖಾತೆ ಬದಲಾವಣೆ?

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2012, 19:30 IST
Last Updated 10 ಏಪ್ರಿಲ್ 2012, 19:30 IST

ಇಸ್ಲಾಮಾಬಾದ್ (ಪಿಟಿಐ):  ಪಾಕಿಸ್ತಾನದ ಅಧ್ಯಕ್ಷ ಆಸಿಫ್ ಆಲಿ ಜರ್ದಾರಿ ಹೇಳಿಕೆಯನ್ನು ಅಮೆರಿಕದ ರಾಜತಾಂತ್ರಿಕರ ಎದುರು   ಅಲ್ಲಗಳೆದಿದ್ದ ವಿದೇಶಾಂಗ ಸಚಿವೆ ಹೀನಾ ರಬ್ಬಾನಿ ಖರ್ ಅವರ ಖಾತೆ ಬದಲಾಗುವ ಬಗ್ಗೆ ಊಹಾಪೋಹಗಳು ಕೇಳಿ ಬಂದಿವೆ.

ದೇಶದ ಮೊದಲ ಮಹಿಳಾ ವಿದೇಶಾಂಗ ಸಚಿವೆಯಾದ ಹೀನಾ ಅವರು ಜರ್ದಾರಿ ಅವರ ಇತ್ತೀಚಿನ ಭಾರತ ಭೇಟಿಯ ನಿಯೋಗದಲ್ಲೂ ಇರಲಿಲ್ಲ. ಒಂದು ವೇಳೆ ಹೀನಾ ಅವರ ಖಾತೆ ಬದಲಾಗಿದ್ದೇ ಆದರೆ, ಅವರ ಸ್ಥಾನಕ್ಕೆ ಒಳಾಡಳಿತ ಸಚಿವ ರೆಹಮಾನ್ ಮಲಿಕ್ ಅವರು ಬರುವ ಸಾಧ್ಯತೆ ಇದೆ ಎನ್ನಲಾಗಿದೆ. ಮಲಿಕ್ ಅವರು ಜರ್ದಾರಿ ಭಾರತ ಭೇಟಿ ತಂಡದಲ್ಲಿದ್ದರು.

ಅಮೆರಿಕದ ರಾಜತಾಂತ್ರಿಕರೊಬ್ಬರ ಜೊತೆಗಿನ ಸಭೆಯ ವೇಳೆ ನಡೆದ ಈ ಬೆಳವಣಿಗೆಯ ನಾಲ್ಕು ದಿನಗಳ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಪ್ರಧಾನಿ ಯೂಸುಫ್ ರಜಾ ಗಿಲಾನಿ, ಕಾಶ್ಮೀರ ಸೇರಿದಂತೆ ಹಲವು ಸಮಸ್ಯೆಗಳನ್ನು ಬಗೆಹರಿಸಲು ಭಾರತದೊಂದಿಗೆ `ಹೊಸ ತಂಡ~ ಮಾತುಕತೆ ನಡೆಸಲಿದೆ ಎಂದು ಹೇಳಿರುವುದು ಈ ವದಂತಿಗೆ ಪುಷ್ಟಿ ನೀಡಿದೆ. ಪ್ರಧಾನಿ  ಹೇಳಿಕೆ ವಿದೇಶಾಂಗ ಇಲಾಖೆ ಅಧಿಕಾರಿಗಳು ಸೇರಿದಂತೆ ಎಲ್ಲರನ್ನೂ ಆಶ್ಚರ್ಯಚಕಿತರನ್ನಾಗಿಸಿದೆ.

ಅಮೆರಿಕದ ಉಪ ವಿದೇಶಾಂಗ ಕಾರ್ಯದರ್ಶಿ ಥಾಮಸ್ ನೈಡ್ಸ್ ನೇತೃತ್ವದ ತಂಡ ಇದೇ 4ರಂದು ದೇಶಕ್ಕೆ ಭೇಟಿ ನೀಡಿದ್ದಾಗ ಲಾಹೋರ್‌ನಲ್ಲಿ ಸಭೆ ಆಯೋಜಿಸಲಾಗಿತ್ತು. ಆಗ, ಷಿಕಾಗೊದಲ್ಲಿ ಆಫ್ಘಾನಿಸ್ತಾನಕ್ಕೆ ಸಂಬಂಧಿಸಿದಂತೆ ಮೇ ತಿಂಗಳು ನಡೆಯಲಿರುವ ಸಭೆಯಲ್ಲಿ ಪಾಕಿಸ್ತಾನದ ಪಾಲ್ಗೊಳ್ಳುವಿಕೆ ಕುರಿತು ನೈಡ್ಸ್ ಅವರು ಪ್ರಶ್ನಿಸಿದ್ದರು. `ಅಮೆರಿಕ ಅಧಿಕೃತ ಆಹ್ವಾನ ನೀಡಿದರೆ ಪಾಕಿಸ್ತಾನ ಹೆಚ್ಚು ಜವಾಬ್ದಾರಿಯುತವಾಗಿ ನಡೆದುಕೊಳ್ಳುತ್ತದೆ~ ಎಂದು ಜರ್ದಾರಿ ಇದಕ್ಕೆ ಪ್ರತಿಕ್ರಿಯಿಸಿದ್ದರು.

 ಆದರೆ ಇದೇ ವೇಳೆ ಮಧ್ಯಪ್ರವೇಶಿಸಿದ್ದ ಹೀನಾ, ಅಮೆರಿಕ- ಪಾಕ್ ಸಂಬಂಧದ ಬಗ್ಗೆ ಸಂಸತ್ತಿನ ಜಂಟಿ ಅಧಿವೇಶನ ನಡೆಸುತ್ತಿರುವ ಪರಿಶೀಲನಾ ಕಾರ್ಯ ಮುಗಿಯುವವರೆಗೂ ಈ ಬಗ್ಗೆ ಯಾವುದೇ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದ್ದರು.

ವಿದೇಶಾಂಗ ನೀತಿಯ ನಿರ್ಣಾಯಕ ಸಂಗತಿಗಳ ಬಗ್ಗೆ ಪ್ರಮುಖ ನಿರ್ಧಾರ ಕೈಗೊಳ್ಳುವ ಅಧ್ಯಕ್ಷರ ಎದುರು, ವಾದಕ್ಕಿಳಿಯುವ ದನಿಯಲ್ಲಿ ಖರ್ ಮಾತನಾಡಿದ್ದು ಕಂಡು ಅಮೆರಿಕದ ನಿಯೋಗ ಅಚ್ಚರಿಗೆ ಒಳಗಾಗಿತ್ತು ಎಂದು ಮೂಲಗಳು ತಿಳಿಸಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.